More

    ಯಳಂದೂರು ಪಪಂಗೆ 6.20 ಕೋಟಿ ರೂ. ವಿಶೇಷ ಅನುದಾನ

    ಯಳಂದೂರು: ಯಳಂದೂರು ಪಟ್ಟಣ ಪಂಚಾಯಿತಿಗೆ 15ನೇ ಹಣಕಾಸು ಪ್ರೋತ್ಸಾಹಧನ ಯೋಜನೆಯಡಿಯಲ್ಲಿ ಪಟ್ಟಣದ ಅಭಿವೃದ್ಧಿಗೆ 6.20 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಮಾಹಿತಿ ನೀಡಿದರು.

    ಮಂಗಳವಾರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಪಟ್ಟಣದ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಂತಹಂತವಾಗಿ ಇಲ್ಲಿಗೆ ಅನುದಾನ ಬಿಡುಗಡೆಗೊಳಿಸಲು ನಾನು ಶ್ರಮಪಡುತ್ತೇನೆ. ಈಗಾಗಲೇ ಇಲ್ಲಿನ ಕುಡಿಯುವ ನೀರಿನ ಯೋಜನೆಗೂ ಚಾಲನೆ ಸಿಕ್ಕಿದೆ. ಪಟ್ಟಣದ ಇಂದಿರಾ ಕ್ಯಾಂಟೀನ್ ಬಳಿ ಕೆಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೂ ಸ್ಥಳ ಪರಿಶೀಲನೆ ನಡೆಸಲಾಗಿದೆ. ಶಿಕ್ಷಕರ ಭವನ ಮತ್ತು ಪತ್ರಕರ್ತರ ಭವನಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ. ಅಲ್ಲದೆ ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಶಿಥಿಲ ಶೌಚಗೃಹ ತೆರವುಗೊಳಿಸಿ ಇಲ್ಲಿ ಹೊಸದಾಗಿ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗುವುದು, ಅಲ್ಲದೆ ಪಟ್ಟಣವನ್ನು ವಿಸ್ತರಿಸುವ ನಿಟ್ಟಿನಲ್ಲಿ ಟೌನ್ ಪ್ಲಾನಿಂಗ್ ಅಥಾರಿಟಿಗೆ ಪಕ್ಕದ ವೈ.ಕೆ.ಮೋಳೆ, ಅಂಬಳೆ, ಯರಿಯೂರು ಗ್ರಾಮದ ಕೆಲ ಭಾಗವನ್ನು ಸೇರಿಸಿಕೊಂಡು ಇದನ್ನು ವಿಸ್ತರಿಸುವ ಗುರಿಯೂ ಇದೆ ಎಂದು ಮಾಹಿತಿ ನೀಡಿದರು.

    ಅಲ್ಲದೆ ಪಟ್ಟಣ ಪಂಚಾಯಿತಿಯಲ್ಲಿ ವಿವಿಧ ಆದಾಯದ ಮೂಲಗಳಿಂದ 70 ಲಕ್ಷ ರೂ. ಆದಾಯ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದ್ದು, ಇದರಲ್ಲಿ 54 ಲಕ್ಷ ರೂ. ಮಾತ್ರ ಬಂದಿದೆ. ಇನ್ನುಳಿದ ಆದಾಯವನ್ನು ಸಂಗ್ರಹಿಸುವತ್ತ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶ್ರಮ ವಹಿಸಬೇಕು. ಕಂದಾಯ ವಸೂಲಾತಿಯನ್ನು ಸಂಗ್ರಹಿಸಿ ಪಟ್ಟಣ ಪಂಚಾಯಿತಿಯ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಆಡಳಿತಾಧಿಕಾರಿ ತಹಸೀಲ್ದಾರ್ ಜಯಪ್ರಕಾಶ್, ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಪಪಂ ಸದಸ್ಯರಾದ ಮಹೇಶ್, ಮಹದೇವನಾಯಕ, ಸವಿತಾ ಬಸವರಾಜು, ಕೆ.ಮಲ್ಲಯ್ಯ, ಮಂಜು, ಪ್ರಭಾವತಿ ರಾಜಶೇಖರ್, ಬಿ.ರವಿ, ಸುಶೀಲಾ ಪ್ರಕಾಶ್, ಲಕ್ಷ್ಮೀಮಲ್ಲು, ಶಾಂತಮ್ಮ ನಿಂಗರಾಜು, ಜಯಲಕ್ಷ್ಮೀ, ರೇಖಾ, ಲಕ್ಷ್ಮೀ, ವಿಜಯ, ಮಲ್ಲಿಕಾರ್ಜುನ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts