More

    22ಕ್ಕೆ ಬೆಳಗಾವಿ ಚಲೋ ಚಳವಳಿ 

    ದಾವಣಗೆರೆ: ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ-ಯುಕೆಜಿ ಜಾರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ ನೇತೃತ್ವದ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಡಿ.22ರಂದು ಬೆಳಗಾವಿ ಚಲೋ ಚಳವಳಿ ಹಮ್ಮಿಕೊಂಡಿದೆ.
    ಜಿಲ್ಲೆಯಲ್ಲಿನ 2250 ಅಂಗನವಾಡಿ ಸಿಬ್ಬಂದಿ ಈ ಹೋರಾಟದಲ್ಲಿ ಭಾಗಿಯಾಗಲಿದ್ದು, ಡಿ.21ರ ರಾತ್ರಿ 10 ಗಂಟೆಗೆ ಎಲ್ಲರೂ ದಾವಣಗೆರೆ ರೈಲು ನಿಲ್ದಾಣದಲ್ಲಿ ಜಮಾವಣೆ ಆಗಬೇಕೆಂದು ಸಂಘಟನೆ ಜಿಲ್ಲಾಧ್ಯಕ್ಷೆ ಎಂ.ಬಿ.ಶಾರದಮ್ಮ ಶನಿವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
    ರಾಜ್ಯದಲ್ಲಿ 1.30 ಲಕ್ಷ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು ನಿಸ್ವಾರ್ಥತೆಯಿಂದ ದುಡಿಯುತ್ತಿದ್ದಾರೆ. ಅವರಿಗೆ ನೀಡುತ್ತಿರುವ 11500 ರೂ. ಗೌರವಧನ ಸಾಲದು. ಅವರನ್ನು ಕಾಯಂಗೊಳಿಸಿ ಮಾಸಿಕ 31500 ರೂ.ಗಳ ಕನಿಷ್ಠ ವೇತನ ಜಾರಿಗೊಳಿಸಬೇಕು.
    ಅಂಗನವಾಡಿಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವುದು ಸರಿಯಲ್ಲ. ಇದನ್ನು ಕೈಬಿಟ್ಟು ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ನಡೆಸಬೇಕು. ತರಗತಿ ನಡೆಸಲು ಎಲ್ಲ ಕಾರ್ಯಕರ್ತೆಯರು ಅರ್ಹರಿದ್ದಾರೆ ಎಂದು ತಿಳಿಸಿದರು.
    ನಿವೃತ್ತಿಯಾದವರಿಗೆ ಗ್ರಾಚ್ಯುಟಿ ಹಾಗೂ ನಿವೃತ್ತಿ ವೇತನ ನೀಡಬೇಕು. ಕಳಪೆ ಮೊಬೈಲ್‌ಗಳನ್ನು ಹಿಂಪಡೆದು ಮಿನಿ ಟ್ಯಾಬ್‌ಗಳನ್ನು ವಿತರಿಸಬೇಕು. ಇಎಸ್‌ಐ ಹಾಗೂ ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಸಹಾಯಕಿಯರನ್ನು ನೇಮಿಸಬೇಕು. ಮಾರಣಾಂತಿಕ ಕಾಯಿಲೆ ಇದ್ದವರಿಗೆ ಸ್ವಯಂ ನಿವೃತ್ತಿಗೆ ಅವಕಾಶ ನೀಡಿ ಅವರಿಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
    ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಎಸ್.ಎಸ್.ಮಲ್ಲಮ್ಮ, ಖಜಾಂಚಿ ವಿಶಾಲಾಕ್ಷಿ ಮೃತ್ಯುಂಜಯ, ಜಿ.ಎಂ. ರೇಣುಕಮ್ಮ, ಕೆ. ರೇಣೂಕಮ್ಮ. ಸುಧಮ್ಮ, ಆವರಗೆರೆ ವಾಸು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts