More

    ಕೆಲಸಕ್ಕೆ ಹಾಜರಾಗದ 35 ಟ್ರೖೆನಿ ಸಿಬ್ಬಂದಿ ವಜಾ

    ಹಾವೇರಿ: 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 10 ದಿನ ಪೂರೈಸಿದ್ದು, ಕೆಲಸಕ್ಕೆ ಹಾಜರಾಗುವಂತೆ ನೋಟಿಸ್ ನೀಡಿದರೂ ಕರ್ತವ್ಯಕ್ಕೆ ಹಾಜರಾಗದ 35 ಟ್ರೖೆನಿ ಸಿಬ್ಬಂದಿಯನ್ನು ಶುಕ್ರವಾರ ವಜಾಗೊಳಿಸಿ ಮುಷ್ಕರನಿರತ ಸಾರಿಗೆ ನೌಕರರಿಗೆ ಬಿಸಿ ಮುಟ್ಟಿಸಲಾಗಿದೆ.

    ಮುಷ್ಕರದಲ್ಲಿ ಜಿಲ್ಲೆಯ ಬಹುಪಾಲು ಸಾರಿಗೆ ನೌಕರರು ಪಾಲ್ಗೊಂಡಿರುವುದರಿಂದ ಬಸ್ ಸಂಚಾರದಲ್ಲಿ ಎಂದಿನಂತೆ ವ್ಯತ್ಯಯ ಮುಂದುವರಿದಿದೆ. ನೂರಕ್ಕೂ ಹೆಚ್ಚು ಸಿಬ್ಬಂದಿ ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಿದ್ದು, ಜಿಲ್ಲೆಯ 6 ಡಿಪೋಗಳಿಂದ 63 ಬಸ್​ಗಳು ಸಂಚರಿಸಿದವು. ಆದರೆ, ಜನರಿಗೆ ಬಸ್​ಗಳು ಬರುವ ನಿರೀಕ್ಷೆಯಿಲ್ಲದೇ ಇದ್ದರಿಂದ ಖಾಸಗಿ ವಾಹನಗಳನ್ನು ಬಹುತೇಕರು ಅವಲಂಬಿಸುವಂತಾಗಿತ್ತು.

    ಬೇಡಿಕೆ ಈಡೇರಿಸುವಂತೆ ಸಾರಿಗೆ ನೌಕರರು ಪಟ್ಟು ಸಡಿಲಿಸದೇ ಮುಷ್ಕರದಲ್ಲಿ ಪಾಲ್ಗೊಂಡಿರುವುದರಿಂದ ಸರ್ಕಾರ ನೌಕರರ ಮೇಲೆ ಒಂದೊಂದೇ ಕಾನೂನು ಅಸ್ತ್ರ ಬಳಸುತ್ತಿದೆ. ಕೆಲ ನೌಕರರನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ 48 ನೌಕರರ ಮೇಲೆ ಪೊಲೀಸ್ ಕೇಸ್ ದಾಖಲಿಸಲಾಗಿದೆ. ಇಷ್ಟಾದರೂ ಜಗ್ಗದೇ ಕರ್ತವ್ಯಕ್ಕೆ ಹಾಜರಾಗದ ನೌಕರರಿಗೆ ಮತ್ತಷ್ಟು ಬಿಸಿ ಮುಟ್ಟಿಸುವ ಕಾರ್ಯವನ್ನು ಸಾರಿಗೆ ಸಂಸ್ಥೆ ಮಾಡತೊಡಗಿದೆ. ತರಬೇತಿ ಅವಧಿಯಲ್ಲಿರುವ 35 ಸಿಬ್ಬಂದಿ ವಜಾಗೊಳಿಸಿ ಆದೇಶಿಸಲಾಗಿದೆ. ಇದರಿಂದ ಇನ್ನೂ ತರಬೇತಿ ಅವಧಿ ಪೂರೈಸದೇ ಇರುವ ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಭೀತಿ ಆವರಿಸಿದೆ.

    ಏರಿಕೆಯಾಗುತ್ತಿರುವ ಬಸ್​ಗಳ ಸಂಖ್ಯೆ

    ಸರ್ಕಾರ ಹಾಗೂ ಸಂಸ್ಥೆಯ ಅಧಿಕಾರಿಗಳ ಸೂಚನೆ ಮೇರೆಗೆ ದಿನದಿಂದ ದಿನಕ್ಕೆ ಕರ್ತವ್ಯಕ್ಕೆ ಹಾಜರಾಗುತ್ತಿರುವ ನೌಕರರ ಸಂಖ್ಯೆ ಹೆಚ್ಚುತ್ತಿದೆ. ಶುಕ್ರವಾರ ಜಿಲ್ಲೆಯ 6 ಡಿಪೋಗಳ ವ್ಯಾಪ್ತಿಯಲ್ಲಿ 63 ಬಸ್​ಗಳು ಸಂಚರಿಸಿದವು. ಹಾವೇರಿಯಿಂದ 10, ಹಿರೇಕೆರೂರು 18, ರಾಣೆಬೆನ್ನೂರ 15, ಹಾನಗಲ್ಲ 8, ಬ್ಯಾಡಗಿ 2, ಸವಣೂರ ಡಿಪೋದಿಂದ 10 ಬಸ್​ಗಳು ಸಂಚರಿಸಿದವು. ತಾಲೂಕು ಹಾಗೂ ಪ್ರಮುಖ ಸ್ಥಳಗಳಿಗೆ ಆಗೊಮ್ಮೆ ಈಗೊಮ್ಮೆ ಬಸ್​ಗಳ ಸಂಚರಿಸಿದವು. ಆದರೆ, ಗ್ರಾಮೀಣ ಭಾಗಕ್ಕೆ ಬಸ್ ಸಂಚರಿಸದೇ ಇರುವುದರಿಂದ ಸಾರ್ವಜನಿಕರ ಪರದಾಟ ಎಂದಿನಂತೆ ಮುಂದುವರಿದಿದೆ. ಖಾಸಗಿ ವಾಹನಗಳ ಓಡಾಟವೂ ಹೆಚ್ಚಿದೆ. ಬಸ್ ನಿಲ್ದಾಣಕ್ಕೆ ಖಾಸಗಿ ಬಸ್, ಟೆಂಪೋ, ಟ್ರ್ಯಾಕ್ಸ್ ಇನ್ನಿತರ ವಾಹನಗಳು ಬಂದು ಪ್ರಯಾಣಿಕರನ್ನು ಕರೆದೊಯ್ಯುವ ಕಾರ್ಯವೂ ಮುಂದುವರಿದಿದೆ.

    ನೋಟಿಸ್ ನೀಡಿದರೂ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ 35 ಟ್ರೇನಿ ಸಿಬ್ಬಂದಿಯನ್ನು ಡಿಸ್​ವಿುಸ್ ಮಾಡಲಾಗಿದೆ. ಇನ್ನಾದರೂ ನೌಕರರು ಎಚ್ಚೆತ್ತುಕೊಂಡು ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಅನೇಕರು ಕೆಲಸಕ್ಕೆ ಹಾಜರಾಗಿದ್ದು, ಶನಿವಾರ ಇನ್ನೂ ಹೆಚ್ಚಿನ ಸಂಖ್ಯೆಯ ಬಸ್ ಓಡಿಸಲು ಸಾಧ್ಯವಾಗುವ ವಿಶ್ವಾಸವಿದೆ.
    | ವಿ.ಎಸ್. ಜಗದೀಶ, ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts