More

    ಎಚ್‌ಕೆಇ ಖಾತೆಯಲ್ಲಿ 165 ಕೋಟಿ ರೂ.ಜಮಾ :ಡಾ.ಭೀಮಾಶಂಕರ ಬಿಲಗುಂದಿ

    ಡಾ.ಭೀಮಾಶಂಕರ ಬಿಲಗುಂದಿ ಹೇಳಿಕೆ | ಸಮಯಕ್ಕೆ ಬಾರದ ನಮೋಶಿ ಕಾದು ಬೇಸರ ಸುಸ್ತಾಗಿ ನಿರ್ಗಮನ
    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ (ಎಚ್‌ಕೆಇ) ವಿವಿಧ ಬ್ಯಾಂಕ್ ಖಾತೆಗಳಲ್ಲಿ ೧೬೫.೮೦ ಕೋಟಿ.ರೂ.ಗಳನ್ನು ಜಮಾ ಇರಿಸಲಾಗಿದೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಎಂದು ಸಂಸ್ಥೆಯ ನಿರ್ಗಮಿತ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಹೇಳಿದರು.
    ನಗರದ ಸೊಸೈಟಿ ಕಚೇರಿಯಲ್ಲಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸುವ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿ, ಇಷ್ಟೊಂದು ದೊಡ್ಡ ಮೊತ್ತ ಖಾತೆಯಲ್ಲಿದೆ. ಅಲ್ಲದೆ ಇನ್ನೂ ೬೩ ಕೋಟಿ. ರೂ.ವಿವಿಧ ಮೂಲಗಳಿಂದ ಶುಲ್ಕ ಬರುವುದು ಬಾಕಿ ಇದೆ. ಇದಿಷ್ಟು ಸೇರಿದರೆ ೨೨೦ ಕೋ.ರೂ.ಮೇಲಾಗುತ್ತದೆ. ಇದರಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು ಎಂದರು.
    ನೂತನ ಆಡಳಿತ ಮಂಡಳಿಯವರು ಎಲ್ಲರು ಸೇರಿಕೊಂಡು ಸಹೋದರರಂತೆ ಕೂಡಿಕೊಂಡು ಸಂಸ್ಥೆಯ ಪ್ರಗತಿಯ ಕೆಲಸ ಮಾಡೋಣ ಎಂಬ ಭಾವನೆ ನಮ್ಮಲ್ಲಿದೆ. ಅವರು ಹಾಗೆ ನಡೆದುಕೊಂಡರೆ ಮುಂದಿನ ದಿನಗಳಲ್ಲಿ ಸಾಕಷ್ಟು ಕೆಲಸಗಳನ್ನು ಎಲ್ಲರು ಸೇರಿಕೊಂಡು ಮಾಡಬಹುದು ಎಂದು ಬಿಲಗುಂದಿ ತಿಳಿಸಿದರು.
    ಸೈನಿಕ್ ಸ್ಕೂಲ್ ಕಟ್ಟಡ ಚೆಕ್‌ಗೆ ತಡೆ
    ಖಾತೆಯಲ್ಲಿ ಇಷ್ಟು ಹಣವಿದ್ದರೂ ಸಹ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷರು, ಇನ್ನೂ ಅಧಿಕಾರ ಸ್ವೀಕರಿಸುವ ಮುನ್ನವೇ ಬ್ಯಾಂಕ್‌ಗೆ ಪತ್ರ ನೀಡಿ ತಮ್ಮ ಕನಸಿನ ಯೋಜನೆಯಾಗಿರುವ ಬೀದರನಲ್ಲಿ ಸೈನಿಕ ಶಾಲೆಯ ನಿರ್ಮಾಣ ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರರಿಗೆ ಮುಂಗಡವಾಗಿ ನೀಡಲಾಗಿದ್ದ ೩ ಕೋ.ರೂ. ಚೆಕ್ ತಡೆ ಹಿದಿದ್ದಾರೆ. ಅಲ್ಲದೆ ಎಂಆರ್‌ಎAಸಿ ಸ್ಯಾಕ್ ಕಟ್ಟಡದ ಗುತ್ತಿಗೆದಾರರಿಗೆ ಮೊತ್ತ ಪಾವತಿಸಲು ಸಹ ತಡೆಯೊಡ್ಡಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಇದರಿಂದಾಗಿ ಚೆಕ್ ಮರಳಿ ಸಂಸ್ಥೆಗೆ ತರಿಸಿಕೊಳ್ಳಲಾಗಿದೆ. ಇದು ನೋಡಿದಾಗ ತಮ್ಮ ಕನಸಿನ ಯೋಜನೆ ಸೈನಿಕ ಶಾಲೆ ನಿರ್ಮಿಸುವುದು ಅನುಮಾನ ಎಂದು ಸಂಶಯ ವ್ಯಕ್ತಪಡಿಸಿದರು.
    ತಮ್ಮ ಅವಧಿಯಲ್ಲಿ ೧೯೫ ಕೋ.ರೂ.ಗಳನ್ನು ವೆಚ್ಚ ಮಾಡಿ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಬಸವೇಶ್ವರ ಆಸ್ಪತ್ರೆ ಸೇರಿದಂತೆ ಹಲವು ಕಡೆಗಳಲ್ಲಿ ಸಲಕರಣೆಗಳನ್ನು ಖರೀದಿಸಲಾಗಿದೆ. ಈ ಹಿಂದೆ ಯಾರು ಇಷ್ಟೊಂದು ಪ್ರಗತಿ ಮಾಡಿಲ್ಲ ಎಂದು ಅಂಕಿ ಸಂಖ್ಯೆಗಳನ್ನು ವಿವರಿಸಿದರು.
    ನಾಪತ್ತೆಯಾದ ಆಡಳಿತಾಧಿಕಾರಿ
    ಸಂಸ್ಥೆಯ ಆಡಳಿತಾಧಿಕಾರಿ ಸಿ.ಸಿ.ಪಾಟೀಲ್ ಅವರು ಕಳೆದ ನಾಲ್ಕೆÊದು ದಿನಗಳಿಂದ ನಾಪತ್ತೆಯಾಗಿದ್ದಾರೆ. ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಸಂಪರ್ಕಕ್ಕೂ ಬರುತ್ತಿಲ್ಲ. ಅವರನ್ನು ಹೊಸ ಆಡಳಿತ ಮಂಡಳಿಯವರೇ ಬಲವಂತವಾಗಿ ಎಲ್ಲಿಗೂ ಕಳುಹಿಸಿಕೊಟ್ಟಿದ್ದಾರೆ ಎಂದು ಡಾ.ಭೀಮಾಶಂಕರ ಬಿಲಗುಂದಿ ಹೇಳಿದರು.
    ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡುವ ವೇಳೆಯಲ್ಲಿ ಆಡಳಿತಾಧಿಕಾರಿ ಹಾಗೂ ತಾವು ಜಂಟಿಯಾಗಿ ಸಹಿ ಮಾಡಬೇಕು. ಆದರೆ, ಈಗ ಅವರು ಎಲ್ಲಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದು ದೂರಿದರು. ಸಂಸ್ಥೆಯಲ್ಲಿ ಅಗತ್ಯವಿರುವ ಸಂಸ್ಥೆಗಳಲ್ಲಿ ಬೇಕಾಗಿರುವ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
    ಕಾದು ಸುಸ್ತಾಗಿ ನಿರ್ಗಮನ

    ನೂತನ ಅಧ್ಯಕ್ಷ ಶಶೀಲ್ ನಮೋಶಿ ಅವರಿಗೆ ಅಧಿಕಾರ ಹಸ್ತಾಂತರಿಸಲು ಸಂಸ್ಥೆಯ ಕಚೇರಿಯಲ್ಲಿ ಅಧ್ಯಕ್ಷರಾಗಿದ್ದ ಡಾ.ಭೀಮಾಶಂಕರ ಬಿಲಗುಂದಿ ಸುಮಾರು ಎರಡು ಗಂಟೆಗೂ ಹೆಚ್ಚು ಹೊತ್ತು ಕಾದು ಕುಳಿತುಕೊಂಡರು. ನಾಲ್ಕೆÊದು ದಿನ ಹಿಂದೆಯೇ ಅವರಿಗೆ ೫ಗಂಟೆಯೊಳಗೆ ಬರಲು ಪತ್ರ ನೀಡಲಾಗಿದೆ. ಅಲ್ಲದೆ ಮಾಹಿತಿಯೂ ನೀಡಲಾಗಿತ್ತು. ಆದರೆ, ನಮೋಶಿ ಅವರು ಆ ಸಮಯಕ್ಕೆ ಬರಲೇ ಇಲ್ಲ. ಇದರಿಂದಾಗಿ ಸುಮಾರು ಹೊತ್ತು ಬಿಲಗುಂದಿ ಕಾದರು.ಕೊನೆಗೆ ಸುಸ್ತಾಗಿ ಬೇಸರ ವ್ಯಕ್ತಪಡಿಸಿ. ದಾಖಲೆಗಳನ್ನು ಮೇಲೆ ಸಹಿ ಮಾಡಿ ಅವನ್ನು ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರು ಹಾಗೂ ಸಂಸ್ಥೆಯ ಸಿಬ್ಬಂದಿಗೆ ನೀಡಿದರು. ಅಲ್ಲಿ ಜಮಾಗೊಂಡಿದ್ದ ನೂತನ ಆಡಳಿತ ಮಂಡಳಿಯವರಿಗೆ ಶುಭ ಕೋರಿ ಡಾ.ಭೀಮಾಶಂಕರ ನಿರ್ಗಮಿಸಿದರು. ಅದಾದ ಕೆಲ ಹೊತ್ತಿನಲ್ಲಿ ಶಶೀಲ್ ನಮೋಶಿ ಅವರು ಆಗಮಿಸಿ ಪೂಜೆ ನೆರವೇರಿಸಿ, ಪದಗ್ರಹಣ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts