More

    ಯೋಧನ ಹೆಸರಿನಲ್ಲಿ 58 ಸಾವಿರ ರೂ. ವಂಚನೆ

    ಬೆಂಗಳೂರು: ಆನ್​ಲೈನ್ ಮಾರ್ಕೆಟ್​ನಲ್ಲಿ ಸ್ಕೂಟರ್ ಮಾರಾಟ ಮಾಡುತ್ತಿರುವುದಾಗಿ ಯೋಧನ ಹೆಸರಿನಲ್ಲಿ ಜಾಹೀರಾತು ಪ್ರಕಟಿಸಿದ್ದ ವ್ಯಕ್ತಿ, ಗ್ರಾಹಕನಿಂದ 58 ಸಾವಿರ ರೂ. ಪಡೆದು ವಂಚಿಸಿದ್ದಾನೆ.

    ಕಗ್ಗದಾಸಪುರದ ನವನೀತ್​ಕೃಷ್ಣ ವಂಚನೆಗೆ ಒಳಗಾದವರು. ಪ್ರಮಿಳ್ ಕುಮಾರ್ ಮತ್ತು ಅಜಿತ್​ಕುಮಾರ್ ಎಂಬುವರ ವಿರುದ್ಧ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಸ್ಕೂಟರ್ ಖರೀದಿಗೆ ನಿರ್ಧರಿಸಿದ್ದ ನವನೀತ್ ಆನ್​ಲೈನ್ ಮಾರ್ಕೆಟ್​ನಲ್ಲಿ ಜಾಹೀರಾತು ಗಮನಿಸಿ ಸ್ಕೂಟರ್ ಮಾಲೀಕನನ್ನು ಸಂರ್ಪಸಿದ್ದರು. ಪ್ರಮಿಳ್ ಕುಮಾರ್ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದ ವಂಚಕ ತಾನು ಭಾರತೀಯ ಸೇನೆಯಲ್ಲಿ ಯೋಧ ಎಂದು ಹೇಳಿದ್ದ. 20 ಸಾವಿರ ರೂ.ಗೆ ಸ್ಕೂಟರ್ ಮಾರಾಟ ಮಾಡುತ್ತಿದ್ದೇನೆ. ದೊಮ್ಮಲೂರಿನ ಸೇನಾ ಶಿಬಿರದಲ್ಲಿ ನಿಲ್ಲಿಸಲಾಗಿದೆ. ಅಲ್ಲಿಂದ ಹೊರಗೆ ತರಲು 3 ಸಾವಿರ ರೂ. ಶುಲ್ಕ ಪಾವತಿಸಬೇಕು ಎಂದಿದ್ದ. ಆತನ ಮಾತನ್ನು ನಂಬಿದ್ದ ನವನೀತ್ 3 ಸಾವಿರ ರೂ.ಗಳನ್ನು ಆನ್​ಲೈನ್ ಬ್ಯಾಂಕಿಂಗ್ ಮೂಲಕ ವರ್ಗಾಯಿಸಿದ್ದರು.

    ಬಳಿಕ ವಾಹನದ ಬೆಲೆಯ ಅರ್ಧ ಹಣ ಪಾವತಿಸಿದರೆ ನಿಮ್ಮ ಬಳಿ ಸ್ಕೂಟರ್ ಕಳುಹಿಸುತ್ತೇನೆ ಎಂದಿದ್ದ. ಆಗ ಪ್ರಮಿಳ್ ಖಾತೆಗೆ ನವನೀತ್ 7 ಸಾವಿರ ರೂ. ಸಂದಾಯ ಮಾಡಿದ್ದಾರೆ. ನಂತರ ಪೂರ್ತಿ ಹಣ ಕೊಟ್ಟರೆ ಮಾತ್ರ ಸ್ಕೂಟರ್ ಕಳುಹಿಸುವುದಾಗಿ ಹೇಳಿ 10 ಸಾವಿರ ರೂ. ಸಂದಾಯ ಮಾಡಿಸಿಕೊಂಡಿದ್ದಾನೆ. ಬಳಿಕ ಸ್ಕೂಟರ್ ತಂದು ಕೊಡುವಾಗ ಹಣ ವಾಪಸ್ ಕೊಡುತ್ತೇನೆ ಎಂದು ನಂಬಿಸಿ 38 ಸಾವಿರ ರೂ.ಗಳನ್ನು ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದಾನೆ. ಆನಂತರ ಸ್ಕೂಟರ್ ತಂದು ಕೊಡಲು ಸಬೂಬು ಹೇಳಿದ್ದಾನೆ.

    ಅನುಮಾನಗೊಂಡ ನವನೀತ್ ವಾಹನದ ದಾಖಲೆಗಳನ್ನು ತೋರಿಸುವಂತೆ ಕೇಳಿದ್ದಾರೆ. ಈ ವೇಳೆ ಬೇರೊಬ್ಬರ ಹೆಸರಿನ ಆಧಾರ್​ಕಾರ್ಡ್, ಸೇನೆಯ ಗುರುತಿನ ಚೀಟಿಯನ್ನು ವಾಟ್ಸ್​ಆಪ್​ಗೆ ಕಳುಹಿಸಿದ್ದಾನೆ. ವಂಚಿಸುತ್ತಿರುವುದು ಗೊತ್ತಾಗಿ ಸ್ಕೂಟರ್ ಬೇಡ, ತಾನು ಕೊಟ್ಟ ಹಣ ವಾಪಸ್ ಕೊಡುವಂತೆ ಕೇಳಿದ್ದಾರೆ. ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts