More

    43.34 ಕೋಟಿ ಆದಾಯ ನಿರೀಕ್ಷೆ, ಹೊಸಕೋಟೆ ನಗರಸಭೆ ಅಧ್ಯಕ್ಷ ಡಿ.ಕೆ. ನಾಗರಾಜ್ ಮಾಹಿತಿ, 41.84 ಕೋಟಿ ವೆಚ್ಚ, 1.5 ಕೋಟಿ ಉಳಿತಾಯ ನಿರೀಕ್ಷೆ

    ಹೊಸಕೋಟೆ: 2022-23ನೇ ಸಾಲಿನಲ್ಲಿ ನಗರಸಭೆಗೆ ಸುಮಾರು 43.34 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಈ ಪೈಕಿ 41.84 ಕೋಟಿ ರೂ. ವೆಚ್ಚದ ಪಟ್ಟಿ ತಯಾರಿಸಲಾಗಿದ್ದು, ಸುಮಾರು 1.5 ಕೋಟಿ ರೂಪಾಯಿ ಉಳಿತಾಯ ನಿರೀಕ್ಷಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ಡಿ.ಕೆ. ನಾಗರಾಜ್ ತಿಳಿಸಿದರು.

    ನಗರಸಭೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 2022-23ನೇ ಸಾಲಿನ ಆಯ ವ್ಯಯ ಮಂಡನೆ ಸಭೆಯಲ್ಲಿ ಮಾತನಾಡಿದರು.

    ಸ್ಥಾಯಿ ಸಮಿತಿ ಅಧ್ಯಕ್ಷ ಮುಭಾರಕ್ ರೋಷನ್ ಮಾತನಾಡಿ, ನಗರಸಭೆ ಕಚೇರಿ, ಆಡಳಿತ ಮತ್ತು ನಿರ್ವಹಣೆ ಹಾಗೂ ಕೌನ್ಸಿಲ್ ಮಂಡಳಿ ವೆಚ್ಚ 1.62 ಕೋಟಿ ರೂ., ಅಧಿಕಾರಿ ಮತ್ತು ನೌಕರರ ವೇತನ ಹಾಗೂ ಭತ್ಯೆಗಳಿಗೆ 5.97 ಕೋಟಿ ರೂ., ಕಲ್ಯಾಣ ಕಾರ್ಯಕ್ರಮಗಳಿಗೆ 73.11 ಲಕ್ಷ ರೂ., ನೀರು ಸರಬರಾಜು ನಿರ್ವಹಣೆ ಮತ್ತು ಕಾಮಗಾರಿಗೆ 8.3 ಕೋಟಿ ರೂ., ಬೀದಿ ದೀಪ ನಿರ್ವಹಣೆಗೆ 4.37 ಕೋಟಿ, ಘನತ್ಯಾಜ್ಯ ನಿರ್ವಹಣೆಗೆ 6.35 ಕೋಟಿ, ರಸ್ತೆ ಅಭಿವೃದ್ಧಿಗೆ 3.02 ಕೋಟಿ, ಚರಂಡಿ ಹಾಗೂ ರಾಜಕಾಲುವೆ ಕಾಮಗಾರಿಗೆ 2.6 ಕೋಟಿ, ಇತರ ನಾಗರಿಕ ಸೌಲಭ್ಯ ಕಾಮಗಾರಿಗೆ 3.92 ಕೋಟಿ ಹಾಗೂ ತೆರಿಗೆ ಮತ್ತು ಕರ ಪಾವತಿಗೆ 4.95 ಕೋಟಿ ರೂ. ವೆಚ್ಚವಾಗುವುದಾಗಿ ಅಂದಾಜಿಸಲಾಗಿದೆ ಎಂದರು.

    ಉದ್ಯಾನವನ ಅಭಿವೃದ್ಧಿ ಜತೆಗೆ ನಗರದಲ್ಲಿರುವ ಪುರಾತನ ಕಯಾಣಿಗಳ ಪುನಶ್ಚೇತನ ಹಾಗೂ ನಗರದ ಎಂವಿ ಬಡಾವಣೆಯಲ್ಲಿರುವ ಮಜ್ಜಿಗೆಕುಂಟೆ ಜಾಗದಲ್ಲಿ ಕಲ್ಯಾಣಿ ಹಾಗೂ ಉದ್ಯಾನವನ ನಿರ್ಮಾಣ ಮಾಡಬೇಕು ಎಂದು ಸದಸ್ಯ ನಿತಿನ್ ಒತ್ತಾಯಿಸಿದರು.

    ನಗರದಲ್ಲಿ ಬೀದಿನಾಯಿ ನಿಯಂತ್ರಣಕ್ಕೆ ಮೀಸಲಿಟ್ಟಿರುವ 10 ಲಕ್ಷ ರೂ. ಅನುದಾನ ಸಾಲದಾಗಿದೆ, 30 ಲಕ್ಷ ಹಣ ಮೀಸಲಿಡಬೇಕು ಎಂದು ಅರುಣ್‌ಕುಮಾರ್ ಒತ್ತಾಯಿಸಿದರು.

    ಪ್ಲಾಸ್ಟಿಕ್ ನಿಷೇಧ ಹಾಗೂ ಇನ್ನಿತರ ಆರೋಗ್ಯ ಕಾರ್ಯಕ್ರಮಗಳಿಗೆ ಕಳೆದ ಬಾರಿ ಮೀಸಲಿಟ್ಟಿದ್ದ ಹಣ ದುರ್ಬಳಕೆಯಾಗಿದ್ದು, ಈ ಬಗ್ಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts