More

    275 ರೌಡಿಶೀಟರ್‌ಗಳ ಮನೆ ಮೇಲೆ ಪೊಲೀಸರ ದಾಳಿ

    ಶಿವಮೊಗ್ಗ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಶನಿವಾರ ಜಿಲ್ಲಾದ್ಯಂತ 275 ರೌಡಿಶೀಟರ್‌ಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದರು. ಚುನಾವಣೆ ವೇಳೆ ಕಾನೂನು ಬಾಹಿರ ಚಟುವಟಿಕೆ ನಡೆಸದಂತೆ ಖಡಕ್ ಎಚ್ಚರಿಕೆ ನೀಡಿದರು.

    ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಮಾರ್ಗದರ್ಶನದಲ್ಲಿ ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ ಮತ್ತು ತೀರ್ಥಹಳ್ಳಿ ಉಪ ವಿಭಾಗಗಳಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರು ಏಕಕಾಲಕ್ಕೆ ರೌಡಿಶೀಟರ್‌ಗಳ ಮನೆ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಿದರು. ಶಿವಮೊಗ್ಗ ಜಿಲ್ಲಾದ್ಯಂತ 1,100ಕ್ಕೂ ಅಧಿಕ ರೌಡಿಶೀಟರ್‌ಗಳಿದ್ದು, ಬಹಳಷ್ಟು ರೌಡಿಶೀಟರ್‌ಗಳು ವಿವಿಧ ಪ್ರಕರಣಗಳಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ.
    ಜೈಲಿನಿಂದ ಹೊರಬಂದು ಜೀವನ ನಡೆಸುತ್ತಿರುವ 275 ರೌಡಿಶೀಟರ್‌ಗಳ ಮನೆಗಳಿಗೆ ಭೇಟಿ ನೀಡಿದ ಖಾಕಿ ಪಡೆ, ಮನೆಯಲ್ಲಿದ್ದಾರೋ ಇಲ್ಲವೋ?, ಹಾಲಿ ಯಾವ ಕೆಲಸ ಮಾಡುತ್ತಿದ್ದಾರೆ? ಎಂಬ ಮಾಹಿತಿ ಪಡೆಯಿತು. ಮನೆಯಲ್ಲಿ ಮಾದಕ ವಸ್ತುಗಳು ಹಾಗೂ ಮಾರಕಾಸ್ತ್ರಗಳನ್ನು ಇಟ್ಟುಕೊಂಡಿರುವ ಬಗ್ಗೆಯೂ ಪರಿಶೀಲಿಸಿತು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಮತ್ತು ಶಾಂತಿಭಂಗವನ್ನುಂಟು ಮಾಡದಂತೆ ಎಚ್ಚರಿಕೆ ನೀಡಿತು.
    ಡಿವೈಎಸ್‌ಪಿ ಶಿವಮೊಗ್ಗ ಎ ಉಪ ವಿಭಾಗದ ಬಾಬು ಆಂಜನಪ್ಪ, ಶಿವಮೊಗ್ಗ ಬಿ ಉಪ ವಿಭಾಗದ ಎಂ.ಸುರೇಶ್, ಭದ್ರಾವತಿ ಉಪ ವಿಭಾಗದ ನಾಗರಾಜ್, ಸಾಗರ ಉಪ ವಿಭಾಗದ ಗೋಪಾಲಕೃಷ್ಣ ನಾಯ್ಕ, ಶಿಕಾರಿಪುರ ಉಪ ವಿಭಾಗದ ಕೇಶವ್, ತೀರ್ಥಹಳ್ಳಿ ಉಪ ವಿಭಾಗದ ಗಜಾನನ ವಾಮನ ಸುತಾರ ಮತ್ತು ಆಯಾ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳು, ಸಬ್ ಇನ್‌ಸ್ಪೆಕ್ಟರ್‌ಗಳು ಹಾಗೂ ಸಿಬ್ಬಂದಿ ಒಳಗೊಂಡ ಪ್ರತ್ಯೇಕ ತಂಡಗಳು ಏಕಕಾಲದಲ್ಲಿ ರೌಡಿಶೀಟರ್‌ಗಳ ಮನೆ ಮೇಲೆ ದಾಳಿ ಮಾಡಿತ್ತು. ದಾಳಿಯಲ್ಲಿ ಯಾವುದೇ ಮಾರಕಾಸ್ತ್ರಗಳು ಲಭಿಸಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts