More

    31ರವರೆಗೆ ಮತ್ತೆ ಕೋಲಾರ ಲಾಕ್

    ಕೋಲಾರ: ಜಿಲ್ಲೆಯಲ್ಲಿ ಕರೊನಾ ಪ್ರಕರಣ ನಿಯಂತ್ರಣಕ್ಕೆ ತರಲು ಮೇ 27ರ ಬೆಳಗ್ಗೆ 10ರಿಂದ 31ರ ಬೆಳಗ್ಗೆ 6ರವರೆಗೆ ಸಂಪೂರ್ಣ ಲಾಕ್‌ಡೌನ್ ಇರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು. ನಗರದ ಡಿಎಚ್‌ಒ ಕಚೇರಿ ಮುಂಭಾಗ ಮಂಗಳವಾರ ಕೆಎಸ್ಸಾರ್ಟಿಸಿಯ ಮೊಬೈಲ್ ಆಕ್ಸಿಜನ್ ಬಸ್ ಲೋಕಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

    ಜಿಲ್ಲೆಯಲ್ಲಿ 3 ದಿನ ಸಂಪೂರ್ಣ ಲಾಕ್‌ಡೌನ್ ಮಾಡಿದ ಪರಿಣಾಮ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದರು. ಲಾಕ್‌ಡೌನ್‌ನಿಂದ ತೊಂದರೆಗೀಡಾದವರು ಹಾಗೂ ಮುಂದೆ ತೊಂದರೆಗೀಡಾಗುವವರಿಗೆ ಕ್ಷಮೆ ಕೋರುತ್ತೇನೆ. ಇನ್ನೂ ನಾಲ್ಕು ದಿನ ಲಾಕ್‌ಡೌನ್ ಮುಂದುವರಿಸಬೇಕೆಂದು ಜನಪ್ರತಿನಿಧಿ, ಕರೊನಾ ನಿಯಂತ್ರಣದಲ್ಲಿ ತೊಡಗಿರುವ ಅಧಿಕಾರಿಗಳು, ಈ ಭಾಗದ ಹಿರಿಯರ ಅಭಿಪ್ರಾಯದಂತೆ ಲಾಕ್‌ಡೌನ್ ಇರಲಿದೆ. ಜನ ಸಹಕಾರ ನೀಡಬೇಕು ಎಂದು ಕೋರಿದರು.

    ಮೆಡಿಕಲ್, ಡಿಫೆನ್ಸ್‌ಗೆ ವಿನಾಯಿತಿ: ಜಿಲ್ಲೆಯಲ್ಲಿ ಮೆಡಿಕಲ್ ಮತ್ತು ಡಿಫೆನ್ಸ್ ಕಂಪನಿಗಳಿಗೆ ವಿನಾಯಿತಿ ನೀಡಲಾಗಿದೆ. ಅನುಮತಿಗೆ ಜಿಲ್ಲಾಧಿಕಾರಿಗೆ ಅರ್ಜಿ ಹಾಕಬೇಕು, ನೌಕರರನ್ನು ಅವರ ಆವರಣದಲ್ಲಿಟ್ಟುಕೊಂಡು ಕೆಲಸ ಮಾಡಿಸುವುದು, ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್ ಇನ್ನಿತರ ಷರತ್ತುಗಳೊಂದಿಗೆ ಅವಕಾಶ ನೀಡಲಾಗುವುದು. ಉಳಿದ ಎಲ್ಲ ಕೈಗಾರಿಕೆ ಬಂದ್ ಮಾಡಬೇಕು ಎಂದರು.
    ಕೋಲಾರ, ಮುಳಬಾಗಿಲು, ಶ್ರೀನಿವಾಸಪುರ, ಮಾಲೂರು ಎಪಿಎಂಸಿಯಲ್ಲಿನ ಚಟುವಟಿಕೆಗೆ ನಿರ್ಬಂಧವಿಲ್ಲ. ರಾಜ್ಯ ಸರ್ಕಾರ ವಿಧಿಸಿದ ನಿಯಮ ಪಾಲಿಸಬೇಕು, ಅಲ್ಲಿ ಸ್ಯಾನಿಟೈಸೇಷನ್ ಮಾಡುವ ಕಾರ್ಯವನ್ನು ಆಡಳಿತ ಮಂಡಳಿ ಪದಾಧಿಕಾರಿಗಳು ನೋಡಿಕೊಳ್ಳಬೇಕು ಎಂದರು.

    ಕರೊನಾಮುಕ್ತ ಹಳ್ಳಿಗಳು: ಪ್ರಧಾನಿ ನರೇಂದ್ರ ಮೋದಿ ಕರೊನಾಮುಕ್ತ ಗ್ರಾಮಕ್ಕೆ ಕರೆ ನೀಡಿದ್ದು, ಜಿಲ್ಲೆಯಲ್ಲಿರುವ ಒಟ್ಟು 1853 ಹಳ್ಳಿಗಳಲ್ಲಿ 826 ಗ್ರಾಮಗಳಲ್ಲಿ ಕರೊನಾಮುಕ್ತವಾಗಿವೆ. ಇನ್ನುಳಿದ ಹಳ್ಳಿಗಳ ಬಗ್ಗೆ ಗಮನಹರಿಸಬೇಕು. ಒಂದು ತಿಂಗಳವರೆಗೆ ಕರೊನಾ ಪ್ರಕರಣಗಳೇ ಇಲ್ಲದ ಗ್ರಾಪಂಗಳಿಗೆ ತಾಲೂಕಿಗೆ ಒಂದರಂತೆ ಪ್ರೋತ್ಸಾಹಧನ ನೀಡುವುದಾಗಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಕಟಿಸಿದ್ದಾರೆ. ಜಿಲ್ಲೆಯಲ್ಲಿ ಎಷ್ಟು ಗ್ರಾಪಂಗಳು ಯಾವುದೇ ಪ್ರಕರಣಗಳಿಲ್ಲದೆ ಕಾಪಾಡಿಕೊಂಡು ಬರುತ್ತವೋ ಅಂತಹ ಗ್ರಾಪಂಗಳಿಗೆ ಪ್ರೋತ್ಸಾಹಧನ ಮತ್ತು ಅಭಿನಂದನಾ ಪತ್ರ ನೀಡಲಾಗುವುದು ಎಂದರು. 45 ವರ್ಷ ಮೇಲ್ಪಟ್ಟವರಿಗೆ ಶೇ.100 ಲಸಿಕೀಕರಣ ಮಾಡುವ ಗ್ರಾಪಂಗಳಿಗೂ ಜಿಲ್ಲಾಡಳಿತದಿಂದ ಪ್ರೋತ್ಸಾಹಧನ ನೀಡಲಾಗುವುದು. ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯರು, ಜನನಾಯಕರು ಮುತುವರ್ಜಿ ವಹಿಸಬೇಕು ಎಂದರು.

    ಕಾಳಜಿ ಕೇಂದ್ರ: ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಹೆಚ್ಚಿಸಲಾಗುತ್ತಿದ್ದು, 576 ಮಂದಿ ದಾಖಲಾಗಿದ್ದಾರೆ. ಈ ಸಂಖ್ಯೆ ತೃಪ್ತಿಕರವಾಗಿಲ್ಲ, ಹೋಂ ಐಸೋಲೇಷನ್‌ನಲ್ಲಿದ್ದರೆ ಮನೆಯಿಂದ ಹೊರಗಡೆ ಓಡಾಡಿದರೆ ಪೊಲಿಸರು ಹಾಗೂ ಪಂಚಾಯಿತಿಯವರು, ಪೌರಾಯುಕ್ತ, ಮುಖ್ಯಾಧಿಕಾರಿಗಳು ಅವರನ್ನು ಗುರುತಿಸಿ ಕಾಳಜಿ ಕೇಂದ್ರಕ್ಕೆ ದಾಖಲಿಸಬೇಕು ಎಂದರು.
    ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ಡಿಸಿ ಡಾ.ಆರ್. ಸೆಲ್ವಮಣಿ, ಎಸ್ಪಿ ಕಾರ್ತಿಕ್‌ರೆಡ್ಡಿ, ಕೆಜಿಎಫ್ ಎಸ್ಪಿ ಇಲಾಕಿಯಾ ಕರುಣಾಕರನ್, ಡಿಎಚ್‌ಒ ಡಾ ಎಂ.ಜಗದೀಶ್, ಜಿಲ್ಲಾ ಸರ್ಜನ್ ಡಾ. ರವಿಕುಮಾರ್, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

    20 ಟನ್ ಆಮ್ಲಜನಕ: ನನ್ನ ಮನವಿ ಮೇರೆಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಕೋಲಾರಕ್ಕೆ ಭೇಟಿ ನೀಡಿದ್ದರು. ಜಿಲ್ಲೆಯಲ್ಲಿ ಆಮ್ಲಜನಕ ಕೊರತೆಯಾಗದಂತೆ ಎಚ್ಚರಿಕೆ ವಹಿಸಲು ನಾನು ಹಾಗೂ ಸಂಸದರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕುವೈತ್ ಸರ್ಕಾರದಿಂದ ರಾಜ್ಯಕ್ಕೆ ಬಂದ 20 ಟನ್ ಆಕ್ಸಿಜನ್ ಅನ್ನು ಕೋಲಾರಕ್ಕೆ ನೀಡಲಾಗುತ್ತಿದೆ. ಇದು ಜಿಲ್ಲೆಗೆ ಸಿಗುವ ಹೆಚ್ಚುವರಿ ಆಕ್ಸಿಜನ್. ಇದಕ್ಕಾಗಿ ಮುಖ್ಯಮಂತ್ರಿಗಳು ಹಾಗೂ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವೆ ಎಂದು ಲಿಂಬಾವಳಿ ಹೇಳಿದರು.

    ಬಸ್‌ನಲ್ಲೇ ಆಕ್ಸಿಜನ್ ವ್ಯವಸ್ಥೆ: ಕೆಎಸ್ಸಾರ್ಟಿಸಿ ವತಿಯಿಂದ ಜಿಲ್ಲಾಸ್ಪತ್ರೆಗೆ ಸಿದ್ಧಪಡಿಸಿದ ಮೊಬೈಲ್ ಆಕ್ಸಿಜನ್ ಬಸ್‌ನಲ್ಲಿ 6 ಆಕ್ಸಿಜನ್ ಸಿಲಿಂಡರ್ ಹಾಗೂ ತುರ್ತು ಸಂದರ್ಭಕ್ಕೆ ಒಂದು ಆಕ್ಸಿಜನ್ ಸಾಂದ್ರಕ ಅಳವಡಿಸಲು ಅವಕಾಶವಿದೆ. ಒಟ್ಟು 7 ರೋಗಿಗಳ ಚಿಕಿತ್ಸೆಗೆ ಅವಕಾಶವಿದೆ. ಬಸ್ ಎಸ್ಸೆನ್ನಾರ್ ಆಸ್ಪತ್ರೆ ಆವರಣದಲ್ಲಿ ನಿಲ್ಲಲಿದೆ. ಆಕ್ಸಿಜನ್ ಅವಶ್ಯವಿರುವ ಸೋಂಕಿತರಿಗೆ ಹಾಸಿಗೆ ಸಿಗದಿದ್ದರೆ ಬಸ್‌ನಲ್ಲಿ ಆಕ್ಸಿಜನ್ ನೀಡಲಾಗುವುದು. ಆಕ್ಸಿಜನ್ ಬೇಕಿರುವ ರೋಗಿ ಹಳ್ಳಿಯಿಂದ ಬರಬೇಕಿದ್ದರೆ ಅವರಿಗೂ ಈ ಬಸ್ ಬಳಸಿಕೊಳ್ಳಲು ಅವಕಾಶವಿದೆ ಎಂದು ಲಿಂಬಾವಳಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts