More

    ಕದಂಬೋತ್ಸವಕ್ಕೆ 2 ಕೋಟಿ ರೂ. ಅನುದಾನ ಕೋರಿಕೆ

    ಶಿರಸಿ: ಕನ್ನಡಿಗರ ಮೊದಲ ರಾಜಧಾನಿ ಬನವಾಸಿಯ ವಿಶೇಷತೆಯನ್ನು ನಾಡಿಗೆ ತಿಳಿಸುವ ಕದಂಬೋತ್ಸವ ಆಚರಣೆ ಫೆ.24 ಮತ್ತು 25 ರಂದು ನಡೆಯಲಿದೆ. ಈ ಉತ್ಸವಕ್ಕೆ ಸರ್ಕಾರಕ್ಕೆ 2 ಕೋಟಿ ರೂ. ಅನುದಾನ ಒದಗಿಸುವಂತೆ ಕೇಳಿದ್ದೇವೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದರು.

    ಬನವಾಸಿಯ ಕದಂಬೋತ್ಸವ ವೇದಿಕೆಯನ್ನು ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಅಧಿಕಾರಿಗಳೊಂದಿಗೆ ಬುಧವಾರ ಪರಿಶೀಲಿಸಿ ಬಳಿಕ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಬನವಾಸಿಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಬೇಕಿದೆ. ಇದುವರೆಗೂ ಬನವಾಸಿ ವಿಶೇಷತೆಗಳ ಬಗ್ಗೆ ಸಿಗಬೇಕಾದ ಪ್ರಚಾರ ಸರಿಯಾಗಿ ಸಿಕ್ಕಿಲ್ಲ. ಕದಂಬೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಜನ ಬರಬೇಕು, ಬನವಾಸಿ ಹೆಚ್ಚಿನ ಅಭಿವೃದ್ಧಿ ಆಗಬೇಕು ಎಂದರು.

    ಬನವಾಸಿ ಅಭಿವೃದ್ಧಿಗಾಗಿ ಈಗಾಗಲೇ 40 ಲಕ್ಷ ರೂ. ಮಂಜೂರಾಗಿದ್ದು, ಕೆಲವು ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿದೆ. ಆದಿ ಕವಿ ಪಂಪನ ಪ್ರತಿಮೆಯನ್ನು ಬನವಾಸಿಯಲ್ಲಿ ಸ್ಥಾಪನೆ ಮಾಡುವ ಬಗ್ಗೆ ಈಗಾಗಲೇ ಚರ್ಚಿಸಿದ್ದೇವೆ. ಕದಂಬೋತ್ಸವದ ವೇಳೆ ಹೆಚ್ಚಿನ ನಾಮ ಫಲಕಗಳನ್ನು ಅಳವಡಿಸಲಾಗುತ್ತದೆ. ಕದಂಬೋತ್ಸವ ಇಷ್ಟು ವರ್ಷಗಳ ಕಾಲ ನಡೆದಿದ್ದಕ್ಕಿಂತ ಈ ವರ್ಷ ಮತ್ತಷ್ಟು ಉತ್ತಮವಾಗಿ ಆಚರಣೆಯಾಗಬೇಕು. 15 ಉಪ ಸಮಿತಿಗಳ ರಚನೆ ಈಗಾಗಲೇ ಮುಕ್ತಾಯಗೊಂಡಿದೆ. ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಸಾಂಸ್ಕೃತಿಕ ಕಮಿಟಿ ಇರಲಿದ್ದು, ಬನವಾಸಿ ಮುಖ್ಯ ವೇದಿಕೆ ಮತ್ತು ಗುಡ್ನಾಪುರ ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಕಳೆದ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದವರನ್ನು ಹೊರತು ಪಡಿಸಿ ಹೊಸ ಕಲಾವಿದರಿಗೆ ಬನವಾಸಿಯ ಮುಖ್ಯ ವೇದಿಕೆಯಲ್ಲಿ ಅವಕಾಶ ನೀಡಲಾಗುತ್ತದೆ. ಗುಡ್ನಾಪುರ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗುತ್ತಿದ್ದು, ಆಸಕ್ತ ಕಲಾವಿದರು ಶಿರಸಿಯ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಹೆಸರು ದಾಖಲಿಸಿಕೊಳ್ಳಬೇಕು ಎಂದರು.

    ವೇದಿಕೆಯನ್ನು ಕಳೆದ ಬಾರಿಗಿಂತ ಈ ವರ್ಷ ಎತ್ತರಗೊಳಿಸಿದ್ದೇವೆ. ಉತ್ಸವದ ಎರಡು ದಿನ ಮುಂಚಿತವಾಗಿ ಪೆಂಡಾಲ್, ಲೈಟಿಂಗ್ ವ್ಯವಸ್ಥೆ ಮಾಡಲಾಗುವುದು. ಕದಂಬೋತ್ಸವಕ್ಕೆ ಆಗಮಿಸುವ ಕಲಾವಿದರಿಗೆ ಸೂಕ್ತ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

    ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ, ಕದಂಬೋತ್ಸವ ವೇಳೆ ಹೆಚ್ಚಿನ ದರ ಆಕರಣೆ ಮಾಡದೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿ. ಸಾಂಸ್ಕೃತಿಕ ಕಾರ್ಯಕ್ರಮಗಳು ತಡ ರಾತ್ರಿ ಮುಕ್ತಾಯವಾಗುವುದರಿಂದ ಆ ವೇಳೆ ಜನರಿಗೆ ವಾಪಸಾಗಲು ಬಸ್ ಇರದಂತಹ ಸ್ಥಿತಿ ನಿರ್ಮಾಣವಾಗಬಾರದು. ಎರಡು ದಿನಗಳ ಕಾಲ ಕ್ರೀಡಾ ಚಟುವಟಿಕೆಗಳು ನಡೆಯಲಿವೆ. ಸಾಂಸ್ಕೃತಿಕ ಸ್ಪರ್ಧೆಗಳ ಜತೆ ಈ ವರ್ಷ ಮಲ್ಲಕಂಬ ಪ್ರದರ್ಶನ, ಫೋಟೋಗ್ರಫಿ ಸ್ಪರ್ಧೆ ಏರ್ಪಡಿಸಬೇಕು ಎಂದು ಕ್ರೀಡಾ ಇಲಾಖೆಗೆ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಪ್ರಕಾಶ, ಉಪವಿಭಾಗಾಧಿಕಾರಿ ಅಪರ್ಣಾ ರಮೇಶ್, ತಹಸೀಲ್ದಾರ್ ಶ್ರೀಧರ ಮುಂದಲಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts