More

    ಈ ಜಿಲ್ಲೆಯೊಂದರಲ್ಲೇ 4,375 ಸರ್ಕಾರಿ ಹುದ್ದೆಗಳು ಖಾಲಿ..!

    ಗಂಗಾಧರ್ ಬೈರಾಪಟ್ಟಣ ರಾಮನಗರ  : ಜಿಲ್ಲೆಯ ಸರ್ಕಾರಿ ಯಂತ್ರಕ್ಕೆ ಸಿಬ್ಬಂದಿ ಕೊರತೆಯೇ ದೊಡ್ಡ ತಲೆನೋವಾಗಿದ್ದು, ಇರುವ ಸಿಬ್ಬಂದಿ ಒತ್ತಡದಲ್ಲಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
    ಸರ್ಕಾರಿ ನೇಮಕಾತಿ ಈಗ ದೊಡ್ಡ ಸವಾಲು. ಒಂದೆಡೆ ಸರ್ಕಾರ ಸಿಬ್ಬಂದಿ ಕಡಿತ ಮಾಡುವ ಮಾತುಗಳನ್ನು ಆಡುತ್ತಿದ್ದರೆ, ಮತ್ತೊಂದೆಡೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಪ್ರಗತಿ ಕಾಣುತ್ತಿಲ್ಲ.

    ಇದರಿಂದಾಗಿ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದ್ದು ಜಿಲ್ಲೆಯಲ್ಲಿಯೂ ಸುಮಾರು 8 ಸಾವಿರ ವಿವಿಧ ಹುದ್ದೆಗಳು ಖಾಲಿ ಇವೆ.

    ಪ್ರಮುಖ ಇಲಾಖೆಗಳಲ್ಲಿ ಖಾಲಿ: ಜಿಲ್ಲೆಯಲ್ಲಿ ಸುಮಾರು 40 ಇಲಾಖೆಗಳಲ್ಲಿ ಒಟ್ಟು 12,136 ಹುದ್ದೆಗಳು ಮಂಜೂರಾಗಿವೆ. ಆದರೆ, ಇವುಗಳಲ್ಲಿ 7,761 ಭರ್ತಿಯಾಗಿದ್ದು, 4,375 ಹುದ್ದೆಗಳು ಖಾಲಿ ಉಳಿದಿವೆ.

    ಅದರಲ್ಲೂ ಪ್ರಮುಖವಾಗಿ ಜನರು ಮತ್ತು ರೈತರಿಗೆ ಹತ್ತಿರವಾಗಿ ದುಡಿಯುವ ಪ್ರಮುಖ ಇಲಾಖೆಗಳಲ್ಲಿಯೇ ಹುದ್ದೆಗಳು ಖಾಲಿ ಉಳಿದಿರುವುದು ಸಿಬ್ಬಂದಿ ಮೇಲಿನ ಒತ್ತಡ ಹೆಚ್ಚಿಸಿದೆ. ಪ್ರಮುಖವಾಗಿ ಆರೋಗ್ಯ, ಕೃಷಿ, ತೋಟಗಾರಿಕೆ, ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆ, ಜಿಪಂ ಹೀಗೆ ಸುಮಾರು 14 ಇಲಾಖೆಗಳಲ್ಲಿ ಒಟ್ಟು 4 ಸಾವಿರ ಹುದ್ದೆಗಳು ಖಾಲಿ ಉಳಿದಿವೆ.

    ಒತ್ತಡದಲ್ಲಿ ಸರ್ಕಾರಿ ಸಿಬ್ಬಂದಿ: ಜಿಲ್ಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಉಳಿದಿರುವುದರಿಂದ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಹೆಚ್ಚಿದೆ.

    ಕೆಲವು ಸಿಬ್ಬಂದಿ ಕನಿಷ್ಠ ಎಂದರೂ ಎರಡು ಮೂರು ವಿಷಯಗಳಲ್ಲಿ ಒಬ್ಬರೇ ಕೆಲಸ ಮಾಡಬೇಕಾಗಿದೆ. ಇದರಿಂದ ಸಾರ್ವಜನಿಕರ ಸೇವೆ ವಿಳಂಬವಾಗಿದೆ. ಅಲ್ಲದೆ,ಸಿಬ್ಬಂದಿ ಆರೋಗ್ಯದ ಮೇಲೂ ಪರಿಣಾಮ ಉಂಟಾಗುತ್ತಿದ್ದು, ಇದೂ ಸಹ ಗುಣಮಟ್ಟದ ಕೆಲಸ ಪಡೆಯಲು ಅಡ್ಡಗಾಲಾಗಿ ಪರಿಣಮಿಸಿದೆ.

    ಹಂಗಾಮಿ ನೌಕರರ ನೆರವು: ಜಿಲ್ಲೆಯಲ್ಲಿ ಖಾಲಿ ಇರುವ ಬಹುತೇಕ ಹುದ್ದೆಗಳನ್ನು ಹಂಗಾಮಿ ಮತ್ತು ಹೊರಗುತ್ತಿಗೆ ನೌಕರರು ತುಂಬುತ್ತಿದ್ದಾರೆ. ಬಹುತೇಕ ಎಲ್ಲ ಇಲಾಖೆಗಳಲ್ಲೂ ಹೊರ ಗುತ್ತಿಗೆ ನೌಕರರೇ ಕಾರ್ಯನಿರ್ವಹಿಸುತ್ತಿದ್ದು, ಸ್ವಲ್ಪ ಮಟ್ಟಿನ ಕೆಲಸದ ಒತ್ತಡ ಕಡಿಮೆ ಮಾಡಿದೆಯಾದರೂ ಇವರು ಅಧಿಕೃತ ನೌಕರರಲ್ಲದ ಕಾರಣ ಇವರ ಮೇಲೆ ಹೆಚ್ಚಿನ ಜವಾಬ್ದಾರಿ ನೀಡಲು ಸಾಧ್ಯವಾಗದೆ ಕಾಯಂ ಸಿಬ್ಬಂದಿ ಇವರ ಕೆಲಸವನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲೇಬೇಕಿದೆ. ಆದರೆ ಸಾಯುತ್ತಿರುವ ಜೀವಕ್ಕೆ ಹನಿ ನೀರು ನೀಡಿದಂತೆ ಹೊರಗುತ್ತಿಗೆ ಸಿಬ್ಬಂದಿ ಇಲಾಖೆಗಳ ಮಾನ ಕಾಪಾಡುವಲ್ಲಿ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ.

     

    ಸಿಬ್ಬಂದಿ ಕೊರತೆ ಇಡೀ ಆಡಳಿತ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ. ಇರುವ ಸಿಬ್ಬಂದಿ ಒತ್ತಡದಲ್ಲಿ ಕೆಲಸ ಮಾಡಬೇಕಾಗಿದೆ. ಸರ್ಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕಿದೆ.
    ಆರ್. ಕೆ. ಭೈರಲಿಂಗಯ್ಯ
    ಅಧ್ಯಕ್ಷ, ಸರ್ಕಾರಿ ನೌಕರರ ಸಂಘ, ರಾಮನಗರ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts