More

    5ಎ ಯೋಜನೆ ಪರವಾಗಿರುವ ಕಾಂಗ್ರೆಸ್‌ಗೆ ಬೆಂಬಲ

    ಮಸ್ಕಿ: ಎನ್‌ಆರ್‌ಬಿಸಿ 5 ಎ ಕಾಲುವೆ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಸದನದಲ್ಲಿ ಮೂರು ಬಾರಿ ಧ್ವನಿ ಎತ್ತಿದ್ದಾರೆ.

    ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ 5 ಎ ಕಾಲುವೆ ಯೋಜನೆ ಜಾರಿಗೊಳಿಸುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭರವಸೆ ನೀಡಿರುವುದರಿಂದ ಆರ್.ಬಸನಗೌಡ ತುರ್ವಿಹಾಳ ಅವರನ್ನು ಬೆಂಬಲಿಸಲು ನಿರ್ಧರಿಸಲಾಗಿದೆ ಎಂದು ನೀರಾವರಿ ಹೋರಾಟ ಸಮಿತಿ ಗೌರವಾಧ್ಯಕ್ಷ ತಿಮ್ಮನಗೌಡ ಚಿಲ್ಕರಾಗಿ ಹೇಳಿದರು.

    5ಎ ಕಾಲುವೆ ಅನುಷ್ಠಾನಕ್ಕೆ ಭರವಸೆ

    ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಮಸ್ಕಿ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಇತರ ಕಾಂಗ್ರೆಸ್ ನಾಯಕರು ಹೋರಾಟ ಸ್ಥಳಕ್ಕೆ ಆಗಮಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ 5ಎ ಕಾಲುವೆ ಯೋಜನೆ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲೆಂದು ರೈತರೆಲ್ಲ ಬೆಂಬಲಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.


    ಇದನ್ನೂ ಓದಿ: ನಮ್ಮ ತಾಳ್ಮೆ ಪರೀಕ್ಷಿಸದಿರಿ ಎಂದು ಅಧಿಕಾರಿಗಳಿಗೆ 5ಎ ನಾಲೆ ಹೋರಾಟಗಾರರ ಎಚ್ಚರಿಕೆ

    ಯೋಜನೆ ಜಾರಿಗೆ ಪತ್ರ ವ್ಯವಹಾರ ನಡೆಸಿಲ್ಲ

    ಹೋರಾಟ ಸಮಿತಿ ಅಧ್ಯಕ್ಷ ಬಸವರಾಜಪ್ಪಗೌಡ ಹರ್ವಾಪೂರು ಮಾತನಾಡಿ, ಕಳೆದ ಮೂರು ಅವಧಿಗೆ ಪ್ರತಾಪಗೌಡರನ್ನು ಯಾವ ಪಕ್ಷದಲ್ಲಿ ಇದ್ದರೂ ಬೆಂಬಲಿಸಿದ್ದೇವೆ. ಒಂದಲ್ಲ ಒಂದು ದಿನ 5ಎ ಕಾಲುವೆ ಯೋಜನೆ ಜಾರಿಗೊಳಿಸುತ್ತಾರೆ ಎಂದು ಆಶಿಸಿದ್ದೆವು. ಆದರೆ, ಗೆದ್ದ ನಂತರ ಯೋಜನೆ ಅನುಷ್ಠಾನಕ್ಕೆ ನೂರೆಂಟು ಕುಂಟು ನೆಪಗಳನ್ನು ಪ್ರತಾಪಗೌಡ ಹೇಳಿದ್ದಾರೆ. ಶಾಸಕರಾಗಿದ್ದಾಗ ಯೋಜನೆ ಜಾರಿಗಾಗಿ ಯಾವೊಂದು ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಿಲ್ಲ. ನಡೆಸಿದ್ದರೆ ದಾಖಲಾತಿ ನೀಡುವಂತೆ ಕೇಳಿದರೂ ಕೊಟ್ಟಿಲ್ಲ ಎಂದು ದೂರಿದರು.


    ಶಾಸಕ ಬಸನಗೌಡ ತುರ್ವಿಹಾಳ ಅಲ್ಪ ಅವಧಿಯಲ್ಲೇ ಪ್ರಾಮಾಣಿಕ ಪ್ರಯತ್ನ ನಡೆಸಿದ್ದು, ಈ ಬಾರಿ ಕೂಡ ಅವರನ್ನೇ ಬೆಂಬಲಿಸುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯೋಜನೆಗೆ ಎಷ್ಟೇ ಹಣ ಖರ್ಚು ಆದರೂ ಯೋಜನೆ ಜಾರಿಗೊಳಿಸಲು ಬದ್ಧ ಎಂದು ಸಿದ್ದರಾಮಯ್ಯ ಹೇಳಿರುವುದರಿಂದ 58 ಹಳ್ಳಿಗಳ ರೈತಾಪಿ ವರ್ಗದವರು ಕಾಂಗ್ರೆಸ್ ಬೆಂಬಲಿಸಲಿದ್ದಾರೆಂದು ಬಸವರಾಜಪ್ಪಗೌಡ ಹೇಳಿದರು. ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಡ್ಡೆಪ್ಪ ದೇವರಮನಿ, ಖಜಾಂಚಿ ಶಿವನಗೌಡ ಕೈರವಾಡಗಿ, ಬಸನಗೌಡ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts