More

    16 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆ

    ಚಿಕ್ಕೋಡಿ: ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಗೆ ಮುಂದಿನ ಐದು (2023-2028) ವರ್ಷಗಳ ಅವಧಿಗೆ ನಡೆದ ನಿರ್ದೇಶಕರ ಚುನಾವಣೆಗೆ 16 ಜನ ನಿರ್ದೇಶಕರು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಸಹಕಾರ ಸಂಘಗಳ ನಿವೃತ್ತ ಉಪನಿಬಂಧಕರು ಹಾಗೂ ಚುನಾವಣಾಧಿಕಾರಿ ಜಿ.ಡಿ.ಗಚ್ಚಿ ತಿಳಿಸಿದರು.

    ಸಕ್ಕರೆ ಕಾರ್ಖಾನೆಯ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ವ ಸಾಧಾರಣ ಸಭೆಯಲ್ಲಿ ಅ ವರ್ಗದಿಂದ ಅಮಿತ ಕೋರೆ ಅಂಕಲಿ, ಮಹಾಂತೇಶ ಕವಟಗಿಮಠ ಚಿಕ್ಕೋಡಿ, ಅಣ್ಣಾಸಾಹೇಬ ಜೊಲ್ಲೆ ಯಕ್ಸಂಬಾ, ಮಲ್ಲಿಕಾರ್ಜುನ ಕೋರೆ ಅಂಕಲಿ, ಭರತೇಶ ಬನವಣೆ ನಸಲಾಪೂರ, ಅಜಿತ ದೇಸಾಯಿ ಯಡೂರ, ತಾತ್ಯಾಸಾಹೇಬ ಕಾಟೆ ಸೌಂದತ್ತಿ, ಪರಸಗೌಡ ಪಾಟೀಲ ಜುಗಳ, ಸಂದೀಪ ಪಾಟೀಲ ಭೋಜ, ಮಹಾವೀರ ಮಿರ್ಜೆ ಚಿಕ್ಕೋಡಿ, ಚೇತನ ಪಾಟೀಲ ಸದಲಗಾ, ಮಲ್ಲಪ್ಪ ಮೈಶಾಳೆ ದಿಗ್ಗೇವಾಡಿ, ಮಹಾವೀರ ಕಾತ್ರಾಳೆ ಶಿರಗುಪ್ಪಿ, ಭೀಮಗೌಡ ಪಾಟೀಲ ಕೇರೂರ, ಅಣ್ಣಾಸಾಹೇಬ ಇಂಗಳೆ ಯಕ್ಸಂಬಾ ಹಾಗೂ ಬ.ಮತ್ತು ಡ ವರ್ಗದಿಂದ ನಂದಕುಮಾರ ನಾಶಿಪುಡೆ ನೇಜ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಸತತ ಮೂರನೇ ಬಾರಿ ಅವಿರೋಧ ಆಯ್ಕೆ ನಡೆದಿದೆ. ಸಾಮಾನ್ಯ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಎಲ್ಲ ನಿರ್ದೇಶಕರನ್ನು ಚುನಾವಣಾಧಿಕಾರಿ ಸನ್ಮಾನಿಸಿದರು.

    ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಡಾ.ಪ್ರಭಾಕರ ಕೋರೆ ಅವರ ಮೇಲೆ ರೈತರು ಇಟ್ಟಿರುವ ವಿಶ್ವಾಸ ಹಾಗೂ ಅವರ ಮಾರ್ಗದರ್ಶನದಲ್ಲಿ ಕಾರ್ಖಾನೆ ಇಂದು ಪ್ರಗತಿಪಥದಲ್ಲಿ ಮುನ್ನಡೆದಿದೆ. ಚಿದಾನಂದ ಬಸಪ್ರಭು ಸಹಕಾರಿ ಸಕ್ಕರೆ ಕಾರ್ಖಾನೆ ರೈತ ಸದಸ್ಯರಿಗೆ ಹಾಗೂ ಕಾರ್ಮಿಕರಿಗೆ ವಿಮೆ ಸೇರಿ ಹಲವು ಸೌಲಭ್ಯ ಒದಗಿಸಿದೆ. ರೈತ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ ಎಂದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಗಡಿಭಾಗದ ರೈತರ ಹಿತ ಕಾಪಾಡುವ ಚಿದಾನಂದ ಸಹಕಾರಿ ಸಕ್ಕರೆ ಕಾರ್ಖಾನೆಗೆ ನಾಲ್ಕು ಬಾರಿ ಅವಿರೋಧವಾಗಿ ನಿರ್ದೇಶಕ ಮಂಡಳಿ ಆಯ್ಕೆಯಾಗಿ ಕಾರ್ಖಾನೆಯ ಪ್ರಗತಿಗೆ ಸಹಕಾರಿಯಾಗಿದೆ. 2500 ರಿಂದ 10 ಸಾವಿರ ಟನ್ ಕಬ್ಬು ನುರಿಸುವ ಈ ಕಾರ್ಖಾನೆ ವರ್ಷದಿಂದ ವರ್ಷಕ್ಕೆ ಪ್ರಗತಿಯಲ್ಲಿ ಸಾಗಿದೆ ಎಂದರು. ಅಮಿತ ಕೋರೆ ಮಾತನಾಡಿ, ಸಕ್ಕರೆ ಮತ್ತು ಎಥೆನಾಲ್ ಉತ್ಪಾದನೆಯಲ್ಲಿ ಭಾರತವು ಬ್ರೇಜಿಲ್ ಮಾದರಿ ಪಾಲಿಸಬೇಕಿದೆ. ಕೇಂದ್ರ ಸರ್ಕಾರ ಪೆಟ್ರೋಲ್‌ನಲ್ಲಿ ಶೇ.10 ಇಥೆನಾಲ್ ಮಿಕ್ಸ್ ಮಾಡುವ ಯೋಜನೆ ರೂಪಿಸಿದೆ. ಮುಂದೆ ಶೇ.20 ಹೆಚ್ಚಿಗೆ ಮಾಡಿದರೆ ರೈತರಿಗೆ ಹೆಚ್ಚಿನ ದರ ಕೊಡಲು ಸಾಧ್ಯವಾಗುತ್ತದೆ ಎಂದರು.

    ಕಾರ್ಖಾನೆಯು ಪ್ರಸಕ್ತ ಹಂಗಾಮಿನಲ್ಲಿ ಇಲ್ಲಿಯವರೆಗೆ 10,40,993 ಟನ್ ಕಬ್ಬು ನುರಿಸಿ 10,72,100 ಕ್ವಿಂಟಾಲ್ ಸಕ್ಕರೆ ಉತ್ಪಾದನೆ ಮಾಡಿದೆ. ಜತೆಗೆ 28.7ಮೆ.ವಾಟ್ ಸಾಮರ್ಥ್ಯದ ಸಹವಿದ್ಯುತ್ ಘಟಕ, 30 ಕೆಎಲ್‌ಪಿಡಿ ಡಿಸ್ಟಿಲರಿ ಘಟಕಗಳು ಉತ್ತಮ ಕಾರ್ಯನಿರ್ವಹಿಸುತ್ತಿವೆ. ಈಗಿದ್ದ 30ಕೆಎಲ್‌ಪಿಡಿ ಸಾಮರ್ಥ್ಯದ ಡಿಸ್ಟಿಲರಿ ಘಟಕವನ್ನು 200 ಕೆಎಲ್‌ಪಿಡಿ ಸಾಮರ್ಥ್ಯಕ್ಕೆ ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಕಾರ್ಯವು ಪ್ರಗತಿಯಲ್ಲಿದೆ. ಕಿಸಾನ ಬಜಾರ್‌ಪ್ರಾರಂಭಿಸಿದ್ದು, ನೀರಾವರಿ ಯೋಜನೆ ಅನುಷ್ಠಾನಗೊಳಿಸಿದೆ ಎಂದರು. ಭರತೇಶ ಬನವಣೆ, ಮಲ್ಲಿಕಾರ್ಜುನ ಕೋರೆ, ಅಜೀತ ದೇಸಾಯಿ ಸೇರಿ ಅವಿರೋಧ ಆಯ್ಕೆಯಾದ ಸದಸ್ಯರು ಉಪಸ್ಥಿತರಿದ್ದರು. ವ್ಯವಸ್ಥಾಪಕ ನಿರ್ದೇಶಕ ಆರ್.ಟಿ.ದೇಸಾಯಿ ಸ್ವಾಗತಿಸಿದರು.ಎಸ್.ಎಲ್.ಹಕಾರೆ ನಿರೂಪಿಸಿದರು. ಮುಖ್ಯ ಸಮಯಪಾಲಕ ಕೆ.ಜೆ.ಪಾಟೀಲ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts