More

    ಮಹಾಮಾರಿ ಕರೊನಾ ನಿಯಂತ್ರಣಕ್ಕೆ 198 ಐಡಿಯಾ! ಕೇಂದ್ರದ ಒಪ್ಪಿಗೆ ಕಾಯುತ್ತಿರುವ ಐಐಟಿ, ಐಐಐಟಿ

    ಕರೊನಾ ವೈರಸ್ ವಿರುದ್ಧ ಹೋರಾಟ ನಡೆಸಲು ಅನುಸರಿಸಬೇಕಾದ ಮಾರ್ಗ ಹಾಗೂ ಬೇಕಾದ ಉಪಕರಣಗಳನ್ನು ಉತ್ಪಾದಿಸಿ ಕೊಡಲು ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ಮತ್ತು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ(ಐಐಐಟಿ) ಮುಂದೆ ಬಂದಿವೆ. ದೇಶದಲ್ಲಿರುವ 23 ಐಐಟಿ ಮತ್ತು ಐಐಐಟಿಗಳಲ್ಲಿರುವ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಸಂಶೋಧನೆ ಕೈಗೊಂಡು ಕರೊನಾ ವೈರಸ್ ಹರಡದಂತೆ ಎಚ್ಚರ ವಹಿಸಲು ಏಳು ವಿಭಾಗಗಳಲ್ಲಿ 198 ಸಂಶೋಧನಾ ಪ್ರಬಂಧಗಳನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್​ಆರ್​ಡಿ)ಕ್ಕೆ ಸಲ್ಲಿಸಿವೆ.

    ಇದರಲ್ಲಿ ಪ್ರತಿ ಪ್ರಾಜೆಕ್ಟ್ ವಿವರ, ಅದನ್ನು ಕಾರ್ಯರೂಪಕ್ಕೆ ತರಲು ಬೇಕಿರುವ ಅವಧಿ ಮತ್ತು ವೆಚ್ಚದ ಮಾಹಿತಿ ಸಹ ಇದೆ. ಪಿಪಿಇ ಉತ್ಪಾದನೆಗೆ 3ರಿಂದ 6 ತಿಂಗಳ ಅವಧಿ ಮತ್ತು 16 ಲಕ್ಷ ರೂ. ನೀಡುವಂತೆ ಖರಗ್​ಪುರದಲ್ಲಿರುವ ಐಐಟಿ ಕೇಳಿದೆ. ನೂರಾರು ಯೋಜನೆಗಳ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿ ಅನುದಾನ ಬಿಡುಗಡೆ ಮಾಡಿದರೆ ನಿಗದಿತ ಅವಧಿಯಲ್ಲಿ ಕಡಿಮೆ ವೆಚ್ಚದಲ್ಲಿ ಉಪಕರಣಗಳನ್ನು ಉತ್ಪಾದಿಸಿ ಕೊಡಲಿದೆ. ದೇಶದಲ್ಲಿ ಬಾಧಿಸುತ್ತಿರುವ ಕರೊನಾ ವೈರಸ್ ಹರಡುವಿಕೆ ನಿಯಂತ್ರಿಸುವ ಸಲುವಾಗಿ ಐಐಟಿ ಮತ್ತು ಐಐಐಟಿಗಳಿಂದ ಎಂಎಚ್​ಆರ್​ಡಿ ಸಲಹೆ-ಸೂಚನೆಗಳನ್ನು ಆಹ್ವಾನಿಸಿತ್ತು.

    ಕಡಿಮೆ ವೆಚ್ಚದ ಉಪಕರಣ: ಐಐಟಿ ಪಾಲಕಾಡ್ ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ಕರೊನಾ ಪತ್ತೆ ಹಚ್ಚುವ ಸಾಧನ ಕಂಡು ಹಿಡಿದಿದ್ದಾರೆ. ಇದು ಗರ್ಭಧಾರಣೆಯ ಪರೀಕ್ಷೆ ಮಾದರಿಯಲ್ಲೇ ಕೆಲಸ ಮಾಡಲಿದೆ. ಪ್ರತಿಕಾಯ ಲೇಪಿತ ಫಿಲ್ಟರ್ ಪೇಪರ್ ಮನುಷ್ಯನ ದೇಹಕ್ಕೆ ಅಂಟಿಸಿದಾಗ ಅದರಲ್ಲಿ ಬಣ್ಣ ಬದಲಾವಣೆಯಾಗಲಿದೆ. ಇದರಲ್ಲಿ ವ್ಯಕ್ತಿಗೆ ಕರೊನಾ ಬಂದಿದೆಯೇ ಇಲ್ಲವೇ ಎಂದು ಪರಿಶೀಲಿಸಬಹುದು. ಈ ಸಂಪೂರ್ಣ ಪರೀಕ್ಷೆ 10-15 ನಿಮಿಷದಲ್ಲಿ ಮುಕ್ತಾಯವಾಗಲಿದೆ ಎಂದು ತಿಳಿಸಿದ್ದಾರೆ.

    ಆಂಟಿವೈರಲ್ ಪೇಂಟ್ಸ್: ಐಐಟಿ ಜೋಧಪುರದ ಡಾ.ಇಂದ್ರಾನಿಲ್ ಬ್ಯಾನರ್ಜಿ ಎಂಬುವರು ಆಂಟಿವೈರಲ್ ಪೇಂಟ್ಸ್ ಅಭಿವೃದ್ಧಿ ಪಡಿಸಿದ್ದಾರೆ. ಇದನ್ನು ಮನೆ, ಆಸ್ಪತ್ರೆ, ಡಯಾಗ್ನಸ್ಟಿಕ್ ಸೆಂಟರ್​ಗಳಲ್ಲಿ ಬಳಸಬಹುದು. ಇದನ್ನು ಗೋಡೆಗಳಿಗೆ ಬಳಿಯು

    ವುದರಿಂದ ವೈರಸ್ ಪ್ರವೇಶ ತಡೆಗಟ್ಟಬಹುದು. ಇದನ್ನು ಪೂರ್ಣ ಪ್ರಮಾಣದಲ್ಲಿ ಉತ್ಪಾದಿಸಲು ಒಂದು ವರ್ಷದ ಅಗತ್ಯವಿದೆ ಎಂದು ಹೇಳಿದ್ದಾರೆ.

    ಫೇಸ್ ಮಾಸ್ಕ್: ಐಐಟಿ ಗುವಾಹಟಿ ವಿದ್ಯಾರ್ಥಿಗಳು ಸಾಮಾನ್ಯ ಬಳಕೆಯ ಸೂಪರ್ ಹೈಡ್ರೋಫೋಬಿಕ್ ಲೇಪನದ ಫೇಸ್ ಮಾಸ್ಕ್ ರೂಪಿಸಿದ್ದಾರೆ. ಇದು ಕೇವಲ ಗಾಳಿ ಮಾತ್ರವಲ್ಲ, ನೀರಿನ ಹನಿಗಳ ಮೂಲಕ ಹರಡುವ ವೈರಸ್​ಅನ್ನು ಕೊಲ್ಲುವ ಶಕ್ತಿ ಹೊಂದಿರಲಿದೆ. ಸರ್ಕಾರ ಒಪ್ಪಿಗೆ ಕೊಟ್ಟರೆ ತಕ್ಷಣ ಉತ್ಪಾದಿಸಿ ಕೊಡುತ್ತೇವೆಂದು ಹೇಳಿದೆ. ಇದೇ ಐಐಟಿಯ ಡಾ. ವಿಮಲ್ ಕಟಿಯಾರ್ ಎಂಬುವರು ಮಣ್ಣಿನಲ್ಲಿ ಕರಗಿ ರಸಗೊಬ್ಬರವಾಗಿ ಪರಿವರ್ತನೆಯಾಗುವ ಮಾಸ್ಕ್ ಕಂಡುಹಿಡಿದ್ದಾರೆ. ಇದನ್ನು ಬಳಸಿದ ಮೇಲೆ ಮಣ್ಣಿಗೆ ಹಾಕಿದರೆ ಅದು ಕರಗಿ ರಸಗೊಬ್ಬರವಾಗಿ ಪರಿವರ್ತನೆ ಆಗಲಿದೆ.

    ಇಂಧನ ಸಹಿತ ವೆಂಟಿಲೇಟರ್: ಹೊರಗಡೆ ಇರುವ ಗಾಳಿಯನ್ನು ಶುದ್ಧೀಕರಿಸಿ ಅಮ್ಲಜನಕವನ್ನು ಹಿಡಿದಿಡುವಂಥ ಇಂಧನ ಸಹಿತ ಜನರೇಟರ್ ಮತ್ತು ವೆಂಟಿಲೇಟರ್​ಅನ್ನು ಐಐಟಿ ಕಾನ್ಪುರದ ಡಾ.ಶಿಖರ್ ಕೃಷ್ಣ ಝಾ ಎಂಬುವರು ರೂಪಿಸಿದ್ದಾರೆ. ಇದನ್ನು ಮನೆಗಳಲ್ಲಿ ಇಟ್ಟುಕೊಳ್ಳ ಬಹುದು, ಕಚೇರಿಗೂ ಕೊಂಡೊಯ್ಯಬಹುದು.

    ಏಳು ವಿಭಾಗ

    ವೈಯಕ್ತಿಕ ಸುರಕ್ಷತಾ ಉಪಕರಣ (ಪಿಪಿಇ- 44), ಪರೀಕ್ಷಿಸುವ ಕಿಟ್(21), ನೈರ್ಮಲ್ಯೀಕರಣ(29), ವೈದ್ಯಕೀಯ ಉಪಕರಣ/ರೋಬಾಟ್ಸ್ (35), ಕಣ್ಗಾವಲು(14), ಚಿಕಿತ್ಸೆ: ಔಷಧೀಯ ಮತ್ತು ಔಷಧ ಹೊರತಾಗಿ(31), ದತ್ತಾಂಶ ವಿಶ್ಲೇಷಣೆ: ಕೃತಕ ಬುದ್ಧಿಮತ್ತೆ, ಸಾಂಕ್ರಾಮಿಕ ರೋಗದ ಮಾದರಿ ಮತ್ತು ರೋಗದ ಡೈನಾಮಿಕ್ಸ್(24) ಈ ಏಳು ವಿಭಾಗದಲ್ಲಿ ಸಂಶೋಧನೆಗಳನ್ನು ಕೈಗೊಂಡು ಅದರ ಪ್ರಾಯೋಗಿಕ ಮಾದರಿಗಳ ಬಗ್ಗೆ ಎಂಎಚ್​ಆರ್​ಡಿಗೆ ಸಲ್ಲಿಸಿದೆ. ಕ್ವಾರಂಟೈನ್​ನಲ್ಲಿರುವ ವ್ಯಕ್ತಿಯ ಹಾಜರಾತಿ, ಟ್ರಾ್ಯಕಿಂಗ್ ಮಾಡಲು ಸಲಹೆ, ಸೂಚನೆಗಳು ಬಂದಿದೆ. ಮೊಬೈಲ್​ಫೋನ್ ಆಪ್, ಇಂಟರ್​ನೆಟ್ ಆಫ್ ಥಿಂಗ್ಸ್ ಸಹಿತ ರೋಗಿ ನಿರ್ವಹಣೆ, ಅತ್ಯಾಧುನಿಕ ಕ್ಯಾಮರಾ ಅಳವಡಿಕೆ, ಟ್ರಾವೆಲ್ ಟ್ರಾ್ಯಕರ್ಸ್ ಹೆಚ್ಚಾಗಿ ಬಳಸಲು ವಿದ್ಯಾ ಸಂಸ್ಥೆಗಳು ಎಂಎಚ್​ಆರ್​ಡಿಗೆ ಸಲಹೆ ನೀಡಿವೆ.

     

    | ದೇವರಾಜ್ ಎಲ್. ಬೆಂಗಳೂರು

     

    20ರವರೆಗೆ ಲಾಕ್​ಡೌನ್ ಇನ್ನಷ್ಟು ಬಿಗಿ; 12 ಗಡಿ ಭಾಗ ಸೀಲ್​ ಮಾಡಿದ್ದಾರೆ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts