More

    ಸಂಸತ್ತಿನಲ್ಲಿ ಭದ್ರತಾ ಲೋಪ: ಸಂಚಿನ ಹಿಂದೆ 6 ಮಂದಿ, ಮೈಸೂರು, ಮಹಾರಾಷ್ಟ್ರ, ಹರಿಯಾಣ ನಡುವೆ ಲಿಂಕ್​ ಹೇಗೆ?

    ನವದೆಹಲಿ: ಸಂಸತ್​ ಭವನದಲ್ಲಿಂದು ಕಲಾಪ ನಡೆಯುವ ಸಮಯದಲ್ಲೇ ಅಪರಿಚಿತರಿಬ್ಬರು ಹಳದಿ ಬಣ್ಣ ಹೊರ ಸೂಸುವ ವಸ್ತುವನ್ನು ಹಿಡಿದು ಪ್ರೇಕ್ಷಕರ ಗ್ಯಾಲರಿಯಿಂದ ಸ್ಪೀಕರ್​ ಕಚೇರಿಯತ್ತ ನುಗ್ಗುವ ಮೂಲಕ ಆತಂಕದ ವಾತಾವರಣ ಸೃಷ್ಟಿಮಾಡಿದರು. 2001ರ ಡಿ.13ರಂದು ಹಳೆಯ ಸಂಸತ್​ ಭವನದ ಮೇಲೆ ನಡೆದ ಉಗ್ರ ದಾಳಿಗೆ ಇಂದು 22 ವರ್ಷ. ಇದೇ ದಿನ ಮತ್ತೊಂದು ಕರಾಳ ಘಟನೆಗೆ ದೇಶದ ಜನತೆ ಸಾಕ್ಷಿಯಾಗಿರುವುದು ವಿಪರ್ಯಾಸ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರನ್ನು ಇದೀಗ ಬಂಧಿಸಲಾಗಿದೆ.

    ಸದನದ ಒಳಗೆ ಕಲರ್​ ಗ್ಯಾಸ್​ ಕ್ಯಾನಿಸ್ಟರ್​ನಿಂದ ಗದ್ದಲ ಎಬ್ಬಿಸಿದ ಇಬ್ಬರು ಕಿಡಿಗೇಡಿಗಳನ್ನು ಸಾಗರ್​ ಶರ್ಮ ಮತ್ತು ಮನೋರಂಜನ್​ ಡಿ ಎಂದು ಗುರುತಿಸಲಾಗಿದೆ. ಇದೇ ಸಂದರ್ಭದಲ್ಲಿ ಸಂಸತ್ತಿನ ಹೊರಭಾಗದಲ್ಲಿ ಓರ್ವ ಮಹಿಳೆ ಮತ್ತು ಯುವಕ ಕಲರ್ ಗ್ಯಾಸ್​ ಸಿಂಪಡಿಸಿ, ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಇವರನ್ನು ಅನ್ಮೋಲ್​ ಶಿಂಧೆ ಮತ್ತು ನೀಲಂ ಎಂದು ಗುರುತಿಸಲಾಗಿದೆ.

    ನಾಲ್ವರು ಸಹ ಒಬ್ಬರಿಗೊಬ್ಬರು ಪರಿಚಿತರು ಎಂಬುದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಸಂಪರ್ಕದಲ್ಲಿದ್ದ ನಾಲ್ವರು ಸಂಚು ರೂಪಿಸಿದ್ದರು. ಈ ಸಂಚಿನಲ್ಲಿ ಒಟ್ಟು 6 ಮಂದಿ ಭಾಗಿಯಾಗಿದ್ದಾರೆ. ಇಬ್ಬರು ಸದನದ ಒಳಗೆ, ಮತ್ತಿಬ್ಬರು ಸಂಸತ್ತಿನ ಹೊರಗೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದರೆ, ಇನ್ನಿಬ್ಬರು ಶಂಕಿತರು ಪರಾರಿಯಾಗಿದ್ದಾರೆ. ಅವರಿಗಾಗಿ ತನಿಖಾ ಏಜೆನ್ಸಿಗಳು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿವೆ.

    ಐವರು ವ್ಯಕ್ತಿಗಳು ಗುರುಗ್ರಾಮ್‌ನಲ್ಲಿ ಲಲಿತ್ ಝಾ ಎಂದು ಗುರುತಿಸಲಾದ ವ್ಯಕ್ತಿಯ ನಿವಾಸದಲ್ಲಿ ಒಟ್ಟಿಗೆ ತಂಗಿದ್ದರು ಎಂದು ಮೂಲಗಳು ತಿಳಿಸಿವೆ. ಸದ್ಯ ಐವರ ಗುರುತು ದೃಢಪಟ್ಟಿದ್ದು, ಆರನೇ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಶಂಕರ್​ ಲಾಲ್​ ಶರ್ಮರ ಪುತ್ರ ಸಾಗರ್​ ಶರ್ಮ ಎಂಬಾತ ಮೈಸೂರು ಲೋಕಸಭಾ ಸಂಸದ ಪ್ರತಾಪ್​ ಸಿಂಹ ಹೆಸರಿನಲ್ಲಿ ಪಾಸ್​ ಪಡೆದು ಪ್ರೇಕ್ಷಕರ ಗ್ಯಾಲರಿಗೆ ಆಗಮಿಸಿದ್ದ. ಮತ್ತೊಬ್ಬ ಆರೋಪಿ ಮನೋರಂಜನ್​ ಡಿ ಮೈಸೂರಿನ ನಿವಾಸಿ. ಬೆಂಗಳೂರಿನ ವಿವೇಕಾನಂದ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್​ ಸೈನ್ಸ್​ನಲ್ಲಿ ಬಿಇ ವ್ಯಾಸಾಂಗ ಮಾಡಿದ್ದಾನೆ. ಇವರಿಬ್ಬರು ಪ್ರೇಕ್ಷಕರ ಗ್ಯಾಲರಿಯ ಚೇಂಬರ್​ನಿಂದ ಜಿಗಿದು ಸ್ಪೀಕರ್​ ಕುರ್ಚಿಯತ್ತ ನುಗ್ಗಿದರು. ತಕ್ಷಣ ಅವರನ್ನು ಅಲ್ಲಿಯೇ ಇದ್ದ ಕೆಲವು ಸಂಸದರು ಹಿಡಿದುಕೊಂಡರು.

    ಸಂಸತ್ತಿನ ಹೊರಗಡೆ ಕಲರ್​ ಗ್ಯಾಸ್​ ಸಿಂಪಡಿಸಿ ಸರ್ಕಾರಿ ವಿರೋಧಿ ಘೋಷಣೆ ಕೂಗುತ್ತಿದ್ದ ನೀಲಂ ಎಂಬಾಕೆ, ಹರಿಯಾಣದ ಹಿಸರ್​ನಲ್ಲಿ ಪಿಜಿಯಲ್ಲಿ ವಾಸವಿದ್ದಳು. ಹರಿಯಾಣದ ನಾಗರಿಕ ಸೇವಾ ಪರೀಕ್ಷೆಗೆ ತಯಾರಾಗುತ್ತಿದ್ದಳು. ಇನ್ನೊಬ್ಬ ಆರೋಪಿ ಅನ್ಮೋಲ್​ ಶಿಂಧೆ ಮಹಾರಾಷ್ಟ್ರ ಲಾತೂರ್ ಜಿಲ್ಲೆಯವನು. ನೀಲಂ ಅಥವಾ ಅನ್ಮೋಲ್ ಮೊಬೈಲ್ ಫೋನ್ ತಂದಿರಲಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಅವರ ಬಳಿ ಯಾವುದೇ ಬ್ಯಾಗ್ ಅಥವಾ ಗುರುತಿನ ಪುರಾವೆಯೂ ಇರಲಿಲ್ಲ. ಅವರು ತಾವಾಗಿಯೇ ಸಂಸತ್ತನ್ನು ತಲುಪಿದರು ಮತ್ತು ಯಾವುದೇ ಸಂಘಟನೆಯೊಂದಿಗೆ ತಮ್ಮ ಸಂಪರ್ಕವನ್ನು ನಿರಾಕರಿಸಿದ್ದಾರೆ. ಪೊಲೀಸರು ವಿಚಾರಣೆಗಾಗಿ ವಿಶೇಷ ತಂಡವನ್ನು ರಚಿಸಿದ್ದು, ತನಿಖೆ ಮುಂದುವರಿದಿದೆ.

    ಲೋಕಸಭೆ ಸ್ಪೀಕರ್​ ಹೇಳಿದ್ದೇನು?
    ಘಟನೆಯ ಬಗ್ಗೆ ಮಾತನಾಡಿರುವ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಶೂನ್ಯ ಸಮಯದಲ್ಲಿ ನಡೆದ ಘಟನೆಯ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ದೆಹಲಿ ಪೊಲೀಸರಿಗೆ ಅಗತ್ಯ ಸೂಚನೆಗಳನ್ನು ಸಹ ನೀಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಇದು ಕೇವಲ ಹೊಗೆ ಎಂದು ಕಂಡುಬಂದಿದೆ. ಹೊಗೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದರು ಹೇಳಿದರು. ಸದ್ಯ ಇಬ್ಬರನ್ನೂ ಬಂಧಿಸಲಾಗಿದ್ದು, ಅವರಲ್ಲಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂಸತ್ತಿನ ಹೊರಗಿದ್ದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದರು. (ಏಜೆನ್ಸೀಸ್​)

    ಸಂಸತ್​ ಭದ್ರತಾ ನಿಯಮಗಳಲ್ಲಿ ಬದಲಾವಣೆ: ಬಾಡಿ ಸ್ಕ್ಯಾನರ್‌ಗಳ ಅಳವಡಿಕೆ

    ಸಂಸತ್​ ಭದ್ರತಾ ನಿಯಮಗಳಲ್ಲಿ ಬದಲಾವಣೆ: ಬಾಡಿ ಸ್ಕ್ಯಾನರ್‌ಗಳ ಅಳವಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts