More

    300 ಕೋಟಿ ರೂ. ವೆಚ್ಚದ ಕಾಮಗಾರಿ: ಕುಕ್ಕೆ ಮಾಸ್ಟರ್ ಪ್ಲಾನ್ ಯೋಜನೆಯ ಸಭೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ

    ಸುಬ್ರಹ್ಮಣ್ಯ: ಕುಕ್ಕೆ ಕ್ಷೇತ್ರದಲ್ಲಿ ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ಮೂರನೇ ಹಂತದ ಮಾಸ್ಟರ್ ಪ್ಲಾನ್ ಕಾಮಗಾರಿ ಬಗ್ಗೆ ಮಂಗಳವಾರ ಸಮಾಲೋಚನಾ ಸಭೆ ನಡೆಯಿತು.

    ದೇವಳದ ವಾಯುವ್ಯ ದಿಕ್ಕಿನಲ್ಲಿ ಮೂರು ಸಾವಿರ ಜನ ಕುಳಿತು ಭೋಜನ ಸ್ವೀಕರಿಸಲು ಸಾಧ್ಯವಾಗುವಂತಹ ಮೂರು ಅಂತಸ್ತಿನ ದಾಸೋಹ ಭವನ ನಿರ್ಮಾಣವಾಗಲಿದೆ. ಇದನ್ನು ಕರಾವಳಿ ಜಿಲ್ಲೆಯ ಪಾರಂಪರಿಕ ಶೈಲಿಯಲ್ಲಿ ವಿನ್ಯಾಸ ಮಾಡಲಾಗುವುದು ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಸುಬ್ರಹ್ಮಣ್ಯ ಸಮೀಪದ ಇಂಜಾಡಿ ಎಂಬಲ್ಲಿ ಒಂದು ಸಾವಿರ ಜನ ಕುಳಿತುಕೊಳ್ಳುವ ಸಭಾಭವನ ನಿರ್ಮಾಣ, ಪಾರ್ಕಿಂಗ್, ಶೌಚಗೃಹ, ತುರ್ತು ವೈದ್ಯಕೀಯ ಸೇವೆ, ಇನ್ನಿತರ ವಸತಿ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

    ಆಶ್ಲೇಷ ಬಲಿ ಪೂಜಾ ಮಂದಿರವನ್ನು ದೇವಸ್ಥಾನದ ಉತ್ತರ ಭಾಗದಲ್ಲಿ ಮಾಡಲು ಸಲಹೆ ಕೇಳಿ ಬಂತು. ಹೊರ ಗೋಪುರವನ್ನು ವಿಸ್ತರಿಸಿ, ವಾಸ್ತು ಪ್ರಕಾರ ಕಟ್ಟಡ ನಿರ್ಮಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

    ಪ್ರತ್ಯೇಕ ಪವರ್‌ಗ್ರಿಡ್: 20 ಕೋಟಿ ರೂ. ವೆಚ್ಚದಲ್ಲಿ ಕುಕ್ಕೆ ಕ್ಷೇತ್ರಕ್ಕೆ ಮಾತ್ರವೇ ವಿದ್ಯುತ್ ಒದಗಿಸಲು ಸಹಕಾರಿಯಾಗುವ ನೂತನ ಪವರ್ ಸ್ಟೇಷನ್ ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳಲ್ಲಿ ಸಚಿವರಾದ ಎಸ್.ಅಂಗಾರ ಅವರ ಜತೆ ತೆರಳಿ ಮಾತನಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಅಭಿವೃದ್ಧಿ ಕೆಲಸಗಳು ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಚಿವ ಎಸ್.ಅಂಗಾರ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ನೈಸರ್ಗಿಕ ಗೋಶಾಲೆ: ಸುಬ್ರಹ್ಮಣ್ಯ ವ್ಯಾಪ್ತಿಯ ಐನೆಕಿದು ಎಂಬಲ್ಲಿ 17 ಎಕರೆ ಜಾಗದಲ್ಲಿ ದೇವಳದ ವತಿಯಿಂದ ನೈಸರ್ಗಿಕ ಗೋಶಾಲೆ ನಿರ್ಮಿಸುವ ಬಗ್ಗೆ ತೀರ್ಮಾನಿಸಲಾಯಿತುಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಜ್ಞಾನಾಸಕ್ತರಿಗೆ ಮಲೆ ಕುಟೀರಗಳನ್ನು ನಿರ್ಮಿಸುವಂತೆಯೂ ಸಲಹೆ ಕೇಳಿ ಬಂತು.

    ಮೀನುಗಾರಿಕೆ ಸಚಿವ ಎಸ್.ಅಂಗಾರ, ಧಾರ್ಮಿಕದತ್ತಿ ಇಲಾಖಾ ಆಯುಕ್ತೆ ರೋಹಿಣಿ ಸಿಂಧೂರಿ, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ಗೋವಿಂದ ಭಟ್, ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್, ಧಾರ್ಮಿಕ ದತ್ತಿ ಇಲಾಖೆ ಕೇಂದ್ರ ಸ್ಥಾನೀಯ ಸಹಾಯಕ ಅಭಿಜಿನ್, ಉಪ ಆಯುಕ್ತ ಜಯಪ್ರಕಾಶ್, ಸಹಾಯಕ ಆಯುಕ್ತ ಸಣ್ಣ ರಂಗಯ್ಯ, ಕುಕ್ಕೆ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ ವಿ.ಭಟ್, ಪ್ರಸನ್ನ ದರ್ಬೆ, ಮನೋಹರ ರೈ, ಶೋಭಾ ಗಿರಿಧರ್, ಲೋಕೇಶ್ ಮುಂಡೋಕಜೆ, ಶ್ರೀವತ್ಸ, ಮಾಸ್ಟರ್ ಪ್ಲಾನ್ ಸದಸ್ಯರಾದ ಮನೋಜ್ ಸುಬ್ರಹ್ಮಣ್ಯ, ಚಂದ್ರಶೇಖರ ಮರ್ದಾಳ, ಕಿಶೋರ್ ಕುಮಾರ್ ಕೂಜುಗೋಡು, ಚಂದ್ರಶೇಖರ ನಲ್ಲೂರಾಯ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts