More

    ಮಾದಪ್ಪನ ಹುಂಡಿಯಲ್ಲಿ 3.13 ಕೋಟಿ ರೂ. ಸಂಗ್ರಹ

    ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿಯಲ್ಲಿ ಈ ಬಾರಿ 25 ದಿನಗಳ ಅವಧಿಯಲ್ಲಿ 3.13 ಕೋಟಿ ರೂ. ಸಂಗ್ರಹವಾಗುವುದರ ಮೂಲಕ ದಾಖಲೆ ನಿರ್ಮಿಸಿದೆ.

    ಮ. ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಮಂಗಳವಾರ ಬೆಳಗ್ಗೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ಆರಂಭಿಸಲಾಯಿತು. ಎಣಿಕೆ ಕಾರ್ಯವು ರಾತ್ರಿ 10.30 ರವರೆಗೂ ನಡೆಯಿತು.

    ಈ ಬಾರಿ ಮ.ಬೆಟ್ಟದಲ್ಲಿ 5 ದಿನಗಳ ಕಾಲ ನಡೆದ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ಹಾಗೂ ಸರ್ಕಾರಿ ರಜಾ ದಿನಗಳಂದು ಲಕ್ಷಾಂತರ ಭಕ್ತರು ಭೇಟಿ ನೀಡಿದ್ದರು. ಹರಕೆಹೊತ್ತ ಭಕ್ತರು ಹುಂಡಿಗಳಲ್ಲಿ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಹಾಕಿದ್ದರು. ಹುಂಡಿ ಎಣಿಕೆಯಲ್ಲಿ ಈ ಬಾರಿ 3,13,00,931 ರೂ. ನಗದು, 47 ಗ್ರಾಂ ಚಿನ್ನ ಹಾಗೂ 2309 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಕಳೆದ ಬಾರಿ ಮಾ.1 ರಂದು ನಡೆದ ಹುಂಡಿ ಎಣಿಕೆಯಲ್ಲಿ 28 ದಿನದ ಅವಧಿಗೆ 1,82,33,071 ರೂ. ನಗದು, 41 ಗ್ರಾಂ ಚಿನ್ನ ಹಾಗೂ 1200 ಗ್ರಾಂ ಬೆಳ್ಳಿ ಸಂಗ್ರಹವಾಗಿತ್ತು.

    ಹುಂಡಿ ಹಣದಲ್ಲಿ ದಾಖಲೆ: ಪ್ರತಿ ವರ್ಷ ಮಹಾ ಶಿವರಾತ್ರಿಯಲ್ಲಿ ಮಾರ್ಚ್ ತಿಂಗಳಲ್ಲಿ ಹುಂಡಿಯಲ್ಲಿ ದಾಖಲೆಯ ಹಣ ಸಂಗ್ರಹವಾಗುತ್ತದೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ 2 ಬಾರಿ ಹುಂಡಿ ಎಣಿಕೆ ನಡೆದಿದ್ದು, ಇದರಲ್ಲಿ 2,86,17,698 ರೂ. ಹಾಗೂ 1,82,30,192 ಸೇರಿದಂತೆ 4,68,47,890 ರೂ. ಸಂಗ್ರವಾಗಿತ್ತು. ಈ ವರ್ಷ 1,82,33,071 ರೂ ಹಾಗೂ 3,13,00,931 ರೂ. ಸೇರಿದಂತೆ ಒಟ್ಟು 4,95,34,002 ರೂ ಸಂಗ್ರಹವಾಗಿದ್ದು, ಈ ಅವಧಿಯಲ್ಲಿ ಕಳೆದ ವರ್ಷಕ್ಕಿಂತಲೂ 27 ಲಕ್ಷ ರೂ. ಹೆಚ್ಚು ಸಂಗ್ರಹವಾಗಿದೆ.

    ವಿದೇಶಿ ನೋಟುಗಳು: ಹುಂಡಿ ಎಣಿಕೆಯಲ್ಲಿ ಚಲಾವಣೆ ಇಲ್ಲದ 2 ಸಾವಿರ ರೂ. ಮುಖಬೆಲೆಯ 26 ನೋಟುಗಳು, 2 ಡಾಲರ್, ಬಾಂಗ್ಲಾದೇಶ, ನೇಪಾಳ, ಮಲೇಷಿಯಾ ಸೇರಿದಂತೆ ಇತರ ದೇಶಗಳ 7 ವಿದೇಶಿ ನೋಟುಗಳು ದೊರೆತಿವೆ.

    ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕಾಧೀಕ್ಷಕ ನಾಗೇಶ್, ಜಿಲ್ಲಾಧಿಕಾರಿ ಕಚೇರಿ ಮುಜರಾಯಿ ಇಲಾಖೆಯ ಶ್ವೇತಾ, ಬ್ಯಾಂಕ್ ಆಫ್ ಬರೋಡ ನೌಕರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ಎಣಿಕೆಯಲ್ಲಿ ಭಾಗವಹಿಸಿದ್ದರು.

    ಮಹಾ ಶಿವರಾತ್ರಿ ಜಾತ್ರೆಯ ವೇಳೆ ಸರ್ಕಾರಿ ರಜೆ ಹಾಗೂ ಶಕ್ತಿ ಯೋಜನೆಯ ಪರಿಣಾಮ ಮ.ಬೆಟ್ಟಕ್ಕೆ ಸುಮಾರು 8 ಲಕ್ಷ ಭಕ್ತರು ಭೇಟಿ ನೀಡಿದ್ದರು. ಹಾಗಾಗಿ, ಈ ಬಾರಿ ಹುಂಡಿಯಲ್ಲಿ ಹೆಚ್ಚು ಹಣ ಸಂಗ್ರಹವಾಗಿ ದಾಖಲೆ ನಿರ್ಮಿಸಿರುವುದು ಭಕ್ತರು ಮಾದಪ್ಪನ ಬಗ್ಗೆ ಹೊಂದಿರುವ ಭಕ್ತಿಗೆ ಸಾಕ್ಷಿಯಾಗಿದೆ.
    ಎ.ಈ ರಘು
    ಕಾರ್ಯದರ್ಶಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮ.ಬೆಟ್ಟ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts