More

    ಘಾಟಿ ರಸ್ತೆಗಳ ದುರಸ್ತಿಗೆ 200 ಕೋಟಿ ರೂ.; ಸಚಿವರ ನೇತೃತ್ವದಲ್ಲಿ ಸಭೆ, ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ಧಾರ

    ಬೆಂಗಳೂರು: ಶಿರಾಡಿ, ಚಾರ್ಮಡಿ ಮತ್ತು ಆಗುಂಬೆ ಘಾಟಿ ರಸ್ತೆಗಳ ದುರಸ್ತಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಅದಕ್ಕಾಗಿ ಸರ್ಕಾರ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

    ಸಚಿವ ಕೆ.ಗೋಪಾಲಯ್ಯ, ಹಾಸನ ಜಿಲ್ಲಾಧಿಕಾರಿ ಗಿರೀಶ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜತೆೆ ಸಭೆ ನಡೆಸಿದ ಸಚಿವರು, ಎಲ್ಲ ಘಾಟಿಗಳಲ್ಲಿನ ರಸ್ತೆಗಳ ಸ್ಥಿತಿ-ಗತಿ ಬಗ್ಗೆ ಹಾಗೂ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಮಹತ್ವದ ಚರ್ಚೆ ನಡೆಸಿದ್ದು, ವಾರದೊಳಗೆ ತುರ್ತು ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.

    ಮಡಿಕೇರಿ, ಶಿರಾಡಿ ಘಾಟಿಯ ಎಲ್ಲ ಭಾಗದಲ್ಲೂ ಅತಿವೃಷ್ಟಿ ಹಾನಿಯ ವೀಕ್ಷಣೆ ಮಾಡಿದ್ದೇವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆಗೂ ಸಭೆ ನಡೆಸಿದ್ದೇನೆ. ಶಿರಾಡಿ, ಚಾಮುಡಿ, ಆಗುಂಬೆ, ಮಾಲಾ, ಕೊಲ್ಲೂರು, ಸಂಪಾಜೆ, ಅರಬೈಲು, ಗೇರುಸೊಪ್ಪ ಘಾಟಿಗಳಲ್ಲಿ 63 ಕಡೆ ಭೂ ಕುಸಿತವಾಗಿತ್ತು. ಅದನ್ನು ದುರಸ್ತಿಪಡಿಸಿ ವಾಹನ ಸಂಚಾರಕ್ಕೆ ಮುಕ್ತ ಮಾಡಲಾಗಿದೆ ಎಂದು ಹೇಳಿದರು.

    754 ಕೋಟಿ ರೂ. ಬೇಕು: ಅತಿವೃಷ್ಟಿಯಿಂದಾಗಿ 141 ಕಿ.ಮೀ. ರಾಜ್ಯ ಹೆದ್ದಾರಿ, 924 ಕಿ.ಮೀ. ಮುಖ್ಯ ರಸ್ತೆಗಳು, 357 ಅಡ್ಡ ಮೋರಿಗಳು, ಸಣ್ಣ ಸೇತುವೆಗಳು ಹಾಳಾಗಿವೆ. ಇದೆಲ್ಲವನ್ನೂ ದುರಸ್ತಿ ಮಾಡಲು 740 ಕೋಟಿ ರೂ. ಬೇಕಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸದ್ಯ 200 ಕೋಟಿ ರೂ. ಬಿಡುಗಡೆ ಆಗಿದ್ದು, ಅದರಲ್ಲಿ ಕೆಲಸ ನಡೆಯುತ್ತಿದೆ ಎಂದರು.

    617 ಕಾಮಗಾರಿ ಪೂರ್ಣ: 2019ರಿಂದ ಸತತ ವಿಪರೀತ ಮಳೆಯಾಗುತ್ತಿದೆ. ಆಗ 669 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಆ ಮೊತ್ತದಲ್ಲಿ ಕೈಗೊಂಡ 1248 ಕಾಮಗಾರಿಗಳಲ್ಲಿ 617 ಕಾಮಗಾರಿ ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದರು.

    ಶಿರಾಡಿಯಲ್ಲಿ ತಾತ್ಕಾಲಿಕ ವ್ಯವಸ್ಥೆ: ಶಿರಾಡಿ ಘಾಟಿ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಿದ್ದೇವೆ. ಸಂಚಾರ ಬಂದ್ ಆಗುವುದಕ್ಕೆ ಅವಕಾಶ ಕೊಟ್ಟಿಲ್ಲ. ಕೆಲಸ ಪೂರ್ಣವಾದರೆ ಶಾಶ್ವತ ಪರಿಹಾರ ಸಿಗಲಿದ್ದು, ಮಾರ್ಚ್ ಒಳಗಾಗಿ ಕೆಲಸ ಮುಗಿಯುತ್ತದೆ. ಗುತ್ತಿಗೆದಾರರ ದಿವಾಳಿ ಆಗಿದ್ದಕ್ಕೆ ಅಲ್ಲಿ ಕೆಲಸ ವಿಳಂಬವಾಗಿತ್ತು ಎಂದು ಸಿ.ಸಿ.ಪಾಟೀಲ ಹೇಳಿದರು. ಮಡಿಕೇರಿ ಡಿಸಿ ಕಚೇರಿ ಬಳಿ ರಸ್ತೆಯ ತಡೆಗೋಡೆ ಸಮಸ್ಯೆ ಬಗ್ಗೆ ಕೇಂದ್ರ ತಂಡದ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ಕ್ರಮ ಕೈಗೊಳ್ಳುತ್ತಿದ್ದಾರೆ. ನಾಳೆಯೊಳಗಾಗಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು.

    ಸಂಪಾಜೆ ಘಾಟಿ ರಸ್ತೆ ಬಂದ್ ಮಾಡುವ ಅಗತ್ಯವಿಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ. ಇಲಾಖಾ ಪ್ರಧಾನ ಕಾರ್ಯದರ್ಶಿ, ಮಡಿಕೇರಿ ಡಿಸಿ ಜತೆ ಮಾತನಾಡುತ್ತಾರೆ. ಬಂದ್ ಮಾಡುವಷ್ಟು ಅಗತ್ಯ ಇದೆಯೋ ಇಲ್ವೋ ನೋಡಿಕೊಂಡು ತೀರ್ಮಾನ ಮಾಡುತ್ತೇವೆ.

    | ಸಿ.ಸಿ. ಪಾಟೀಲ ಲೋಕೋಪಯೋಗಿ ಸಚಿವ

    ಅಧಿಕಾರಿಗಳ ವಿರುದ್ಧ ಗರಂ: ಸಭೆಯಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಸಿ.ಸಿ.ಪಾಟೀಲ ಅಸಮಾಧಾನ ವ್ಯಕ್ತಪಡಿಸಿದ್ದು, ಘಾಟಿ ಕುಸಿತವಾದ ಕಡೆ ತುರ್ತಾಗಿ ತೆರಳಿ, ಅಲ್ಲಿಯೇ ಮೊಕ್ಕಾಂ ಹೂಡಿ ಕಾಮಗಾರಿ ಮಾಡುವಂತೆ ತಿಳಿಸಿದ್ದೇನೆ ಎಂದರು. ಮಣ್ಣಿನಲ್ಲಿ ಗಟ್ಟಿತನ ಹಿಡಿತ ಇಲ್ಲದ ಕಾರಣ ಹೆಚ್ಚು ಮಳೆಯಾದ ಸಂದರ್ಭದಲ್ಲಿ ಸಹಜವಾಗಿ ಭೂಮಿ ಕುಸಿತ ಆಗುತ್ತದೆ. ಒಮ್ಮೊಮ್ಮೆ ಪ್ರಕೃತಿ ಮುನಿದಾಗ ಏನು ಮಾಡಲು ಆಗುವುದಿಲ್ಲ. ಶಿರಾಡಿ ಘಾಟಿಯಲ್ಲಿ ಸುರಂಗ ಮಾಡಲು ಡಿಪಿಆರ್ ಸಿದ್ಧವಾಗುತ್ತಿದೆ. ಹೊಸ ತಂತ್ರಜ್ಞಾನದ ಮೂಲಕ ರಸ್ತೆ ಮಾಡುವ ಬಗ್ಗೆಯೂ ಡಿಪಿಆರ್ ಸಿದ್ಧಪಡಿಸಲು ಸೂಚಿಸಿದ್ದೇವೆ ಎಂದರು.

    ಬಿಡುವು ಕೊಟ್ಟ ಮಳೆ

    ಬೆಂಗಳೂರು: ಸತತ 18 ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿದ್ದ ಮುಂಗಾರು ಮಳೆ ಕೊನೆಗೂ ಬಿಡುವು ಕೊಟ್ಟಿದೆ. ಮಂಗಳವಾರ ಹಲವೆಡೆ ಚದುರಿದಂತೆ ಸಾಧಾರಣ ಮಳೆಯಾಗಿದೆ. ಮುಂದಿನ 4 ದಿನ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜೂ.1ರಿಂದ ಜು.19ರವರೆಗೆ ರಾಜ್ಯಾದ್ಯಂತ 365 ಮಿಮೀ ಮಳೆಯಾಗಬೇಕಿತ್ತು. ಆದರೆ, 462 ಮಿಮೀ ಮಳೆಯಾಗಿದ್ದು, ಶೇ.27 ವಾಡಿಕೆಗಿಂತ ಹೆಚ್ಚು ಬಿದ್ದಿದೆ. ದಕ್ಷಿಣ ಒಳನಾಡಿನಲ್ಲಿ ಶೇ.76, ಉತ್ತರ ಒಳನಾಡಿನಲ್ಲಿ ಶೇ.21, ಮಲೆನಾಡಿನಲ್ಲಿ ಶೇ. 25 ಹಾಗೂ ಕರಾವಳಿಯಲ್ಲಿ ಶೇ.21 ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ.

    ಬ್ಯಾರೇಜ್ ಗೇಟ್ ತೆರೆಯಲು ಪ್ರಯತ್ನ: ರಾಯಚೂರು ತಾಲೂಕಿನ ಗುರ್ಜಾಪುರ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ವಿುಸಿರುವ ಬ್ರಿಡ್ಜ್ ಕಂ ಬ್ಯಾರೇಜ್​ನ ಗೇಟ್​ಗಳನ್ನು ತೆಗೆದು, ನೀರನ್ನು ಹೊರಬಿಡುವ ಪ್ರಯತ್ನ ಮುಂದುವರಿದಿದ್ದು, ಸತತ ಪ್ರಯತ್ನದ ನಂತರ ಮಂಗಳವಾರ ಒಂದು ಗೇಟ್ ತೆಗೆಯಲು ಮಾತ್ರ ಸಾಧ್ಯವಾಗಿದೆ. ತುಂಗಭದ್ರಾ ಜಲಾಶಯದಿಂದ ನದಿಗೆ ಹರಿದ ಪರಿಣಾಮ ಮುಳುಗಿರುವ ಕಂಪ್ಲಿ ಸೇತುವೆ ಮತ್ತು ಬುಕ್ಕಸಾಗರ ಸೇತುವೆ ನೋಡಲು ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

    ಜಲಸ್ಪೋಟ!: ಮಡಿಕೇರಿ ತಾಲೂಕು ವ್ಯಾಪ್ತಿಯ 2ನೇ ಮೊಣ್ಣಂಗೇರಿಯ ರಾಮಕೊಲ್ಲಿ ಯಲ್ಲಿ ಸೋಮವಾರ ರಾತ್ರಿ ಜಲಸ್ಪೋಟಗೊಂಡು ಆತಂಕ ಸೃಷ್ಟಿಯಾಗಿದೆ.

    ಕಡಿಮೆಯಾದ ಮಳೆಯ ಅಬ್ಬರ: ಹಾಸನ, ಕೊಡಗು ಜಿಲ್ಲೆಯಲ್ಲಿ ಮಳೆ ಅಬ್ಬರ ಕಡಿಮೆ ಆಗಿದೆ. ಕರಾವಳಿಯಲ್ಲಿ ಮುಂಗಾರು ದುರ್ಬಲಗೊಂಡಿದೆ. ಮಂಗಳವಾರ ದ. ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಮತ್ತಷ್ಟು ತಗ್ಗಿದ್ದು, ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಮಳೆ ಕಡಿಮೆಯಾಗಿತ್ತು.

    ಮಡಿಕೇರಿ ರಸ್ತೆಯಲ್ಲೂ ಕುಸಿತ ಭೀತಿ: ಭಾಗಮಂಡಲದಲ್ಲಿ ನೀರು ಇಳಿಕೆಯಾಗಿದೆ. ರಾಷ್ಟ್ರೀಯ ಹೆದ್ದಾರಿ-75 ಶಿರಾಡಿ ಘಾಟಿ ಬಳಿ ಭೂಕುಸಿತ ಉಂಟಾಗಿದ್ದರಿಂದ ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಮಡಿಕೇರಿ ರಸ್ತೆಯಲ್ಲಿ ಕುಸಿತ ಭೀತಿ ಉಂಟಾಗಿದೆ.

    ಮಗಳನ್ನು ಅಮೆರಿಕಕ್ಕೆ ಕಳಿಸಿ ಮರಳುತ್ತಿದ್ದ ದಂಪತಿ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವು!

    ನೂಪುರ್ ಶರ್ಮಾ ಹತ್ಯೆಗಾಗಿ ಗಡಿ ದಾಟಿ ಬಂದ ಪಾಕಿಸ್ತಾನಿ; 11 ಇಂಚಿನ ಚಾಕು ಸಹಿತ ಸಿಕ್ಕಿಬಿದ್ದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts