More

    ಧರ್ಮದ ತಿರುಳು ಅರಿತು ನಡೆಯಿರಿ

    ಜೇವರ್ಗಿ: ಪ್ರತಿಯೂಬ್ಬರೂ ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಬೇಕಾಗಿದೆ. ಪರೋಪಕಾರಿ ಜೀವನ ನಡೆಸಿದ್ದೆಯಾದರೇ ಜನ್ಮ ಸಾರ್ಥಕವಾಗುವುದರಲ್ಲಿ ಸಂದೇಹವಿಲ್ಲ. ಧರ್ಮದ ಸಾರವೂ ಅದೇ ಆಗಿದೆ. ಹೀಗಾಗಿ ಎಲ್ಲರೂ ಧರ್ಮದ ತಿರುಳು ಅರಿತು ಜೀವನ ನಡೆಸಬೇಕು ಎಂದು ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಕರೆ ನೀಡಿದರು.

    ಪೇಠ-ಫಿರೋಜಾಬಾದ್‌ನಲ್ಲಿ ಸಿದ್ಧಕುಲ ಚಕ್ರವರ್ತಿ, ಸದ್ಗುರು ಶ್ರೀ ವಿಶ್ವಾರಾಧ್ಯರ ೨೪ನೇ ಜಾತ್ರೋತ್ಸವದ ನಿಮಿತ್ತ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಕರ ಸಂಕ್ರಾತಿಯ ಪುಣ್ಯದಿನದಿಂದ ಸೂರ್ಯ ತನ್ನ ಪಥ ಬದಲಾಯಿಸುತ್ತಾರೆ. ಇಂದಿನಿಂದ ಉತ್ತರಾಯಣ ಆರಂಭವಾಗಲಿದೆ. ಪರ್ವಕಾಲದಲ್ಲಿ ನದಿ ಹಾಗೂ ಸಂಗಮದಲ್ಲಿ ಮಂಗಲ ಸ್ನಾನ ಮಾಡುವ ಮೂಲಕ ಪುನೀತರಾಗಬೇಕು ಎಂದರು.

    ನದಿಗಳಲ್ಲಿ ಸ್ನಾನ ಮಾಡಿದ ನಂತರ ಕೊಬ್ಬರಿ, ಎಳ್ಳು-ಬೆಲ್ಲ ದಾನ ಮಾಡಿ ಸ್ನೇಹದಿಂದ ಕೂಡಿ ಬಾಳಬೇಕು. ಭೀಮಾಶಂಕರದಲ್ಲಿ ಹುಟ್ಟಿದ ಭೀಮಾ ನದಿ ಫಂಡರಾಪುರಕ್ಕೆ ಬಂದಾಗ ಚಂದ್ರಭಾಗಾವಾಗಿ ಹೆಸರು ವಾಸಿಯಾಗಿದೆ. ಈ ವೇದಿಕೆಯಲ್ಲಿ ಅನೇಕ ಶಿವಾಚಾರ್ಯರು ಧರ್ಮ ಸಂದೇಶಗಳನ್ನು ನೀಡಿ, ಸಮಾಜವನ್ನು ಸರಿದಾರಿಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೆ ಧರ್ಮ ರಕ್ಷಣೆಗಾಗಿ ಶ್ರಮಿಸಿದ್ದಾರೆ ಎಂದು ನುಡಿದರು.

    ಶಖಾಪುರದ ಸದ್ಗುರು ವಿಶ್ವಾರಾಧ್ಯ ತಪೋವನ ಮಠದ ಪೀಠಾಧಿಪತಿ ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯರು ಮಾತನಾಡಿ, ಕಾಶೀ ಜಗದ್ಗುರುಗಳು ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ರಚಿಸಿ, ೧೮ ಭಾಷೆಗಳಲ್ಲಿ ಮುದ್ರಣ ಮಾಡಿಸಿದ್ದಾರೆ. ಎಲ್ಲರ ಮನೆಗಳಿಗೂ ಲಿಂಗಾಷ್ಟಕದ ಪ್ರತಿಗಳನ್ನು ತಲುಪಿಸುವ ಮಹಾತ್ಕಾರ್ಯ ಮಾಡಿದ್ದಾರೆ. ನಾವೆಲ್ಲರೂ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದು ಹೇಳಿದರು.

    ತಾಂಬಾಳದ ಶ್ರೀ ವಿಜಯಕುಮಾರ ಸ್ವಾಮೀಜಿ, ಪಾಳಾದ ಶ್ರೀ ಡಾ.ಗುರುಮೂರ್ತಿ ಶಿವಾಚಾರ್ಯರು, ವೆಂಕಟಬೇನೂರಿನ ಶ್ರೀ ಸಿದ್ಧರೇಣುಕ ಶಿವಾಚಾರ್ಯರು, ಫಿರೋಜಾಬಾದ್‌ನ ಏಕದಂಡಗಿ ಮಠದ ಶ್ರೀ ಸುರೇಂದ್ರ ಸ್ವಾಮೀಜಿ, ಬೆಳಗುಂಪಾದ ಶ್ರೀ ಅಭಿನವ ಪರುತೇಶ್ವರ ಸ್ವಾಮೀಜಿ, ಕುಳೇಕುಮಟಗಿಯ ಶ್ರೀ ಗುರುಸ್ವಾಮಿ ಶರಣರು, ದರ್ಗಾದ ಸಜ್ಜಾದ್ ನಶೀನ್ ಹಬೀಬ್ ರಹೆಮಾನ್ ಜಹಾಗೀರದಾರ್ ಸಮ್ಮುಖ ವಹಿಸಿದ್ದರು.
    ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಜಿಪಂ ಮಾಜಿ ಸದಸ್ಯ ಅರುಣಕುಮಾರ ಪಾಟೀಲ್, ಗ್ರಾಪಂ ಅಧ್ಯಕ್ಷ ರಾಜಶೇಖರ ಹಾಲು, ರಾಜಶೇಖರ ಸೀರಿ, ಸುರೇಶ ತಿಪ್ಪಶೆಟ್ಟಿ, ನಾಗಣ್ಣ ಪಾಟೀಲ್ ಸಿಂದಗಿ, ಅಬ್ದುಲ್ ಲತೀಫ್ ಜಾಹಾಗೀರದಾರ್, ಬಸವಣಪ್ಪ ಎಸ್. ಶಿರೂರ, ಚಂದ್ರಶೇಖರ ಮಹಾಮನಿ, ಶರಣಪ್ಪ ಬಿ., ಕಲ್ಲಪ್ಪ ಪ್ಯಾಟಿ, ಸಿದ್ದಪ್ಪ ಸಾಹುಕಾರ, ಅರುಣಕುಮಾರ ಶಿರೂರ ಇತರರಿದ್ದರಯ.

    ಡಾ.ಮಹಾಂತೇಶ ಸೊನ್ನ ನಿರೂಪಣೆ ಮಾಡಿದರು.

    ವಿವಿಧ ಧಾರ್ಮಿಕ ಕಾರ್ಯಕ್ರಮ: ಸದ್ಗುರು ವಿಶ್ವಾರಾಧ್ಯರ ಜಾತ್ರೋತ್ಸವ ನಿಮಿತ್ತ ಸೋಮವಾರ ಬೆಳಗ್ಗೆ ಗುರುಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಅಲಂಕಾರ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ೧೧ಕ್ಕೆ ಫಿರೋಜಾಬಾದ್‌ನಿಂದ ವಿಶ್ವಾರಾಧ್ಯರ ಗದ್ದುಗೆವರೆಗೆ ಕುಂಭ, ಕಳಸಗಳೊಂದಿಗೆ ಜಗದ್ಗುರುಗಳ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಸಂಜೆ ೬ಕ್ಕೆ ಅಪಾರ ಭಕ್ತರ ಜೈಘೋಷದ ಮಧ್ಯೆ ರಥೋತ್ಸವ ನೆರವೇರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts