More

    ಆಂಗ್ಲರ ಚೊಚ್ಚಲ ವಿಶ್ವಕಪ್ ಗೆಲುವಿಗೆ 2ನೇ ವರ್ಷದ ಸಂಭ್ರಮ, ಫೈನಲ್ ಸೋತರೂ ಹೃದಯ ಗೆದ್ದಿತ್ತು ನ್ಯೂಜಿಲೆಂಡ್

    ಬೆಂಗಳೂರು: ಕ್ರಿಕೆಟ್ ಪ್ರೇಮಿಗಳು ಹಿಂದೆಂದೂ ಕಂಡಿರದ ಅತ್ಯಂತ ರೋಚಕ ಕಾದಾಟಕ್ಕೆ ಬುಧವಾರ ಎರಡು ವರ್ಷ ಪೂರೈಸಿದೆ. ಅಂದು ಕ್ರಿಕೆಟ್ ಜನಕ ಇಂಗ್ಲೆಂಡ್ ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿ ಬೀಗಿದ್ದರೆ, ನ್ಯೂಜಿಲೆಂಡ್ ತಂಡ ರನ್ನರ್‌ಅಪ್ ಪಟ್ಟಕ್ಕೆ ತೃಪ್ತಿಪಟ್ಟರೂ ಕ್ರಿಕೆಟ್ ಪ್ರೇಮಿಗಳ ಹೃದಯ ಜಯಿಸಿತ್ತು. ಫೈನಲ್ ಪಂದ್ಯ, ಸೂಪರ್ ಓವರ್ ಟೈ ಆದ ನಡುವೆಯೂ ಇಂಗ್ಲೆಂಡ್ ತಂಡ ಹೇಗೆ ವಿಶ್ವಕಪ್ ಜಯಿಸಿತು ಎಂಬ ಪ್ರಶ್ನೆ ಆಗ ಹೆಚ್ಚಿನ ಕ್ರಿಕೆಟ್ ಪ್ರೇಮಿಗಳ ಮನವನ್ನು ಕಾಡಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ನ್ಯೂಜಿಲೆಂಡ್ ತಂಡ ಗೆಲುವಿಗೆ ಹೆಚ್ಚು ಅರ್ಹವಾಗಿತ್ತು ಎಂಬ ಮಾತು ಕೇಳಿಬಂದಿತ್ತು. ಕ್ರೀಡಾಸ್ಫೂರ್ತಿಯಲ್ಲಂತೂ ನ್ಯೂಜಿಲೆಂಡ್ ತಂಡ ಎಲ್ಲರ ಮನದಲ್ಲಿ ಚಾಂಪಿಯನ್ ಆಗಿತ್ತು.

    2019ರ ಜುಲೈ 14ರಂದು ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಇತಿಹಾಸ ನಿರ್ಮಾಣವಾಗುವುದು ನಿರೀಕ್ಷಿತವೇ ಆಗಿತ್ತು. ಯಾಕೆಂದರೆ ಪ್ರಶಸ್ತಿ ಹೋರಾಟಕ್ಕೆ ನಿಂತಿದ್ದ ಇಂಗ್ಲೆಂಡ್-ನ್ಯೂಜಿಲೆಂಡ್ ತಂಡಗಳಲ್ಲಿ ಯಾರೇ ಗೆದ್ದರೂ ಮೊದಲ ವಿಶ್ವ ಚಾಂಪಿಯನ್ ಪಟ್ಟ ಒಲಿಯುತ್ತಿತ್ತು. ಆದರೆ, 12ನೇ ಆವೃತ್ತಿಯ ವಿಶ್ವಕಪ್ ಕಿರೀಟ ಒಲಿಸಿಕೊಳ್ಳಲು ಇಷ್ಟೊಂದು ರೋಚಕ ಹಣಾಹಣಿ ಏರ್ಪಡಲಿದೆ ಎಂದು ಯಾವ ಕ್ರಿಕೆಟ್ ಪ್ರೇಮಿಯೂ ಆಗ ಊಹಿಸಿರಲಿಲ್ಲ.

    ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ನ್ಯೂಜಿಲೆಂಡ್, 8 ವಿಕೆಟ್‌ಗೆ 241 ರನ್‌ಗಳ ಸಾಧಾರಣ ಮೊತ್ತ ಪೇರಿಸಿತ್ತು. ಆದರೆ ಇಂಗ್ಲೆಂಡ್ ತಂಡ 86 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದಾಗ ಕಿವೀಸ್ ಗೆಲುವಿನ ನಿರೀಕ್ಷೆಯೇ ಹೆಚ್ಚಾಗಿತ್ತು. ಆಗ ಬೆನ್ ಸ್ಟೋಕ್ಸ್ (84*), ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ (59) ಜತೆಗೂಡಿ 5ನೇ ವಿಕೆಟ್‌ಗೆ 110 ರನ್ ಪೇರಿಸುವ ಮೂಲಕ ಗೆಲುವು ಕಸಿಯಲು ಯತ್ನಿಸಿದರು. ಈ ಜೋಡಿ ಬೇರ್ಪಡುತ್ತಿದ್ದಂತೆ ಇಂಗ್ಲೆಂಡ್ ಮತ್ತೆ ಕುಸಿತ ಕಂಡಿತು.

    ಟೈ ಸಾಧಿಸಿದ ಸ್ಟೋಕ್ಸ್
    ಕೊನೇ ಓವರ್‌ನಲ್ಲಿ 15 ರನ್ ಬೇಕಿದ್ದಾಗ, ಟ್ರೆಂಟ್ ಬೌಲ್ಟ್‌ರ ಮೊದಲ 2 ಎಸೆತಗಳಲ್ಲಿ ಸ್ಟೋಕ್ಸ್ ರನ್ ಗಳಿಸಲು ವಿಲರಾದರೆ, 3ನೇ ಎಸೆತವನ್ನು ಸಿಕ್ಸರ್‌ಗಟ್ಟಿದರು. 4ನೇ ಎಸೆತದಲ್ಲಿ ಸ್ಟೋಕ್ಸ್ ಓಡಿದ್ದು ಎರಡೇ ರನ್ ಆಗಿದ್ದರೂ, 2ನೇ ರನ್ ಓಡುವ ಯತ್ನದಲ್ಲಿ ಸ್ಟೋಕ್ಸ್ ಡೈವ್ ಮಾಡಿದಾಗ ಚೆಂಡು ಅವರ ಬ್ಯಾಟ್‌ಗೆ ಬಡಿದು ಬೌಂಡರಿಗೆ ಹೋಯಿತು. ಅಂಪೈರ್ ಎಡವಟ್ಟಿನ ನಿರ್ಧಾರದಿಂದಾಗಿ ಆ ಎಸೆತದಲ್ಲಿ ಆಂಗ್ಲರ ಖಾತೆಗೆ 6 ರನ್ ಸೇರಿತು. ನಿಯಮ ಪ್ರಕಾರ ಆಗ 5 ರನ್ ನೀಡಬೇಕಾಗಿತ್ತು. ಕೊನೇ 2 ಎಸೆತದಲ್ಲಿ ಆದಿಲ್ ರಶೀದ್ ಹಾಗೂ ಮಾರ್ಕ್ ವುಡ್ ವಿಕೆಟ್ ರನೌಟ್ ರೂಪದಲ್ಲಿ ಉರುಳಿದರೂ, ಒಂದೊಂದು ರನ್ ಗಳಿಸಿದ್ದರಿಂದ ಪಂದ್ಯ ಟೈ ಆಯಿತು.

    ಸೂಪರ್ ಟೈ, ಬೌಂಡರಿ ಕೌಂಟ್
    ಪಂದ್ಯ ಟೈ ಆದ ಬಳಿಕ ಲಿತಾಂಶ ನಿರ್ಧಾರಕ್ಕಾಗಿ ಸೂಪರ್ ಓವರ್ ನಡೆಸಲಾಯಿತು. ಆದರೆ ಅಲ್ಲೂ ಟೈ ಆಗಿದ್ದು ವಿಪರ‌್ಯಾಸ. ಇಂಗ್ಲೆಂಡ್ 15 ರನ್ ಗಳಿಸಿದರೆ, ಪ್ರತಿಯಾಗಿ ಕಿವೀಸ್ ಕೂಡ ಅಷ್ಟೇ ರನ್ ಗಳಿಸಿತು. ಕೊನೇ ಎಸೆತದಲ್ಲಿ 2 ರನ್ ಕಸಿಯುವ ಯತ್ನದಲ್ಲಿ ಮಾರ್ಟಿನ್ ಗುಪ್ಟಿಲ್ ಕೂದಲೆಳೆಯ ಅಂತರದಲ್ಲಿ ರನೌಟ್ ಆದರು. ಆದರೆ ಪಂದ್ಯ, ಸೂಪರ್ ಓವರ್‌ನಲ್ಲಿ ಅತಿ ಹೆಚ್ಚು ಬೌಂಡರಿ ಗಳಿಸಿದ ಆಧಾರದಲ್ಲಿ ಇಂಗ್ಲೆಂಡ್ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತು. ಆಗ ನಾಯಕ ಕೇನ್ ವಿಲಿಯಮ್ಸನ್ ಮತ್ತು ನ್ಯೂಜಿಲೆಂಡ್ ಆಟಗಾರರು ಸಮಚಿತ್ತದಿಂದ ವರ್ತಿಸಿದ್ದು ಕ್ರಿಕೆಟ್ ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿತ್ತು.

    ಇಂಗ್ಲೆಂಡ್ ರಚಿಸಿದ್ದ ದಾಖಲೆಗಳು:
    *ಚೊಚ್ಚಲ ಏಕದಿನ ವಿಶ್ವಕಪ್ ಗೆಲುವು.
    *ಸತತ 3ನೇ ಬಾರಿ ಆತಿಥೇಯರಿಗೆ ವಿಶ್ವಕಪ್.
    *23 ವರ್ಷ ಅಂದರೆ 1996ರ ಬಳಿಕ ಮೊದಲ ಬಾರಿ ಹೊಸ ಚಾಂಪಿಯನ್.
    *ಏಕದಿನ ವಿಶ್ವಕಪ್ ಗೆದ್ದ 6ನೇ ತಂಡ.
    *ಟಿ20-ಏಕದಿನ ವಿಶ್ವಕಪ್ ಎರಡೂ ಗೆದ್ದ 5ನೇ ತಂಡ.

    ನಿಯಮ ಬದಲಿಸಿದ ಐಸಿಸಿ
    ಬೌಂಡರಿ ಕೌಂಟ್ ನಿಯಮದ ಆಧಾರದಲ್ಲಿ ಇಂಗ್ಲೆಂಡ್‌ಗೆ ವಿಶ್ವಕಪ್ ನೀಡಿದ್ದರಿಂದ ಐಸಿಸಿ, ಕ್ರಿಕೆಟ್ ಪ್ರೇಮಿಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದರಿಂದಾಗಿ ಕೊನೆಗೆ ನಿಯಮವನ್ನೇ ಬದಲಾಯಿಸಲಾಯಿತು. ಹೊಸ ನಿಯಮದ ಅನ್ವಯ ಇನ್ನು, ಸೂಪರ್ ಓವರ್ ಕೂಡ ಟೈ ಆದರೆ, ಮತ್ತೆ ಸೂಪರ್ ಓವರ್ ನಡೆಸಲಾಗುತ್ತದೆ. ಈ ರೀತಿ ಸ್ಪಷ್ಟ ಲಿತಾಂಶ ಬರುವವರೆಗೆ ಸೂಪರ್ ಓವರ್ ಮುಂದುವರಿಯುತ್ತದೆ.

    ಒಲಿಂಪಿಕ್ಸ್​ಗೆ ಮೂಡುಬಿದಿರೆ ಆಳ್ವಾಸ್​ನ ಇಬ್ಬರು ಕ್ರೀಡಾಪಟುಗಳು ಆಯ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts