ಬೆಂಗಳೂರು: ಆನ್‌ಲೈನ್ ಶಾಪಿಂಗ್‌ನಲ್ಲಿ ಸರಿಯಾದ ವಿಳಾಸ ಕೊಟ್ಟಿಲ್ಲವೆಂದು ಯಾಮಾರಿಸಿ ಮಹಿಳೆಗೆ ಸೈಬರ್ ಕಳ್ಳರು 72 ಸಾವಿರ ರೂ. ಮೋಸ ಮಾಡಿದ್ದಾರೆ.
ವಿಲ್ಸನ್ ಗಾರ್ಡ್‌ನ್‌ದ 32 ವರ್ಷದ ಮಹಿಳೆ ವಂಚನೆಗೆ ಒಳಗಾದವರು. ಮಾರ್ಚ್ 23ರಂದು ಮಹಿಳೆಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ನೀವು ನೀಡಿರುವ ಅಂಚೆ ವಿಳಾಸ ತಪ್ಪಾಗಿದೆ. ನೀವು ಬುಕ್ ಮಾಡಿರುವ ವಸ್ತುಗಳು ತಲುಪಿಸಲು ಸಾಧ್ಯವಿಲ್ಲ. ಸರಿಯಾದ ಮಾಹಿತಿ ನೀಡುವಂತೆ ಕೋರಿದ್ದಾನೆ. ಇದನ್ನು ನಂಬಿದ ಮಹಿಳೆ, ಸರಿಯಾದ ವಿಳಾಸ ಕೊಟ್ಟಿದ್ದಾರೆ. ಇದಾದ ಮೇಲೆ ಲಿಂಕ್ ಕಳುಹಿಸಿ ಇದರ ಮೇಲೆ ಕ್ಲಿಕ್ ಮಾಡಿ 2 ರೂಪಾಯಿಯನ್ನು ಪಾವತಿಸುವಂತೆ ಕೋರಿದ್ದಾನೆ. ಅದಕ್ಕೆ ಮಹಿಳೆ, ಪಾರ್ಸೆಲ್ ತಂದು ಕೊಟ್ಟಾಗ ಪಾವತಿ ಮಾಡುವುದಾಗಿ ಹೇಳಿದ್ದಾಳೆ.
ಅದಕ್ಕೆ ಸೈಬರ್ ವಂಚಕ, ನಾನೇ ನಿಮ್ಮ ವ್ಯಾಲೆಟ್‌ಗೆ 2 ರೂ. ಪಾವತಿ ಮಾಡುವುದಾಗಿ ಯಾಮಾರಿಸಿ ಬ್ಯಾಂಕ್ ಮಾಹಿತಿ ಪಡೆದು 5 ಸಾವಿರ ರೂ., 4 ಮತ್ತು 2 ಸಾವಿರ ರೂ. ಅಂತೆ ಹಂತ ಹಂತವಾಗಿ 72 ಸಾವಿರ ರೂ.ಅನ್ನು ದೋಚಿದ್ದಾನೆ. ಮೊಬೈಲ್‌ಗೆ ಬಂದಿರುವ ಸಂದೇಶ ನೋಡಿದ ಮಹಿಳೆ, ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಕೇಂದ್ರ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.