More

    ಜೂ.13ರೊಳಗೆ 200 ಗ್ರಾಮಗಳಿಗೆ ನೀರು ಪೂರೈಸಿ ಅಧಿಕಾರಿಗಳಿಗೆ ಜಿಪಂ ಸಿಇಒ ಫೌಜಿಯಾ ತರನ್ನುಮ್ ಸೂಚನೆ

    ಕೊಪ್ಪಳ: ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ ಡಿಬಿಒಟಿ ಕಾಮಗಾರಿಗಳಿಗೆ ಹೆಚ್ಚಿನ ಕೆಲಸಗಾರರನ್ನು ನಿಯೋಜಿಸುವ ಮೂಲಕ ಬಾಕಿ 200 ಗ್ರಾಮಗಳಿಗೆ ಜೂ.13ರೊಳಗೆ ಕುಡಿವ ನೀರು ಪೂರೈಸಬೇಕು ಎಂದು ಜಿಪಂ ಸಿಇಒ ಫೌಜಿಯಾ ತರನ್ನುಮ್, ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಜಿಪಂ ಸ್ಥಾಯಿ ಸಮಿತಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಹುಗ್ರಾಮ ಕುಡಿವ ನೀರು ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. 2017ರಲ್ಲಿ ಕಾಮಗಾರಿ ಆರಂಭವಾಗಿದ್ದು, 2021ರ ಅಕ್ಟೋಬರ್ ವೇಳೆಗೆ ಪೂರ್ಣಗೊಳಿಸಬೇಕಿತ್ತು. ಆದರೆ, ಇನ್ನೂ 200 ಗ್ರಾಮಗಳಿಗೆ ನೀರು ಪೂರೈಸಲಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಂಡು ಕಾಮಗಾರಿ ಪೂರ್ಣಗೊಳಿಸಬೇಕು. 236 ಒಎಚ್‌ಟಿ ಹಾಗೂ ಎಂ.ಬಿ.ಆರ್.ನಿಂದ ಮೇಲ್ತೊಟ್ಟಿಗೆ 5.9 ಕಿಮೀವರೆಗೆ ಪೈಪ್‌ಲೈನ್ ಜೋಡಣೆ ಮಾಡಬೇಕಿದೆ. ಬಾಕಿ ಕಾಮಗಾರಿಯನ್ನು ಜುಲೈ ಅಂತ್ಯದೊಳಗೆ ಮುಗಿಸಬೇಕು ಎಂದು ನಿರ್ದೇಶಿಸಿದರು.

    ಕುಷ್ಟಗಿ ತಾಲೂಕಿನಲ್ಲಿ 9 ಹಾಗೂ ಯಲಬುರ್ಗಾ ತಾಲೂಕಿನ 3 ಎಂ.ಬಿ.ಆರ್. ಕಾಮಗಾರಿಗಳನ್ನು ಶೀಘ್ರವೇ ಮುಗಿಸಬೇಕು. ಒಎಚ್‌ಟಿಗಳಿಂದ ನಳಗಳಿಗೆ ಪೂರೈಕೆ ಮಾಡುವ ನೀರಿನ ಗುಣಮಟ್ಟವನ್ನು ಎಫ್‌ಟಿಕೆ ಕಿಟ್ ಮೂಲಕ ಪ್ರತಿ ಹಂತದಲ್ಲಿ ಪರಿಶೀಲನೆ ಮಾಡಿ ಶುದ್ಧ ನೀರನ್ನು ಪೂರೈಸಬೇಕು. 18 ಗ್ರಾಮಗಳ ಬಾಕಿ ರಿಕ್ಲೋರಿನೇಷನ್ ಯೂನಿಟ್ ಅಳವಡಿಕೆ ಕಾರ್ಯ ವೇಗವಾಗಿ ಮುಗಿಸಬೇಕು ಎಂದು ಆದೇಶಿಸಿದರು.

    ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ರಂಗಯ್ಯ ಮಾತನಾಡಿ, 331 ಗ್ರಾಮಗಳ ಪೈಕಿ 295 ಹಳ್ಳಿಗಳಲ್ಲಿ ಕಾಮಗಾರಿ ಕೈಗೊಂಡಿದ್ದು, 179 ಗ್ರಾಮಗಳಲ್ಲಿ ನೀರು ಪೂರೈಸಲಾಗುತ್ತಿದೆ. ಬಾಕಿ ಕಾಮಗಾರಿಗಳಲ್ಲಿ ಒಎಚ್‌ಟಿಗೆ ನೀರು ಪೂರೈಕೆ ಪೈಪ್ ಅಳವಡಿಸಬೇಕಿದೆ. ಯಲಬುರ್ಗಾ ತಾಲೂಕಿನಲ್ಲಿ 61, ಕುಷ್ಟಗಿ ತಾಲೂಕಿನಲ್ಲಿ 106 ಒಎಚ್‌ಟಿ ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದರು. ಜಿಪಂ ಉಪ ಕಾರ್ಯದರ್ಶಿ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts