More

    508 ಶಾಲೆಯಲ್ಲಿ ಬಲಿಗೆ ಕಾದಿವೆ ವಿದ್ಯುತ್‌ಲೈನ್ ; ಜಿಲ್ಲಾಧಿಕಾರಿ ಸೂಚನೆಗೂ ಡೋಂಟ್‌ಕೇರ್ ; ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ

    ತುಮಕೂರು : ಜಿಲ್ಲೆಯ 508 ಶಾಲೆಗಳ ಆವರಣದಲ್ಲಿ ವಿದ್ಯುತ್ ಕಂಬ ಹಾಗೂ ಜೋತು ಬಿದ್ದಿರುವ ವಿದ್ಯುತ್ ತಂತಿಗಳು ಮತ್ತಷ್ಟು ಮಕ್ಕಳ ಬಲಿಗಾಗಿ ಕಾಯುತ್ತಿರುವ ಆಘಾತಕಾರಿ ವಿಷಯ ಜಿಲ್ಲಾಡಳಿತದ ಗಮನಕ್ಕಿದ್ದರೂ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ.

    ಮಾ. 10 ರಂದು ನಡೆದಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಕ್ಕಳ ವಿಶೇಷ ಗ್ರಾಮಸಭೆಗಳಲ್ಲಿ ಮಕ್ಕಳು ಹಲವಾರು ಶಾಲೆಗಳ ಆವರಣದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿರುವ ಕುರಿತು ಹಾಗೂ ವಿದ್ಯುತ್ ತಂತಿಗಳು ಜೋತುಬಿದ್ದಿರುವ ಕುರಿತು ಮತ್ತು ಶಾಲೆ ಆವರಣದಲ್ಲಿ ಟ್ರಾನ್‌ಸ್ಾರ್ಮರ್ ಅಳವಡಿಸಿರುವ ಕುರಿತು ಸಲ್ಲಿಕೆಯಾಗಿರುವ ದೂರುಗಳ ಬಗ್ಗೆ ಚರ್ಚೆಯಾಗಿದ್ದರೂ ಕ್ರಮವಹಿಸಿಲ್ಲ.

    ಸಭೆಯಲ್ಲಿ ವಿಷಯ ತಿಳಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು, ಜಿಲ್ಲೆಯ ಉಭಯ ಡಿಡಿಪಿಐಗಳಿಂದ ಸಮಸ್ಯೆ ಇರುವ ಶಾಲೆಗಳ ಪಟ್ಟಿ ತರಿಸಿಕೊಂಡು ಕ್ರಮ ವಹಿಸುವಂತೆ ತುಮಕೂರು ವಲಯದ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್‌ಗೆ ಏ.1ರಂದು ಪತ್ರ ಬರೆದು ಎಚ್ಚರಿಸಿದ್ದರೂ ಈವರೆಗೂ ಯಾವ ಶಾಲೆಯಲ್ಲಿಯೂ ಸಮಸ್ಯೆ ಬಗೆಹರಿಸದಿರುವುದು ಇಲಾಖೆಗಳ ಸಮನ್ವಯತೆಯ ಕೊರತೆ ತೋರಿಸಿದೆ.

    2019ರ ಪ್ರಕರಣಕ್ಕೆ ನ್ಯಾಯ ಸಿಕ್ಕಿಲ್ಲ: 2019ರ ಆ. 15ರಂದು ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಸ್ತಂಭಕ್ಕೆ ಬಾವುಟ ಕಟ್ಟುವ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡಿದ್ದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ವರದಿಯಾಗಿತ್ತು. ಈ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಮಕ್ಕಳ ರಕ್ಷಣಾ ಆಯೋಗ ಈವರೆಗೂ ತಪ್ಪಿತಸ್ಥರಿಗೆ ಶಿಕ್ಷೆ ನೀಡಿಲ್ಲ. ಹಾಗಾಗಿ, ಇಂತಹ ಪ್ರಕರಣ ಮತ್ತೆಮತ್ತೆ ಸಂಭವಿಸುತ್ತಿರುತ್ತವೆ.

    ಜಿಲ್ಲಾಧಿಕಾರಿ ಸೂಚನೆಗೂ ಕಿಮ್ಮತ್ತಿಲ್ಲ!: ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದ್ದ ಸಮಗ್ರ ಮಕ್ಕಳ ರಕ್ಷಣಾ ಯೋಜನೆ ತ್ರೈಮಾಸಿಕ ಸಭೆಯಲ್ಲಿ ವಿವಿಧ ಸರ್ಕಾರಿ ಶಾಲೆಗಳಲ್ಲಿ ವಿದ್ಯುತ್ ಕಂಬ ಹಾಗೂ ಲೈನ್ ಮಕ್ಕಳ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ ಎಂಬ ಬಗ್ಗೆ ತನಿಖಾ ಸಮಿತಿ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಗಮನ ಸೆಳೆದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಬೆಸ್ಕಾಂಗೆ ಲಿಖಿತವಾಗಿ ಸೂಚನೆ ನೀಡಿದ್ದರೂ ಪ್ರಯೋಜನವಾಗಿಲ್ಲದಿರುವುದು ಆಶ್ಚರ್ಯ ಹಾಗೂ ಆತಂಕ ಮೂಡಿಸಿದೆ.
    2021ರ ಏ.1ರಂದು ಖುದ್ದು ಜಿಲ್ಲಾಧಿಕಾರಿ ಅವರೇ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್‌ಗೆ ಪತ್ರ ಬರೆದಿದ್ದು ‘ಅತೀ ಮಹತ್ವದ್ದು’ ಎಂದು ಉಲ್ಲೇಖಿಸಿದ್ದರೂ ಗಮನ ನೀಡದ ತುಮಕೂರು ವಲಯ ಬೆಸ್ಕಾಂ ನಿರ್ಲಕ್ಷ್ಯದಿಂದ ಕರೀಕೆರೆಯಲ್ಲಿ ವಿದ್ಯಾರ್ಥಿಯ ಬಲಿಯಾಗಿದೆ.

    ವಿದ್ಯುತ್ ಅವಘಡಗಳಿಂದ ಮಕ್ಕಳು ಸಾವನ್ನಪ್ಪುತ್ತಿರುವುದು ಆತಂಕಕಾರಿ ಬೆಳವಣಿಗೆ, ಜಿಲ್ಲೆಯಲ್ಲಿಯೂ 508 ಶಾಲೆಗಳಲ್ಲಿ ಈ ಸಮಸ್ಯೆ ಇರುವುದು ಆತಂಕ ಹೆಚ್ಚಿಸಿದೆ. ಕೊಪ್ಪಳ ಹಾಗೂ ಕರೀಕೆರೆಯ ಪ್ರಕರಣಗಳನ್ನು ಉಲ್ಲೇಖಿಸಿ ಇಲಾಖೆಗಳ ನಿರ್ಲಕ್ಷ್ಯದ ಬಗ್ಗೆ ಕ್ರಮಕೈಗೊಳ್ಳುವಂತೆ ಮಕ್ಕಳ ಸಂರಕ್ಷಣಾ ಆಯೋಗದ ಅಧ್ಯಕ್ಷರು ಹಾಗೂ ಮಕ್ಕಳ ರಕ್ಷಣಾ ನಿರ್ದೇಶಕರಿಗೆ ಮನವಿ ಮಾಡಲಾಗಿದೆ.
    ಕೆ.ಟಿ.ತಿಪ್ಪೇಸ್ವಾಮಿ, ಪರಿಷತ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ

    ಜಿಲ್ಲೆಯ 508 ಶಾಲೆಗಳ ಆವರಣದಲ್ಲಿ ಈ ರೀತಿಯ ಸಮಸ್ಯೆಗಳಿರುವುದು ಗಂಭೀರ ಪ್ರಕರಣ ಎಂದು ಭಾವಿಸಿ ಕೂಡಲೇ ಕ್ರಮವಹಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಲಾಖೆ ಅನುಮತಿ ಪಡೆದು ಕ್ರಮಕೈಗೊಳ್ಳುವ ಪ್ರಕ್ರಿಯೆ ನಡೆಸಿದೆ. ಕರೀಕೆರೆ ಪ್ರಕರಣದ ನಂತರ ಮತ್ತೊಮ್ಮೆ ಬೆಸ್ಕಾಂ ಅಧಿಕಾರಿಗಳಿಗೆ ಪತ್ರಬರೆದು ಎಚ್ಚರಿಕೆ ನೀಡುತ್ತೇನೆ.
    ವೈ.ಎಸ್.ಪಾಟೀಲ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts