More

    26.55 ಲಕ್ಷ ರೂ.ಗೆ ನೀಲಗಿರಿ ಮರಗಳ ಹರಾಜು, ತಹಸೀಲ್ದಾರ್ ಕೆ. ಮಂಜುನಾಥ್ ಉಪಸ್ಥಿತಿಯಲ್ಲಿ ಪ್ರಕ್ರಿಯೆ

    ತ್ಯಾಮಗೊಂಡ್ಲು: ಮಹಿಮಾಪುರ ವೆಂಕಟರಮಣಸ್ವಾಮಿ ದೇವಾಲಯದ 27 ಎಕರೆ ವಿಸ್ತೀರ್ಣದ ತೋಪಿನಲ್ಲಿದ್ದ ನೀಲಗಿರಿ ಮರಗಳನ್ನು ಶುಕ್ರವಾರ ಹರಾಜು ಮಾಡಲಾಯಿತು. ದೊಡ್ಡಬಳ್ಳಾಪುರದ ಮಹೇಶ್ ಎಂಬುವವರು 26.55 ಲಕ್ಷ ರೂ.ಗೆ ಹರಾಜು ಪಡೆದುಕೊಂಡರು.

    ತಹಸೀಲ್ದಾರ್ ಕೆ.ಮಂಜುನಾಥ್ ಮತ್ತು ಮುಜರಾಯಿ ಸಹಾಯಕ ಆಯುಕ್ತ ಎಂ.ನಾರಾಯಣಸ್ವಾಮಿ ಉಪಸ್ಥಿತಿಯಲ್ಲಿ ದೇವಾಲಯದ ಬೆಟ್ಟದ ತಪ್ಪಲಿನಲ್ಲಿ ಹರಾಜು ಮಾಡಲಾಯಿತು.

    ಹಲವು ವರ್ಷಗಳ ಹಿಂದೆ ಕರೀಗೌಡ ಅವರು ಜಿಲ್ಲಾಧಿಕಾರಿ ಆಗಿದ್ದ ಸಂದರ್ಭದಲ್ಲಿ ನೀಲಗಿರಿ ತೋಪುಗಳ ತೆರವಿಗೆ ಕ್ರಮ ಕೈಗೊಂಡಿದ್ದರು. ಸರ್ಕಾರಿ ಜಾಗಗಳಲ್ಲದೆ ವ್ಯವಸಾಯ ಜಮೀನುಗಳಲ್ಲಿ ಇದ್ದ ನೀಲಗಿರಿ ಮರಗಳನ್ನು ತೆರವುಗೊಳಿಸಲು ನೋಟಿಸ್ ಜಾರಿ ಮಾಡಿದ್ದರು.

    ಆದರೆ, ತೆರವು ಕಾರ್ಯಾಚರಣೆ ಆಮೆ ವೇಗದಲ್ಲಿ ಸಾಗುತ್ತಿತ್ತು. ಇದನ್ನು ಗಮನಿಸಿದ ತಹಸೀಲ್ದಾರ್ ಕೆ. ಮಂಜುನಾಥ್ ಅವರು ಸರ್ಕಾರಿ ಜಾಗದಲ್ಲಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಲು ಮುಂದಾಗಿದ್ದರು. ಅದರಂತೆ ಮಹಿಮಾಪುರದ ದೇವಾಲಯದ 27 ಎಕರೆಯಲ್ಲಿದ್ದ ನೀಲಗಿರಿ ತೋಪಿನ ಮರಗಳನ್ನು ಹರಾಜು ಮಾಡಿಸಿದರು. 65 ಜನರು ಬಿಡ್‌ನಲ್ಲಿ ಪಾಲ್ಗೊಂಡಿದ್ದರು.

    ಔಷಧ ವನ: ತೋಪಿನಲ್ಲಿದ್ದ ನೀಲಗಿರಿ ಮರಗಳನ್ನು ತೆರವುಗೊಳಿಸಿದ ಬಳಿಕ ಸ್ವಯಂಸೇವಕರು, ಅರಣ್ಯ ಮತ್ತು ಎನ್‌ಜಿಒಗಳ ನೆರವಿನಿಂದ ಔಷಧ ವನವನ್ನಾಗಿ ರೂಪಿಸುವ ಯೋಜನೆ ಇದೆ. ಇದರಿಂದ ಸುತ್ತಲಿನ ಪರಿಸರ ಉತ್ತಮವಾಗುವ ಜತೆಗೆ ಪಕ್ಷಿ ಸಂಕುಲಕ್ಕೂ ಅನುಕೂಲವಾಗುತ್ತದೆ ಎಂದು ತಹಸೀಲ್ದಾರ್ ಕೆ.ಮಂಜುನಾಥ್ ಹೇಳಿದರು.

    ದೇಗುಲದ ಅಭಿವೃದ್ಧಿಗೆ ಮನವಿ: ನೀಲಗಿರಿ ತೋಪಿನ ಹರಾಜಿನಿಂದ ಬಂದಿರುವ ಹಣದಲ್ಲಿ ದೇವಸ್ಥಾನ ಅಭಿವೃದ್ಧಿಪಡಿಸುವಂತೆ ಗೋವೇನಹಳ್ಳಿ ಪ್ರಕಾಶ್ ನೇತೃತ್ವದಲ್ಲಿ ಗ್ರಾಮಸ್ಥರು ತಹಸೀಲ್ದಾರ್ ಅವರಿಗೆ ಮನವಿ ಮಾಡಿಕೊಂಡರು.

    ಧಾರ್ಮಿಕ ದತ್ತಿ ಇಲಾಖೆ ತಹಸೀಲ್ದಾರ್ ಬಿ.ಜೆ.ಹೇಮಾವತಿ, ದೇವಸ್ಥಾನದ ಸಿಇಒ ಕೆ.ಕೆ.ರಮ್ಯಾ, ಕುಲವನಹಳ್ಳಿ ಗ್ರಾಪಂ ಅಧ್ಯಕ್ಷೆ ಸೌಭಾಗ್ಯ, ಉಪಪತಹಸೀಲ್ದಾರ್ ವಿಮಲಾ, ಕಂದಾಯ ನಿರೀಕ್ಷಕ ಆರ್.ಎನ್. ಮಹೇಶ್‌ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಪುಷ್ಪಲತಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts