More

    50 ಸಾವಿರ ವಾಹನಗಳಿಗೆ ಮುಕ್ತಿ

    ಕಾರವಾರ: ಕೇಂದ್ರ ಸರ್ಕಾರವು ಶೀಘ್ರದಲ್ಲಿ ಗುಜರಿ ನೀತಿ ಜಾರಿಗೆ ತರುವ ಬಗ್ಗೆ ತಯಾರಿ ನಡೆಸಿದೆ. ಈ ನೀತಿ ಜಾರಿಯಾದರೆ ಜಿಲ್ಲೆಯ ಕಾರವಾರ ಆರ್​ಟಿಒ ವಲಯದ 50 ಸಾವಿರಕ್ಕೂ ಅಧಿಕ ವಾಹನಗಳು ಗುಜರಿ ಸೇರಲಿವೆ.

    ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಕಳೆದ ತಿಂಗಳು ವಿವಿಧ ಕಾರ್ಯಕ್ರಮಗಳಲ್ಲಿ ಈ ನೀತಿಯ ಬಗ್ಗೆ ಮಾತನಾಡಿದ್ದಾರೆ. ಗುಜರಿ ನೀತಿ ಕರಡು ಅಂತಿಮಗೊಂಡಿದ್ದು, ಮಾಸಾಂತ್ಯದಲ್ಲಿ ಜಾರಿಗೆ ತರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಅವರು ನೀಡಿರುವ ಪ್ರಾಥಮಿಕ ಮಾಹಿತಿಯಂತೆ 15 ವರ್ಷ ಪೂರೈಸಿದ ವಾಹನಗಳನ್ನು ಗುಜರಿಗೆ ಸೇರಿಸಬೇಕಾಗುತ್ತದೆ. ಇದರಿಂದ ಹಳೆಯ ವಾಹನ ಓಡಿಸುತ್ತಿರುವವರಲ್ಲಿ ಆತಂಕಕ್ಕೆ ಕಾರಣವಾಗಿದೆ.

    ಬೈಕ್​ಗಳು ಹೆಚ್ಚು: ರಾಷ್ಟ್ರೀಯ ವಾಹನ ನೋಂದಣಿ ದಾಖಲೆಗಳ ಮಾಹಿತಿಯಂತೆ ಕೆಎ 30 ನೋಂದಣಿಯ 15 ವರ್ಷ ಮೀರಿದ 45,464 ಬೈಕ್ ಹಾಗೂ ಸ್ಕೂಟರ್​ಗಳಿವೆ. 4085 ಕಾರುಗಳು, 205 ಕ್ಯಾಬ್​ಗಳು, 6 ಬಸ್​ಗಳು, 23 ಮಿನಿ ಬಸ್​ಗಳು, 1328 ಪ್ಯಾಸೆಂಜರ್ ಆಟೋ ರಿಕ್ಷಾಗಳು, 852 ಗೂಡ್ಸ್ ರಿಕ್ಷಾಗಳು ಸೇರಿ ಒಟ್ಟು 54,403 ವಾಹನಗಳಿವೆ. 15 ವರ್ಷಗಳ ಹಿಂದೆ ಕಾರವಾರ ಆರ್​ಟಿಒ ಕಚೇರಿ ವ್ಯಾಪ್ತಿಗೆ ದಾಂಡೇಲಿಯೂ ಸೇರಿತ್ತು. ಇದರಿಂದ ಕೆಎ-30 ನೋಂದಣಿ ಸಂಖ್ಯೆಯ ಹಳೆಯ ವಾಹನಗಳು ಕಾರವಾರ, ಅಂಕೋಲಾ ಮಾತ್ರವಲ್ಲದೆ ದಾಂಡೇಲಿ, ಹಳಿಯಾಳ, ಜೊಯಿಡಾ ವ್ಯಾಪ್ತಿಯಲ್ಲೂ ಇವೆ. ಇವುಗಳಲ್ಲಿ ಹಲವು ವಾಹನಗಳು ಈಗಾಗಲೇ ಗುಜರಿ ಸೇರಿರಲಿಕ್ಕೂ ಸಾಕು. ಈ ಬಗ್ಗೆ ಯಾವುದೇ ದಾಖಲೆ ನಮ್ಮ ಬಳಿ ಲಭ್ಯವಾಗುವುದಿಲ್ಲ ಎಂದು ಆರ್​ಟಿಒ ಅಧಿಕಾರಿಗಳು ಹೇಳುತ್ತಾರೆ.

    ಏನಿದು ಗುಜರಿ ನೀತಿ..?
    ವಾಯು ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಹಳೆಯ ವಾಹನಗಳನ್ನು ಗುಜರಿಗೆ ಹಾಕುವಂತೆ ಈಗಾಗಲೇ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಸರ್ಕಾರಕ್ಕೆ ಸೂಚನೆ ನೀಡಿದೆ. ದೇಶದ ವಾಹನೋದ್ಯಮಕ್ಕೆ ಉತ್ತೇಜನ ನೀಡಲು ಮಾಲಿನ್ಯಕಾರಕ ವಾಹನಗಳನ್ನು ವಿಲೇವಾರಿ ಮಾಡಲು 15 ವರ್ಷ ಮೇಲ್ಪಟ್ಟ ವಾಹನಗಳನ್ನು ಗುಜರಿಗೆ ಸೇರಿಸುವ ಬಗ್ಗೆ ಕೇಂದ್ರ ಸರ್ಕಾರ ನೀತಿ ಸಿದ್ಧಪಡಿಸುತ್ತಿದೆ. ಮೊದಲ ಹಂತದಲ್ಲಿ ಮಹಾ ನಗರಗಳಿಗೆ ಮಾತ್ರ ಸೀಮಿತವಾಗಿ ಯೋಜನೆ ಜಾರಿಗೆ ತರಲಿದೆಯೇ ಅಥವಾ ದೇಶದ ಎಲ್ಲೆಡೆಯೂ ಜಾರಿಯಾಗಲಿದೆಯೇ ಎಂಬ ಬಗ್ಗೆ ಇದುವರೆಗೂ ಸ್ಪಷ್ಟತೆ ಇಲ್ಲ. ಗುಜರಿ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದರೆ ಗುಜರಿಗೆ ಸೇರಬಹುದಾದ ಹಳೆಯ ವಾಹನಗಳನ್ನು ಗುರುತಿಸಿ, ಅವುಗಳ ಫಿಟ್​ನೆಸ್ ಪ್ರಮಾಣಪತ್ರ ರದ್ದು ಮಾಡುವ ಕಾರ್ಯವಾಗಬೇಕು. ನಂತರ ವಾಹನಗಳನ್ನು ವಶಕ್ಕೆ ಪಡೆದು, ಮಾಲೀಕರಿಗೆ ಅದರ ಮೌಲ್ಯ ನೀಡಬೇಕು. ಅವೆಲ್ಲದಕ್ಕೆ ಗುಜರಿ ಕೇಂದ್ರವನ್ನು ಪ್ರಾರಂಭಿಸಬೇಕಾಗುತ್ತದೆ.

    ಮಾಲಿನ್ಯ ತಪಾಸಣೆ ಯಂತ್ರ ಹಾಳು
    ಎಲ್ಲ ವಾಹನಗಳಿಗೆ ಪ್ರತಿ 6 ತಿಂಗಳಿಗೊಮ್ಮೆ ಮಾಲಿನ್ಯ ತಪಾಸಣೆ ಮಾಡಿಸಿ, ಪ್ರಮಾಣಪತ್ರ ಪಡೆಯುವುದು ಕಡ್ಡಾಯ. ಆದರೆ, ಹೆಚ್ಚಿನ ವಾಹನಗಳು ಈ ಪ್ರಮಾಣಪತ್ರ ಹೊಂದಿರುವುದಿಲ್ಲ. ಪೊಲೀಸ್, ಆರ್​ಟಿಒ ಅಧಿಕಾರಿಗಳು ವಾಹನ ದಾಖಲೆ ತಪಾಸಣೆಯ ವೇಳೆ ವಾಯು ಮಾಲಿನ್ಯ ದಾಖಲೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ವಾಯು ಮಾಲಿನ್ಯ ತಪಾಸಣೆ ಪತ್ರ ಸರಿಯಾಗಿ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡಲು ಯಾವುದೇ ಇಲಾಖೆಯ ಬಳಿ ಪರ್ಯಾಯ ವ್ಯವಸ್ಥೆಯೂ ಇಲ್ಲ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಳೆದ ನಾಲ್ಕು ವರ್ಷಗಳ ಹಿಂದೆ ವಾಯು ಮಾಲಿನ್ಯ ತಪಾಸಣೆಗೆ ಮೊಬೈಲ್ ವಾಹನವೊಂದನ್ನು ಪರಿಚಯಿಸಿತ್ತು. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆ ಸೇರಿ ಒಂದು ವಾಹನ ನೀಡಲಾಗಿತ್ತು. ಈ ವಾಹನ ತಿಂಗಳಲ್ಲಿ ಎರಡು ದಿನ ಜಿಲ್ಲೆಯ ವಿವಿಧೆಡೆ ಬರುತ್ತಿತ್ತು. ಅಲ್ಲಲ್ಲಿ ವಾಹನಗಳ ಮಾಲಿನ್ಯ ತಪಾಸಣೆ ಮಾಡಿ, ದೋಷ ಕಂಡುಬಂದಲ್ಲಿ ಆರ್​ಟಿಒಗೆ ವರದಿ ನೀಡಲಾಗುತ್ತಿತ್ತು. ಆದರೆ, ಈಗ ಮೊಬೈಲ್ ವಾಹನವೇ ಹಾಳಾಗಿಬಿಟ್ಟಿದೆ. ಕೋವಿಡ್ ಕಾಲಾವಧಿಯ ಪೂರ್ವದಿಂದಲೂ ಜಿಲ್ಲೆಗೆ ವಾಹನ ಬಂದಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಗಣಪತಿ ಹೆಗಡೆ ತಿಳಿಸಿದ್ದಾರೆ.

    ಗುಜರಿ ನೀತಿ ಜಾರಿಯಾಗುತ್ತದೆ ಎಂಬುದನ್ನು ಕೇಳಿದ್ದೇವೆ. ಆದರೆ, ಅದರ ಬಗ್ಗೆ ನಮಗೆ ಯಾವುದೇ ಸೂಚನೆ ಬಂದಿಲ್ಲ.
    | ರವಿ ಬೀಸರಳ್ಳಿ ಆರ್​ಟಿಒ, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts