More

    ನಿಂಬೆ ಸಂಸ್ಕರಣಾ ಘಟಕಕ್ಕೆ 2.5 ಕೋಟಿ ರೂ. ಬಿಡುಗಡೆ

    ಇಂಡಿ: ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಟ್ಟಲಾಗುವ ನಿಂಬೆ ಸಂಸ್ಕರಣಾ ಘಟಕಕ್ಕೆ 2.5 ಕೋಟಿ ರೂ. ಬಿಡುಗಡೆಯಾಗಿದ್ದು, ಸಧ್ಯದಲ್ಲಿಯೇ ಕಟ್ಟಡ ಕಾರ್ಯ ಆರಂಭಿಸಲಾಗುವುದು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪಿ.ಎಲ್. ಪಾಟೀಲ ಹೇಳಿದರು.

    ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ವಸ್ತು ಪ್ರದರ್ಶನ ಮತ್ತು ಮಾರಾಟ ವಿಭಾಗದ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿ, ಸರ್ಕಾರ ದ್ವಿತೀಯ ಕೃಷಿ ಪದ್ಧತಿ ಅನುಸರಿಸುತ್ತಿದ್ದು ಕೃಷಿ ಉತ್ಪಾದನೆಯಲ್ಲಿ ಮೌಲ್ಯವರ್ಧನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ನಿಂಬೆ ಮೌಲ್ಯವರ್ಧನೆ ಮುಖಾಂತರ ನಿಂಬೆ ರಸ, ಉಪ್ಪಿನಕಾಯಿ, ಕ್ಯಾಂಡಿ ಸೇರಿದಂತೆ ಹತ್ತು ಹಲವು ಪ್ರಕಾರದ ಮೌಲ್ಯವರ್ಧನೆ ಮಾಡಿ ಆದಾಯ ಹೆಚ್ಚಿಸಿಕೊಳ್ಳಬಹುದು ಎಂದರು.

    ಯುವಕರಿಗೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಿಂಬೆ ಮೌಲ್ಯವರ್ಧನೆ ಕುರಿತು ತರಬೇತಿ ನೀಡಲಾಗುವದು. ರೈತರು ನಿಂಬೆ ತಂದು ಸಂಸ್ಕರಣೆ ಮಾಡಿಕೊಳ್ಳಬಹುದು. ಸರ್ಕಾರ ಒಂದು ಜಿಲ್ಲೆ ಒಂದು ಬೆಳೆ ಆಯ್ಕೆ ಮಾಡಿದ್ದು, ನಿಂಬೆ ಜಿಲ್ಲೆಯ ಬೆಳೆಯಾಗಿ ಆಯ್ಕೆಯಾಗಿದೆ. ರೈತರಿಗೆ ಒಂದೇ ಬೆಳೆಯಿಂದ ಜೀವನೋಪಾಯ ಹೆಚ್ಚಿಸಿಕೊಳ್ಳಲು ಆಗುವುದಿಲ್ಲ. ಕೃಷಿಯ ಜತೆಗೆ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ, ಮೀನುಗಾರಿಕೆ ಮಾಡಿದರೆ ಹೆಚ್ಚು ಆದಾಯ ಗಳಿಸಲು ಸಾಧ್ಯ ಎಂದರು.

    ಕೃಷಿ ವಿಜ್ಞಾನ ಕೇಂದ್ರ ರೈತರಿಗೆ ದಾರಿದೀಪವಾಗಿದೆ. ಇಲ್ಲಿ ರೈತರ ಜೀವನೋಪಾಯ ಹೆಚ್ಚಿಸುವ ಬೆಳೆಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಬಿತ್ತುವುದು, ಕೊಯ್ಲು, ರೋಗಗಳ ಸಮಸ್ಯೆಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಕೃಷಿ ವಿಜ್ಞಾನ ಕೇಂದ್ರ ರೈತರಿಗೆ ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಿದೆ. ಸಮಗ್ರ ಕೃಷಿಯಲ್ಲಿ ಬೇಸಾಯ, ತೋಟಗಾರಿಕೆ, ಸಸ್ಯ ಸಂರಕ್ಷಣೆ, ಪಶು, ಗೃಹ, ಮಣ್ಣು ಪರೀಕ್ಷೆ, ನೀರು ಪರೀಕ್ಷೆ ಮಾಹಿತಿ ನೀಡಲಾಗುತ್ತಿದೆ ಎಂದರು.

    ಬೀಜೋತ್ಪಾದನೆ ಮಾಡಿದರೆ ರೈತರು ಆದಾಯ ಹೆಚ್ಚಿಸಿಕೊಳ್ಳಬಹುದು, ವಿಶ್ವದಲ್ಲಿಯೇ ಧಾರವಾಡ ಕೇಂದ್ರ ಬೀಜೋತ್ಪಾದನೆಗೆ ಮೊದಲ ಸ್ಥಾನದಲ್ಲಿದೆ. ಮಣ್ಣಿನ ಮಾದರಿ ಪರೀಕ್ಷಿಸಿ ಮಣ್ಣಿನ ಗುಣಧರ್ಮ, ಕ್ಷಾರ, ಪೋಷಕಾಂಶಗಳ ಕೊರತೆ, ಯಾವ ಬೆಳೆಗೆ ಎಷ್ಟು ಗೊಬ್ಬರ ಹಾಕಬೇಕು, ಸಸ್ಯ ಸಂರಕ್ಷಣೆ ತೋರಿಸಿದಲ್ಲಿ ಸಲಹೆ ನೀಡಲಾಗುತ್ತದೆ ಎಂದರು.

    ಸಂಶೋಧನಾ ನಿರ್ದೇಶಕ ಬಿ.ಡಿ. ಬಿರಾದಾರ, ವಿಸ್ತರಣಾ ನಿರ್ದೇಶಕ ಎ.ಎಸ್. ವಸ್ತ್ರದ, ಬೀಜ ಘಟಕದ ಮುಖ್ಯಅಧಿಕಾರಿ ರವಿ ಹಂಜಿ, ಪ್ರಗತಿಪರ ರೈತ ಅವಿನಾಶ ದೇಶಪಾಂಡೆ ಮತ್ತು ಕೆವಿಕೆ ಮುಖ್ಯಸ್ಥ ಡಾ. ಶಿವಶಂಕರ ಮೂರ್ತಿ, ಡಾ. ಸವಿತಾ ಮಾತನಾಡಿದರು. ಡಾ. ವೀಣಾ ಚಂದಾವರಿ, ಡಾ. ಪ್ರಕಾಶ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts