More

  ಪ್ರತಿ ಟನ್‌ಗೆ ಕಬ್ಬಿಗೆ ಸರ್ಕಾರ 500 ರೂ. ಕೊಡಲಿ – ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಸವಾಲ್

  ಬಾಗಲಕೋಟೆ: ರಾಜ್ಯದಲ್ಲಿ ಕಬ್ಬಿನ ಬೆಲೆ ಕುರಿತು ರೈತರು, ಕಾರ್ಖಾನೆ ಮಾಲೀಕರ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದನ್ನು ಬಗೆ ಹರಿಸುವ ಬದಲು ಸರ್ಕಾರ ಮೋಜು ಮಸ್ತಿ ಮಾಡುತ್ತಿದೆ. ಧಮ್, ತಾಕತ್ತು ಮಾತನಾಡುವ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿ ಟನ್ ಕಬ್ಬಿಗೆ 500 ರೂ. ಸರ್ಕಾರದಿಂದ ನೀಡಲಿ ಎಂದು ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಸರ್ಕಾರಕ್ಕೆ ಸವಾಲ್ ಹಾಕಿದರು.

  ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ದೊಡ್ಡಮಟ್ಟದಲ್ಲಿದೆ. ಕಬ್ಬು ಬೆಳೆಯುವ ವೆಚ್ಚ ಹಚ್ಚಾಗಿದೆ. ಕೇಂದ್ರ ಸರ್ಕಾರ ಬೆಲೆ ಘೋಷಣೆ ಮಾಡದೇ ಇದ್ದರೇ ರಾಜ್ಯ ಸರ್ಕಾರ ಮಾಡಲಿ. ಹಿಂದೆ ಸಿದ್ದರಾಮಯ್ಯ ಸರ್ಕಾರ ಟನ್ ಗೆ 350 ರೂ. ಸಹಾಯ ಮಾಡಿತ್ತು. ಈಗ ಬಿಜೆಪಿ ಸರ್ಕಾರ 500 ರೂ. ನೀಡಿ ಧಮ್ಮು, ತಾಕತ್ ತೋರಿಸಲಿ ಎಂದು ಸಿ.ಎಂ. ಬಸವರಾಜ ಬೊಮ್ಮಾಯಿಗೆ ಟಾಂಗ್ ನೀಡಿದ ಅವರು, ಸರ್ಕಾರ ತಕ್ಷಣ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರೈತರ ಸಭೆ ಕರೆಯಬೇಕು. ದರದ ಸಮಸ್ಯೆ ಬಗೆಹರಿಸಬೇಕು. ರೈತರ ಸಂಕಟಕ್ಕೆ ಖುಷಿ ಪಡುವ ಸರ್ಕಾರ ಆಗಬಾರದು ಎಂದರು.

  ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌ಗೆ ತಿರುಗೇಟು: ಸಿದ್ದರಾಮಯ್ಯ ಅವರನ್ನ ಜೈಲಿಗೆ ಕಳಿಸುತ್ತೇವೆ ಎಂದಿದ್ದ ನಳೀನಕುಮಾರ ಕಟೀಲ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ತಿಮ್ಮಾಪುರ, ಕಟೀಲ್ ವಿರುದ್ದ ಏಕವಚನದಲ್ಲೆ ವಾಗ್ದಾಳಿ ನಡೆಸಿದರು. ಕಟೀಲ್ಗೆ ಪಿಟೀಲು ಊದುವುದಷ್ಟೆ. ಅವನಿಗೆ ಏನು ಗೊತ್ತಿಲ್ಲ. ರಾಜಕಾರಣದ ಅರಿವೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರ ಭ್ರಷ್ಟಚಾರ ಫೈಲ್ ತೆಗೆಯಲು ಇಷ್ಟು ದಿನ ಮಲಗಿಕೊಂಡಿದ್ದರಾ? ಇನ್ನು ಎದ್ದೆ ಇಲ್ಲವೇನು, ಇನ್ನು ಮೂರು ತಿಂಗಳಲ್ಲಿ ಚುನಾವಣೆ ಇದೆ. ಇನ್ನೇನು ತೆಗೆಯುತ್ತಿಯಾ, ಇಲ್ಲಿವರೆಗೆ ಮಲಗಿದಿಯಾ.? ಅವನ ಅವಧಿನೆ ಮುಗಿಯಲಿಕ್ಕೆ ಬಂದಿದೆ. ಇಷ್ಟು ವರ್ಷ ಯಾಕೆ ಮಲಕೊಂಡಿದ್ದಿಯಪ್ಪಾ.? ಕಟೀಲ ಮಾತಿಗೆ ಏನಾದರೂ ಅರ್ಥ ಇದೆಯಾ ಅಂತ ವಾಗ್ದಾಳಿ ನಡೆಸಿದರು.

  ಶೇ.80 ರಷ್ಟು ಮಂತ್ರಿಗಳು ಜೈಲಿ ಹೋಗ್ತಾರೆ: ರಾಜ್ಯದಲ್ಲಿ ಬೇರೆ ಸರ್ಕಾರ ಬಂದ್ರೆ ಶೇ. 80 ರಷ್ಟು ಸಚಿವರು ಜೈಲಿಗೆ ಹೋಗ್ತಾರೆ. ಏನೋ ಗೊತ್ತಿಲ್ಲದ ಕೋಲೆತ್ತಿನಂತೆ ಗೋಣು ಹಾಕುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಲೂಟಿ ಹೊಡೆಯುವ ಮಂತ್ರಿಗಳು ಇದ್ದಾರೆ. ಅದರ ಜೊತೆ ಶಾಮೀಲಾದ ಶಾಸಕರು. ಒಟ್ಟಾರೆ ಇವರು ಮುಳುಗಿ ಮುಳುಗಿ ಇನ್ನು ಏಳೋದೆ ಇಲ್ಲ. ಕಾಂಗ್ರೆಸ್ ಹಡಗು ಮೇಲಿರುತ್ತದೆ. ಬಿಜೆಪಿಯವರು ಕೆಳಗಡೆ ಸಮುದ್ರದ ಪಾತಾಳಕ್ಕೆ ಹೋಗ್ತಾರೆ. ಈ ಸರ್ಕಾರಕ್ಕೆ ಮೆದುಳು ಇಲ್ಲ. ಇವರಿಗೆ ಲೂಟಿ ಹೊಡೆಯು ಒಂದೆ ಗೊತ್ತಿದೆ. ಬಹುಶಃ ಚುನಾಚಣೆ ಬಂದು ಬೇರೆ ಸರ್ಕಾರ ಬಂದರೆ ಶೇ.80 ರಷ್ಟು ಮಂತ್ರಿಗಳು ಜೈಲಲ್ಲಿ ಇರ್ತಾರೆ. ಇವರ ಕರ್ಮಕಾಂಡ ಬೊಮ್ಮಾಯಿ ಮುಚ್ಚಿ ಇಡುತ್ತಿದ್ದಾರೆ ಎಂದು ಆರೋಪಿಸಿದರು.

  ಕಾರಜೋಳಗೆ ಟಾಂಗ್: ಕಾಂಗ್ರೆಸ್ ಮುಳುಗುವ ಹಡಗು ಎಂಬ ಸಚಿವ ಕಾರಜೋಳ ಹೇಳಿಕೆಗೆ ಮಾಜಿ ಸಚಿವ ಆರ್.ಬಿ. ತಿಮಾಪುರ ಟಾಂಗ್ ನೀಡಿದರು. ಕಾಂಗ್ರೆಸ್ ಮುಳುಗುವ ಹಡಗು ಅಲ್ಲ. ನಾವು ಹೇಳ್ತಿವಿ ‘ಅವನೇ ಮುಳುಗುತ್ತಾನೆ’ ಅಂತ. ಅವ ಹೇಳೋದಕ್ಕೆ ಏನು ಬೆಲೆ ಇದೆ. ಕಾಂಗ್ರೆಸ್ ಹಡಗು ಯಾವತ್ತೂ ಯಾರಿಗೂ ಮುಳುಗಿಸೋದಕ್ಕೆ ಸಾಧ್ಯವಿಲ್ಲ. ಪಾಪ ಅಧಿಕಾರದ ಭ್ರಮೆ, ಹಣ ತಲೆಗೆ ಏರಿದಂಗೆ ಆಗಿದೆ. ಅದಕ್ಕೆ ಏನೇನೋ ಮಾತನಾಡುತ್ತಾರೆ. ಮನಿಷ್ಯನಿಗೆ ಅಧಿಕಾರ ಹಣ ಒಟ್ಟಿಗೆ ಸೇರಿದಾಗ ಮನುಷ್ಯ ಪರಕ ಆಗ್ತಾನೆ ಅಂತ ಟಾಂಗ್ ನೀಡಿದರು.

  ಅಪ್ಪ ಮಗನ ನಡುವೆ ಪೈಪೋಟಿ: ಈ ಸಲ ಮುಧೋಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ನನಗೆ ಟಿಕೆಟ್ ಸಿಗುತ್ತದೆ. ಹೈಕಮಾಂಡ್ ನೂರಕ್ಕೆ ನೂರರಷ್ಟು ಟಿಕೆಟ್ ನೀಡುತ್ತದೆ. ಮುಧೋಳದಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಅಂತ ಸ್ಪಷ್ಟವಾಗಲಿ. ಬಿಜೆಪಿಯಲ್ಲಿ ಟಿಕೆಟ್‌ಗೆ ತಂದೆ ಮಗನ (ಗೋವಿಂದ ಕಾರಜೋಳ ಹಾಗೂ ಅರುಣ ಕಾರಜೋಳ) ಪೈಪೋಟಿ ಇದೆ. ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರ ನಡುವೆ ಇದೆ. ತಂದೆ ಮಕ್ಕಳ ವ್ಯವಹಾರ ಬಗೆಹರಿಯಲಿ.ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಎಲ್ಲರು ಸ್ಪರ್ಧೆ ಮಾಡುವ ಆಕಾಂಕ್ಷೆ ಇದೆ. ಈ ಸಾರಿ ಮುಧೋಳದಲ್ಲಿ ನೂರಕ್ಕೆ ನೂರು ಕಾಂಗ್ರೆಸ್ ಗೆಲ್ಲುತ್ತೆ ಎಂದರು.


  2004 ರಿಂದ ಕಾರಜೋಳ ವಿರುದ್ಧ ಕಾಂಗ್ರೆಸ್ ಗೆದ್ದೆ ಇಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ತಿಮ್ಮಾಪುರ, ರಾಜಕಾರಣ ಪೊಲಟಿಕಲ್ ಪವರ ಗೇಮ್. ಗೇಮ್ ಆಡುವಾಗ ಒಮ್ಮೊಮ್ಮೆ ನಾವು ಫೇಲ್ ಆಗಿದ್ದೇವೆ. ಈ ಸಲ ಅದೆಲ್ಲವನ್ನು ಕಲಿತು ನಾವು ತಕ್ಕ ಶಾಸ್ತಿ ಕಲಿಸುತ್ತೇವೆ. ಒಳಪಟ್ಟು, ಹೊರಪಟ್ಟುಗಳೆಲ್ಲ ಗೊತ್ತಾಗಿವೆ. ಈ ಸಲ ಗೆಲ್ಲುತ್ತೇವೆ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts