More

    24ರಿಂದ ವೀರಶೈವ  ಲಿಂಗಾಯತ ಮಹಾಸಭಾದ ಮಹಾ ಅಧಿವೇಶನ

    ದಾವಣಗೆರೆ: ವೀರಶೈವ ಲಿಂಗಾಯತ ಸಮಾಜ ಸಂಘಟನೆಯ ಆಶಯ ಹೊತ್ತು ಡಿ.24ರಿಂದ ಮೂರು ದಿನಗಳ ಕಾಲ ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಮಹಾಸಭಾದ 23ನೇ ಮಹಾ ಅಧಿವೇಶನವನ್ನು ಆಯೋಜಿಸಲಾಗಿದೆ.
    ಕರ್ನಾಟಕ, ಕೇರಳ,ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿ, ತೆಲಂಗಾಣ, ಉತ್ತರಪ್ರದೇಶ, ಹರ್ಯಾಣ, ಪಂಜಾಬ್ ಸೇರಿ ದೇಶದ ವಿವಿಧ ಭಾಗಗಳಿಂದ ಒಂದು ಲಕ್ಷ ಜನರು ಪಾಲ್ಗೊಳ್ಳುವರು ಎಂದು ಮಹಾಸಭಾ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಅಧಿವೇಶನದ ಅಂಗವಾಗಿ ರಾಜ್ಯದ 150ಕ್ಕೂ ಅಧಿಕ ವೀರಶೈವ ಮುಖಂಡರ ಸಮ್ಮುಖದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,
    ಸಮಾಜ ಸಂಘಟನೆ, ಒಳಪಂಗಡಗಳ ಭೇದ ಮರೆತು ಒಗ್ಗಟ್ಟು ಪ್ರದರ್ಶನ, ಸಮಸ್ತ ವೀರಶೈವ ಲಿಂಗಾಯ ತರಿಗೆ ಮೀಸಲು, ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಮಹಿಳಾ ಸಬಲತೆ ಸೇರಿ ಪ್ರಮುಖ ವಿಷಯಗಳ ಕುರಿತು ಅಧಿವೇಶನದಲ್ಲಿ ಗೊತ್ತುವಳಿ ಸ್ವೀಕರಿಸಲಾಗುವುದು ಎಂದು ತಿಳಿಸಿದರು.
    ಉಳಿದಂತೆ ಜ್ವಲಂತ ಸಮಸ್ಯೆಗಳ ಚರ್ಚೆ ಜತೆಗೆ ಕೃಷಿ, ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ, ಯುವ, ಮಹಿಳಾ ಗೋಷ್ಠಿ ಹಾಗೂ ಉದ್ದಿಮೆ ಮತ್ತು ಕೈಗಾರಿಕೆ ಕುರಿತು ವಸ್ತುಪ್ರದರ್ಶನ ಆಯೋಜಿಸಲಾಗಿದೆ ಎಂದು ವಿವರಿಸಿದರು.
    ಅಧಿವೇಶನದ ಯಶಸ್ಸಿಗೆ 10ಕ್ಕೂ ಹೆಚ್ಚು ಸಮಿತಿಗಳನ್ನು ನೇಮಿಸಿ ಜವಾಬ್ದಾರಿ ನೀಡಲಾಗುತ್ತಿದೆ. ಮೊದಲ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುವರು.ಎರಡನೇ ದಿನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನ ನೀಡಲಾಗಿದೆ. ಕೊನೇ ದಿನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸುವರು. ಮಠಾಧೀಶರಿಗೂ ಆಮಂತ್ರಣ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
    ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಇತರೆ ಹಿಂದುಳಿದ ವರ್ಗಗಳ ಮೀಸಲು ಶೇ.27 ರಷ್ಟಿದೆ. ವೀರಶೈವ ಲಿಂಗಾಯತರಲ್ಲೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರಿದ್ದಾರೆ, ಹೀಗಾಗಿ ಸಮಾಜಕ್ಕೆ ಮೀಸಲು ಅಗತ್ಯವಿದೆ. ಇಡೀ ಜಗತ್ತಿಗೆ ಸಾಮಾಜಿಕ ನ್ಯಾಯ ಕೊಟ್ಟ ವೀರಶೈವ ಸಮಾಜ ಇಂದು ಸಾಮಾಜಿಕ ನ್ಯಾಯಕ್ಕೆ ಹೋರಾಟ ಮಾಡಬೇಕಾದ ಸ್ಥಿತಿ ಎದುರಾಗಿದೆ ಎಂದರು.
    ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ, ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ಎಸ್.ವೀರಣ್ಣ, ಅಣಬೇರು ರಾಜಣ್ಣ, ಪ್ರಭಾಕರ ಕೋರೆ, ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್, ಸಚ್ಚಿದಾನಂದ ಮೂರ್ತಿ ಇತರರಿದ್ದರು. ಸಭೆಗೂ ಮುನ್ನ ಮಹಾ ಅಧಿವೇಶನದ ಪೆಂಡಾಲ್ ನಿರ್ಮಾಣಕ್ಕೆ ಸೋಮವಾರ ಇಲ್ಲಿನ ಎಂಬಿಎ ಕಾಲೇಜು ಮೈದಾನದಲ್ಲಿ ಹಂದರಕಂಬ ಪೂಜೆ ನೆರವೇರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts