More

    3 ತಿಂಗಳೊಳಗೆ ಹೊಸ ಮೀಸಲಾತಿ ಪಟ್ಟಿ

    ಗದಗ: ಕಳೆದ ಮೂರು ವರ್ಷಗಳಿಂದ ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಹಿಡಿದಿದ್ದ ಗ್ರಹಣ ಕೊನೆಗೂ ಬಿಟ್ಟಂತಾಗಿದೆ. ಮೂರು ತಿಂಗಳೊಳಗೆ ನಗರಸಭೆಗೆ ಹೊಸ ಮೀಸಲಾತಿ ಪಟ್ಟಿ ಸಿದ್ಧಪಡಿಸಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದೆ.
    2018 ಅಕ್ಟೋಬರ್ 11 ರಂದು ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಗದಗ-ಬೆಟಗೇರಿ ನಗರಸಭೆ ವಾರ್ಡ್​ವಾರು ಮೀಸಲಾತಿ ಪಟ್ಟಿ ಹೊರಡಿಸಿತ್ತು. ಈ ಮೀಸಲಾತಿಯಲ್ಲಿ ನ್ಯೂನತೆಗಳಿದ್ದು, ಸಾಮಾಜಿಕ ನ್ಯಾಯ ಪಾಲನೆಯಾಗಿಲ್ಲ. ಮೀಸಲಾತಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ನಗರದ ಅನೇಕರು ಧಾರವಾಡ ಹೈಕೋರ್ಟ್ ಮೆಟ್ಟಿಲು ಏರಿದ್ದರು. ಈ ಕುರಿತು ಹಲವಾರು ಸಲ ವಿಚಾರಣೆಗಳು ನಡೆದವು. 2021 ಜೂ.25ರಂದು ನಡೆದ ವಿಚಾರಣೆಯಲ್ಲಿ ಹೊಸ ಮೀಸಲಾತಿ ಪಟ್ಟಿ ಅಧಿಸೂಚನೆ ಹೊರಡಿಸಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿತ್ತು. ಗದಗ-ಬೆಟಗೇರಿ ನಗರಸಭೆ ಜತೆಗೆ ಹೊಸಪೇಟೆ ನಗರಸಭೆ, ಅಥಣಿ, ಅಣ್ಣಿಗೇರಿ, ಬಂಕಾಪುರ ಪುರಸಭೆಗೆ ವಾರ್ಡ್​ವಾರು ಮೀಸಲಾತಿ ವಿರೋಧಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದವು. ಈ ಐದೂ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿಗೆ ನೂತನ ಅಧಿಸೂಚನೆ ಹೊರಡಿಸಲಾಗುವುದು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶ ನೀಡಲಾಗುವುದು. ಅಂತಿಮ ಅಧಿಸೂಚನೆ ಹೊರಡಿಸಲು ಮೂರು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಈ ಮಾಹಿತಿಯನ್ನು ಹೈಕೋರ್ಟ್​ಗೆ ಸಲ್ಲಿಸಬೇಕೆಂದು ಸರ್ಕಾರದ ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಎಲ್. ಪ್ರಸಾದ ಅವರು ಧಾರವಾಡ ಹೈಕೋರ್ಟ್ ಅಡಿಷನಲ್ ಅಡ್ವೋಕೇಟ್ ಜನರಲ್ ಅವರಿಗೆ ಮನವಿ ಮಾಡಿದ್ದಾರೆ. 2018ರಲ್ಲಿ ಪ್ರಕಟಗೊಂಡಿದ್ದ ವಾರ್ಡ್​ವಾರು ಮೀಸಲಾತಿ ಪಟ್ಟಿ ರದ್ದುಪಡಿಸಿ ಹೊಸ ಮೀಸಲಾತಿ ಪಟ್ಟಿ ಹೊರಡಿಸಲು ಸರ್ಕಾರ ಮುಂದಾಗಿರುವುದರಿಂದ ಅವಳಿನಗರದಲ್ಲಿ ರಾಜಕೀಯ ಚಟುವಟಿಕೆ ಬಿರುಸಿನಿಂದ ಸಾಗಿವೆ.
    ಕಾಂಗ್ರೆಸ್​ಗೆ ಪೂರಕವಾಗಿತ್ತು..!
    ಳೆದ ಚುನಾವಣೆಯಲ್ಲಿ 35 ವಾರ್ಡ್​ಗಳ ಪೈಕಿ 22 ವಾರ್ಡ್ ಕಾಂಗ್ರೆಸ್ ಗೆಲುವು ಸಾಧಿಸಿ ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಈ ಸಲ ವಾರ್ಡ್​ಗಳ ಪರಿಷ್ಕರಣೆ ಆಗಿದ್ದು, ಹಲವಾರು ಪ್ರದೇಶಗಳು ಕೊಂಚ ಅದಲು ಬದಲಾಗಿವೆ. ಅಲ್ಲದೆ, ಮೀಸಲಾತಿ ಬದಲಾಗಿದ್ದರಿಂದ ಹಾಲಿ ಅನೇಕ ಸದಸ್ಯರಿಗೆ ಸ್ಪರ್ಧಿಸಲು ವಾರ್ಡ್​ಗಳು ಇಲ್ಲದಂತಾಗಿತ್ತು. ಆದರೆ, ಕಾಂಗ್ರೆಸ್​ನ ಕೆಲ ಪ್ರಭಾವಿಗಳು ಮಾತ್ರ ತಮಗೆ ಅನುಕೂಲಕರ ಮೀಸಲಾತಿ ತರುವಲ್ಲಿ ಯಶಸ್ವಿಯಾಗಿದ್ದರು.
    ವಾರ್ಡ್ ಸಂಖ್ಯೆ 2, 4, 13, 16, 17, 18, 23, 25, 29, 33, 34 ವಾರ್ಡ್​ಗಳಲ್ಲಿರುವ ಕಾಂಗ್ರೆಸ್ ಆಕಾಂಕ್ಷಿಗಳು ತಮಗೆ ಬೇಕಾಗಿರುವ ಮೀಸಲಾತಿಯನ್ನು ತರುವಲ್ಲಿ ಸಫಲರಾಗಿದ್ದರು. ಉಳಿದ ವಾರ್ಡ್​ಗಳ ಪೈಕಿ ಬಹುತೇಕ ವಾರ್ಡ್​ಗಳು ಮಹಿಳೆಯರಿಗೆ ಮೀಸಲಾಗಿದ್ದವು. ಹೀಗಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಈ ಮೀಸಲಾತಿ ನುಂಗಲಾರದ ತುತ್ತಾಗಿತ್ತು. ಅಲ್ಲದೆ, ಪರಿಶಿಷ್ಟ ಜಾತಿಯ ಜನರು ಹೆಚ್ಚಿರುವ ಪ್ರದೇಶಗಳಲ್ಲಿ ಸಾಮಾನ್ಯ ವರ್ಗ ಮೀಸಲು ಮಾಡಿರುವುದು, ಮುಂದುವರಿದ ಸಮಾಜದ ಜನರು ವಾಸಿಸುವ ಪ್ರದೇಶಗಳಲ್ಲಿ ಮಹಿಳಾ ಮೀಸಲಾತಿ ನೀಡಿ ಪ್ರಬಲ ಮುಖಂಡರಿಗೆ ಟಿಕೆಟ್ ತಪ್ಪಿಸಲಾಗಿದೆ ಎಂಬ ಆರೋಪವೂ ಇತ್ತು.
    ಇದಲ್ಲದೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗದಗ-ಬೆಟಗೇರಿಯ 35 ವಾರ್ಡ್​ಗಳಲ್ಲಿ ಕಾಂಗ್ರೆಸ್ ಭಾರಿ ಹಿನ್ನಡೆ ಅನುಭವಿಸಿದ್ದು, ಶತಾಯಗತಾಯ ನಗರಸಭೆಯನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕು ಎಂದು ಕಾರಣದಿಂದ ಗೆಲುವು ಸಾಧಿಸುವ ವಾರ್ಡ್​ಗಳಿಗೆ ಅಳೆದುತೂಗಿ ಮೀಸಲಾತಿ ತರಲಾಗಿದೆ ಎಂಬ ಮಾತುಗಳೂ ಕೇಳಿಬಂದಿದ್ದವು.
    ಬಿಜೆಪಿಗೆ ಪ್ರತಿಷ್ಠೆ ಪ್ರಶ್ನೆ
    ಗದಗ-ಬೆಟಗೇರಿ ಅವಳಿನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಹಣಾಹಣಿ ನಡೆಯಲಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವಳಿನಗರದಲ್ಲಿ ಬಿಜೆಪಿ ಗಮನಾರ್ಹ ಮುನ್ನಡೆ ಕಾಯ್ದುಕೊಂಡಿರುವುದು ಕಾಂಗ್ರೆಸ್​ಗೆ ಚಿಂತೆಗೀಡು ಮಾಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವಳಿನಗರದಲ್ಲಿ ಹೆಚ್ಚು ಮತ ಪಡೆದು ಬೀಗುತ್ತಿರುವ ಬಿಜೆಪಿಗೆ ಅದೇ ವರ್ಚಸ್ಸು ಉಳಿಸಿಕೊಳ್ಳುವ ಅನಿವಾರ್ಯತೆ ಇದೆ.
    2018ರಲ್ಲಿ ಪ್ರಕಟಗೊಂಡಿದ್ದ ಪಟ್ಟಿ
    ವಾರ್ಡ್ 1- ಹಿಂದುಳಿದ ವರ್ಗ ಅ ಮಹಿಳೆ, ವಾರ್ಡ್ 2- ಪರಿಶಿಷ್ಟ ಜಾತಿ, ವಾರ್ಡ್ 3- ಹಿಂದುಳಿದ ವರ್ಗ ಎ, ವಾರ್ಡ್ 4- ಸಾಮಾನ್ಯ, ವಾರ್ಡ್ 5- ಸಾಮಾನ್ಯ ಮಹಿಳೆ. ವಾರ್ಡ್ 6- ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 7- ಸಾಮಾನ್ಯ ಮಹಿಳೆ, ವಾರ್ಡ್ 8- ಹಿಂದುಳಿದ ವರ್ಗ ಎ ಮಹಿಳೆ, ವಾರ್ಡ್ 9- ಸಾಮಾನ್ಯ ಮಹಿಳೆ, ವಾರ್ಡ್ 10- ಹಿಂದುಳಿದ ವರ್ಗ ಬ ಮಹಿಳೆ. ವಾರ್ಡ್ 11 ಸಾಮಾನ್ಯ ಮಹಿಳೆ, ವಾರ್ಡ್ 12- ಸಾಮಾನ್ಯ ಮಹಿಳೆ, ವಾರ್ಡ್ 13- ಸಾಮಾನ್ಯ, ವಾರ್ಡ್ 14- ಸಾಮಾನ್ಯ ಮಹಿಳೆ, ವಾರ್ಡ್ 15- ಹಿಂದುಳಿದ ವರ್ಗ ಅ ಮಹಿಳೆ. ವಾರ್ಡ್ 16- ಸಾಮಾನ್ಯ, ವಾರ್ಡ್ 17- ಸಾಮಾನ್ಯ, ವಾರ್ಡ್ 18- ಹಿಂದುಳಿದ ವರ್ಗ ಅ, ವಾರ್ಡ್ 19- ಸಾಮಾನ್ಯ, ವಾರ್ಡ್ 20- ಸಾಮಾನ್ಯ ಮಹಿಳೆ. ವಾರ್ಡ್ 21- ಹಿಂದುಳಿದ ವರ್ಗ ಅ, ವಾರ್ಡ್ 22- ಹಿಂದುಳಿದ ವರ್ಗ ಬ, ವಾರ್ಡ್ 23- ಹಿಂದುಳಿದ ವರ್ಗ ಅ, ವಾರ್ಡ್ 24- ಪರಿಶಿಷ್ಟ ಪಂಗಡ, ವಾರ್ಡ್ 25- ಸಾಮಾನ್ಯ ಮಹಿಳೆ. ವಾರ್ಡ್ 26- ಹಿಂದುಳಿದ ವರ್ಗ ಅ ಮಹಿಳೆ, ವಾರ್ಡ್ 27- ಸಾಮಾನ್ಯ, ವಾರ್ಡ್ 28- ಹಿಂದುಳಿದ ವರ್ಗ ಅ ಮಹಿಳೆ, ವಾರ್ಡ್ 29- ಪರಿಶಿಷ್ಟ ಜಾತಿ, ವಾರ್ಡ್ 30-ಸಾಮಾನ್ಯ ಮಹಿಳೆ. ವಾರ್ಡ್ 31- ಸಾಮಾನ್ಯ, ವಾರ್ಡ್ 32- ಹಿಂದುಳಿದ ವರ್ಗ ಅ, ವಾರ್ಡ್ 33- ಸಾಮಾನ್ಯ, ವಾರ್ಡ್ 34- ಸಾಮಾನ್ಯ, ವಾರ್ಡ್ 35- ಪರಿಶಿಷ್ಟ ಜಾತಿ ಮಹಿಳೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts