More

    3.32 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

    ಹಾವೇರಿ: ಪ್ರಸಕ್ತ ಮೇ ತಿಂಗಳಿನಲ್ಲಿ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗುತ್ತಿದ್ದು, ರೈತರು ಮುಂಗಾರು ಹಂಗಾಮಿಗೆ ಬಿತ್ತನೆಗಾಗಿ ಭೂಮಿ ಹಸನು ಮಾಡಿಕೊಳ್ಳುವ ಕಾರ್ಯವನ್ನು ಭರದಿಂದ ನಡೆಸುತ್ತಿದ್ದಾರೆ.

    ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಕಳೆದ 15 ದಿನಗಳ ಅವಧಿಯಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ಬೇಸಿಗೆಯಲ್ಲಿ ಮಾಗಿ ಉಳುಮೆ ಮಾಡಿದ್ದ ರೈತರು ಅವುಗಳ ಹೆಂಡೆಗಳನ್ನು ಒಡೆಯುವ ಕಾರ್ಯ ಆರಂಭಿಸಿದ್ದಾರೆ. ಇನ್ನೊಂದು ಮಳೆಯಾದರೆ ಬಿತ್ತನೆಗೆ ಭೂಮಿಯೂ ಹದಗೊಳ್ಳಲಿದೆ. ಅದಕ್ಕಾಗಿ ರೈತರು ಜಮೀನುಗಳನ್ನು ಹರಗಿ ಬಿತ್ತನೆಗೆ ಸಿದ್ಧಗೊಳಿಸುವ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.

    ಜಿಲ್ಲೆಯಲ್ಲಿ 2020ರ ಮುಂಗಾರು ಹಂಗಾಮಿನಲ್ಲಿ ಒಟ್ಟು 3,32,826 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ ಏಕದಳ 2,07,973 ಹೆಕ್ಟೇರ್, ದ್ವಿದಳ 7,209 ಹೆಕ್ಟೇರ್, ಎಣ್ಣೆಕಾಳು 31,854 ಹೆಕ್ಟೇರ್, ವಾಣಿಜ್ಯ ಬೆಳೆ 85,790 ಹೆಕ್ಟೇರ್ ಬಿತ್ತನೆ ಗುರಿಯಿದೆ. ಪ್ರಮುಖವಾಗಿ ಮೆಕ್ಕೆಜೋಳ 1,63,318 ಹೆಕ್ಟೇರ್, ಹತ್ತಿ 77,565 ಹೆಕ್ಟೇರ್, ಭತ್ತ 40,235 ಹೆಕ್ಟೇರ್, ಶೇಂಗಾ 19,840 ಹೆಕ್ಟೇರ್ ಹಾಗೂ ಸೋಯಾಅವರೆ 11,360 ಹೆಕ್ಟೇರ್ ಬಿತ್ತನೆಯ ನಿರೀಕ್ಷೆಯನ್ನು ಕೃಷಿ ಇಲಾಖೆ ಹೊಂದಿದೆ.

    ಮುಂಗಾರು ಹಂಗಾಮಿಗೆ 33,650 ಕ್ವಿಂಟಾಲ್ ಬಿತ್ತನೆ ಬೀಜದ ಅವಶ್ಯಕತೆಯಿದೆ. ಇದರಲ್ಲಿ ಮುಖ್ಯವಾಗಿ ಹೈಬ್ರಿಡ್ ಮೆಕ್ಕೆಜೋಳ 12,000 ಕ್ವಿಂಟಾಲ್, ಭತ್ತ 5,500 ಕ್ವಿಂಟಾಲ್, ಸೋಯಾಅವರೆ 12,000 ಕ್ವಿಂಟಾಲ್, ತೊಗರಿ 900 ಕ್ವಿಂಟಾಲ್, ಹೆಸರು 400 ಕ್ವಿಂಟಾಲ್, ಶೇಂಗಾ 2,700 ಕ್ವಿಂಟಾಲ್ ಬೀಜಗಳ ಅವಶ್ಯಕತೆಯಿದೆ.

    ಈವರೆಗೆ 610 ಕ್ವಿಂಟಾಲ್, ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ. ಬಿತ್ತನೆ ಬೀಜ ಸರಬರಾಜು ಮುಂದುವರಿದಿದೆ. 2020ರ ಮುಂಗಾರು ಹಂಗಾಮಿಗೆ ಒಟ್ಟು 1,05,858 ಟನ್ ರಸಗೊಬ್ಬರ ಹಂಚಿಕೆಯಾಗಿದ್ದು, ಯೂರಿಯಾ 48,200 ಟನ್, ಡಿಎಪಿ 21,720 ಟನ್, ಎಂಒಪಿ 4,478 ಟನ್, ಕಾಂಪ್ಲೆಕ್ಸ್ 29,650 ಟನ್ ಇರುತ್ತದೆ. ಇದರಲ್ಲಿ 31,616 ಟನ್ ಸರಬರಾಜಾಗಿದೆ. 485 ಟನ್ ವಿತರಣೆಯಾಗಿ 31,131 ಟನ್ ಉಳಿಕೆಯಾಗಿದೆ. ಅವಶ್ಯಕತೆಗೆ ಅನುಗುಣವಾಗಿ ರಸಗೊಬ್ಬರ ಸರಬರಾಜಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ತಿಳಿಸಿದ್ದಾರೆ.

    ಜಿಲ್ಲೆಯ ಎಲ್ಲ ಪರಿಕರ ಮಾರಾಟಗಾರರು ಕೃಷಿ ಪರಿಕರಗಳನ್ನು ನಿಗದಿಪಡಿಸಿದ ದರದಲ್ಲಿ ಮಾರಾಟ ಮಾಡಲು ಸೂಚನೆ ನೀಡಲಾಗಿದೆ. ಮಾರಾಟ ಮಾಡಿದ ಪರಿಕರಗಳಿಗೆ ಕಡ್ಡಾಯವಾಗಿ ರಸೀದಿಯಲ್ಲಿ ಲಾಟ್, ಬ್ಯಾಚ್ ಸಂಖ್ಯೆಯನ್ನು ಹಾಗೂ ನಿಗದಿಪಡಿಸಿದ ದರವನ್ನು ನಮೂದಿಸಿ ರಸೀದಿ ನೀಡಲು ಸೂಚಿಸಲಾಗಿದೆ. ಯಾವುದೇ ಮಾರಾಟಗಾರರು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ, ಅವಧಿ ಮೀರಿರುವ ಪರಿಕರಗಳನ್ನು ಮಾರಾಟ ಮಾಡುವುದಾಗಲಿ, ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸುವುದಾಗಲಿ ಕಂಡು ಬಂದಲ್ಲಿ ರೈತರು ಕೂಡಲೆ ಸಮೀಪದ ಕೃಷಿ ಅಧಿಕಾರಿಗಳು ಅಥವಾ ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ನೀಡಬೇಕು. ಅಂತಹ ಮಾರಾಟಗಾರರ ವಿರುದ್ಧ ಕಾನೂನು ರೀತಿಯ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

    ರೈತರಿಗೆ ಕೃಷಿ ಇಲಾಖೆ ಸಲಹೆ: ಬಿತ್ತನೆ ಭೂಮಿಗೆ ಕೇವಲ ರಾಸಾಯನಿಕ ಗೊಬ್ಬರಗಳನ್ನು ಬಳಸದೇ ಸಗಣಿ ಗೊಬ್ಬರ, ಎರೆಹುಳು ಗೊಬ್ಬರ ಹಾಗೂ ಇಲಾಖೆಯ ವಿವಿಧ ಯೋಜನೆಗಳಡಿ ಲಭ್ಯವಿರುವ ಜೈವಿಕ ಗೊಬ್ಬರ, ಲಘು ಪೋಷಕಾಂಶಗಳಾದ ಜಿಂಕ್, ಜಿಪ್ಸಂ, ಬೋರಾನ್ ಬಳಸಬೇಕು. ಇದರಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯ. ಕಾಲಕಾಲಕ್ಕೆ ಅವಶ್ಯವಿದ್ದೆಡೆ ಮಾತ್ರ ರಾಸಾಯನಿಕಗಳನ್ನು ಬಳಸಲು ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ ರೈತರಿಗೆ ಸಲಹೆ ನೀಡಿದ್ದಾರೆ.

    ರೈತರು ಅಧಿಕೃತ ಪರವಾನಗಿ ಹೊಂದಿದ ಪರಿಕರ ಮಾರಾಟಗಾರರಿಂದ ಮಾತ್ರ ಬೀಜ, ರಸಗೊಬ್ಬರ ಮತ್ತು ಸಸ್ಯ ಸಂರಕ್ಷಣಾ ಔಷಧಗಳನ್ನು ಖರೀದಿಸಬೇಕು. ಪರಿಕರ ಖರೀದಿಸುವ ಮುನ್ನ ರೈತರು ಬೀಜ ಮತ್ತು ಕೀಟನಾಶಕಗಳ ಲಾಟ್/ಬ್ಯಾಚ್ ಸಂಖ್ಯೆ, ಉತ್ಪಾದನೆಯಾದ ದಿನಾಂಕ, ಅವಧಿ ಕೊನೆಗೊಳ್ಳುವ ದಿನಾಂಕ ಪರಿಶೀಲಿಸಿ ಖರೀದಿಸಬೇಕು. ಖರೀದಿಸಿದ ಪರಿಕರಗಳಿಗೆ ಕಡ್ಡಾಯವಾಗಿ ರಸೀದಿಯಲ್ಲಿ ಲಾಟ್/ಬ್ಯಾಚ್ ಸಂಖ್ಯೆಯನ್ನು ಹಾಗೂ ನಿಗದಿಪಡಿಸಿದ ದರವನ್ನು ನಮೂದಿಸಿರುವುದನ್ನು ಖಾತರಿ ಪಡಿಸಿಕೊಂಡು ರಸೀದಿಯನ್ನು ಪಡೆಯಬೇಕು. ಯಾವುದೇ ಕಾರಣಕ್ಕೂ ರೈತರು ಆಮಿಷಕ್ಕೊಳಗಾಗದೇ ಪರಿಕರಗಳ ಗುಣಮಟ್ಟವನ್ನು ಖಾತರಿಪಡಿಸಿಕೊಂಡು ಖರೀದಿಸಬೇಕು. | ಬಿ. ಮಂಜುನಾಥ, ಕೃಷಿ ಇಲಾಖೆ ಜಂಟಿ ನಿರ್ದೇಶಕ, ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts