More

    3 ದಿನಕ್ಕೊಮ್ಮೆ ನೀರು ಪೂರೈಕೆ, ಪರೀಕ್ಷಾರ್ಥ ಚಾಲನೆ ಇಂದಿನಿಂದ

    ಹುಬ್ಬಳ್ಳಿ: ಅವಳಿ ನಗರದ ನಿವಾಸಿಗಳಿಗೆ ಪ್ರತಿ 3 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲು ಕರ್ನಾಟಕ ಜಲ ಮಂಡಳಿ ಸಜ್ಜಾಗಿದ್ದು, ಬುಧವಾರ (ಜ. 29) ದಿಂದ ಪರೀಕ್ಷಾರ್ಥ ಚಾಲನೆ (ಟ್ರಯಲ್ ರನ್) ನಡೆಸಲಿದೆ.

    ಮಲಪ್ರಭಾದಿಂದ ಹೆಚ್ಚುವರಿಯಾಗಿ ನಿತ್ಯ 40 ಮಿಲಿಯನ್ ಲೀಟರ್ (ಎಂಎಲ್​ಡಿ) ನೀರೆತ್ತುವ 26 ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣಗೊಂಡ ಪರಿಣಾಮ ಈ ಯೋಜನೆ ಚಾಲನೆಗೊಳ್ಳಲಿದೆ. ಈ ಕಾಮಗಾರಿಯಡಿ ಸವದತ್ತಿ ಹಾಗೂ ಅಮ್ಮಿನಭಾವಿಯಲ್ಲಿ ನಿರ್ವಿುಸಿದ ವಿದ್ಯುತ್ ಸಬ್ ಸ್ಟೇಷನ್​ಗೆ ಮಂಗಳವಾರ ವಿದ್ಯುತ್ ಪರಿವೀಕ್ಷಕರು (ಬೆಂಗಳೂರು) ಅನುಮತಿ ನೀಡಿದ್ದಾರೆ. ಇದು ಟ್ರಯಲ್ ರನ್​ಗೆ ದಾರಿ ಮಾಡಿಕೊಟ್ಟಿದೆ.

    ‘ಪ್ರತಿ 3 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲು ಬುಧವಾರದಿಂದ ಟ್ರಯಲ್ ರನ್ ನಡೆಸಲಿದ್ದೇವೆ. ಕೆಲ ದಿನಗಳಲ್ಲಿ ಈ ಆವರ್ತನೆ ನಿಯಮಿತಗೊಳ್ಳಲಿದೆ. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ರ್ಚಚಿಸಿ ಉದ್ಘಾಟನೆಗೆ ದಿನ ನಿಗದಿ ಪಡಿಸಬೇಕಿದೆ’ ಎಂದು ಜಲಮಂಡಳಿ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ ಮಾಡ್ಯಾಳ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಅವಳಿ ನಗರದ ಬಹುತೇಕ ವಾರ್ಡ್​ಗಳಲ್ಲಿ ಸದ್ಯ ಪ್ರತಿ 5-6 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದೀಗ ಹೆಚ್ಚುವರಿಯಾಗಿ 40 ಎಂಎಲ್​ಡಿ ನೀರು ಲಭ್ಯವಾಗುತ್ತಿರುವುದರಿಂದ ಪ್ರತಿ 3 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುವುದಾಗಿದೆ ಜಲಮಂಡಳಿ ಹೇಳಿದೆ. ಮಳೆಗಾಲಕ್ಕೂ ಪೂರ್ವ ಅವಳಿ ನಗರದಲ್ಲಿ ಪ್ರತಿ 7-8 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಆಗಸ್ಟ್​ನಲ್ಲಿ ಸುರಿದ ದಾಖಲೆಯ ಮಳೆಗೆ ಕುಡಿಯುವ ನೀರಿನ ಮೂಲವಾದ ಕಲಘಟಗಿ ನೀರಸಾಗರ ಜಲಾಶಯ ಪೂರ್ಣ ಭರ್ತಿಯಾದ ಪರಿಣಾಮ ಪ್ರತಿ 5 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲು ಸಾಧ್ಯವಾಗಿತ್ತು. ಸೆಪ್ಟೆಂಬರ್ 2016ರಲ್ಲಿ ನೀರ ಸಾಗರ ಜಲಾಶಯ ಬರಿದಾಗಿತ್ತು.

    ನಿರಂತರ ನೀರು ಪೂರೈಕೆ ಸ್ಥಗಿತ: ಅವಳಿ ನಗರದ ಕೆಲ ವಾರ್ಡ್​ಗಳಿಗೆ ಸೀಮಿತವಾಗಿರುವ ನಿರಂತರ ನೀರು ಯೋಜನೆಯಡಿ ನೀರು ಪೂರೈಕೆ ವ್ಯವಸ್ಥೆ ಸೋಮವಾರ ರಾತ್ರಿಯಿಂದ ಮಂಗಳವಾರ ಮಧ್ಯಾಹ್ನದವರೆಗೆ ಸ್ಥಗಿತಗೊಂಡ ಪರಿಣಾಮ ಜನರು ಪರದಾಡಿದರು. ಕೆಲ ಎತ್ತರದ ಪ್ರದೇಶಗಳಿಗೆ ಮಂಗಳವಾರ ರಾತ್ರಿಯಾದರೂ ನೀರು ಪೂರೈಕೆ ಇರಲಿಲ್ಲ.

    ಮಲಪ್ರಭಾದಿಂದ ಹೆಚ್ಚುವರಿಯಾಗಿ 40 ಎಂಎಲ್​ಡಿ ನೀರು ಎತ್ತುವ ಕಾಮಗಾರಿ ಪೂರ್ಣಗೊಂಡು ಪರೀಕ್ಷಾರ್ಥ ಚಾಲನೆಗೆ ಸಿದ್ಧತೆ ಮಾಡಿಕೊಳ್ಳಲು ಅಮ್ಮಿನಭಾವಿ ಹಾಗೂ ಸವದತ್ತಿಯಲ್ಲಿ ಶಟ್​ಡೌನ್ (ಪೂರೈಕೆ ಸ್ಥಗಿತ) ಪಡೆದಿದ್ದರಿಂದ ನೀರು ಪೂರೈಕೆಯಾಲ್ಲಿ ವ್ಯತ್ಯಯವಾಗಿದೆ. ಈ ಕುರಿತು ಮುಂಚಿತವಾಗಿ ಪ್ರಕಟಣೆ ನೀಡಿದ್ದೇವೆ ಎಂದು ಜಲಮಂಡಳಿ ಹೇಳಿದೆ. ಆದರೆ, ಮಂಗಳವಾರ ರಾತ್ರಿಯಾದರೂ ಶಕ್ತಿ ಕಾಲನಿ ಸುತ್ತಮುತ್ತಲಿನ ಬಡಾವಣೆಗಳಿಗೆ ನೀರು ಪೂರೈಕೆ ಪುನಾರಂಭಗೊಂಡಿರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts