More

    153 ಕೋಟಿ ರೂ. ಜಾಗಕ್ಕಾಗಿ ಹಗ್ಗಜಗ್ಗಾಟ

    ಯು.ಎಸ್. ಪಾಟೀಲ ದಾಂಡೇಲಿ: ಇಡೀ ದೇಶದಲ್ಲೇ ಮೊಟ್ಟಮೊದಲ ಪ್ಲೈವುಡ್ ಕಾರ್ಖಾನೆ ಆರಂಭವಾಗಿದ್ದು ದಾಂಡೇಲಿಯಲ್ಲಿ. ಇದೇ ಇಂಡಿಯನ್ ಪ್ಲೈವುಡ್ ಮ್ಯಾನುಫ್ಯಾಕ್ಚರ್ಸ್ (ಐಪಿಎಂ) ಕಾರ್ಖಾನೆ. ಕಾಲಾನಂತರದಲ್ಲಿ ಉತ್ಪಾದನೆ ಸ್ಥಗಿತಗೊಂಡು ಮುಚ್ಚಿದ ಈ ಕಾರ್ಖಾನೆಗಾಗಿ ಲೀಸ್ ಪಡೆದುಕೊಂಡ ಜಾಗ ಈಗ ವಿವಾದದ ಗೂಡಾಗಿ ಮಾರ್ಪಟ್ಟಿದೆ. 153 ಕೋಟಿ ರೂಪಾಯಿಗೂ ಅಧಿಕ ಬೆಲೆಬಾಳುವ ಈ ಜಾಗಕ್ಕಾಗಿ ಹಗ್ಗಜಗ್ಗಾಟ ಶುರುವಾಗಿದೆ.

    ಐಪಿಎಂ ಕಾರ್ಖಾನೆಯು ದಾಂಡೇಲಿಯಲ್ಲಿ 1943ರಲ್ಲಿ ಆರಂಭವಾಯಿತು. ಮುಂಬೈನಲ್ಲಿ ಕೇಂದ್ರ ಕಚೇರಿ ಇರುವ ವಿಸಾಂಜಿ

    ಗ್ರುಪ್ಸ್​ನ ಕಾರ್ಖಾನೆ ಇದು. ಬಹು ವರ್ಷಗಳ ಕಾಲ ಉತ್ತಮವಾಗಿ ಕಾರ್ಯನಿರ್ವಹಿಸಿತು. ಕಾರ್ಖಾನೆಗೆ ಬೇಕಾದ ಕಟ್ಟಿಗೆಯನ್ನು ಒದಗಿಸಲು ಸರ್ಕಾರವು ಒಪ್ಪಂದವನ್ನು ಮಾಡಿಕೊಂಡಿತ್ತು. ಪೂರ್ಣ ಪ್ರಮಾಣದ ಉತ್ಪನ್ನ ಆಗುವ ಸಮಯದಲ್ಲಿ ಕಾರ್ಖಾನೆಯಲ್ಲಿ 800ಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದರು.

    ರಾಜ್ಯದ ಧಾರವಾಡ (ಕಲ್ಯಾಣ ನಗರ), ಹಂಗಾರಕಟ್ಟ, ಉಡುಪಿ, ಸುಬ್ರಮಣ್ಯ, ಧರ್ಮಸ್ಥಳ, ತಾಳಗುಪ್ಪ, ಕಂವಚೂರು, ಶಿವಮೊಗ್ಗ ಹಾಗೂ ಮಹಾರಾಷ್ಟದ ನಾಗಪುರ, ಮುಂಬೈ, ಮಧ್ಯಪ್ರದೇಶದ ಇಟಾರ್ಸಿ, ಅಂಡಮಾನ್ ನಿಕೋಬಾರ್​ನಲ್ಲಿ ಕೂಡ ಪ್ಲೈವುಡ್ ಕಾರ್ಖಾನೆಗಳು ಮತ್ತು ಶಾಖೆಗಳನ್ನು ವಿಸಾಂಜಿ ಗ್ರುಪ್​ನಲ್ಲಿ ಹೊಂದಿತ್ತು.

    ವಿದೇಶಗಳಲ್ಲೂ ಬೇಡಿಕೆ: ದಾಂಡೇಲಿಯ ಮತ್ತು ಇತರೆಡೆಯ ಕಾರ್ಖಾನೆಗಳಲ್ಲಿ ಆಂಕರ್ ಬ್ರಾಂಡಿನ ವಿವಿಧ ರೀತಿಯ ಪ್ಲೈವುಡ್​ಗಳನ್ನು ತಯಾರಿಸ ಲಾಗುತ್ತಿತ್ತು. ಈ ಪ್ಲೈವುಡ್​ಗಳಿಗೆ ದೇಶ- ವಿದೇಶಗಳಲ್ಲಿ ಬೇಡಿಕೆ ಯಿತ್ತು. ಕಾರ್ಖಾನೆಯ ವಾಟರ್ ಪ್ರೂಫ್ ಮರಿನ್ ಪ್ಲೈವುಡ್ ಮತ್ತು ಶಟರಿಂಗ್ ಪ್ಲೈವುಡ್ ಭಾರತದಲ್ಲಿ ಮಾತ್ರವಲ್ಲದೆ, ಮಧ್ಯಪ್ರಾಚ್ಯ ರಾಷ್ಟ್ರಗಳಿಗೂ ರಫ್ತು ಆಗುತ್ತಿತ್ತು. ಕಾರ್ಖಾನೆಯ ಉಪ ಸಂಸ್ಥೆಗಳಾದ ಇಂಡಿಯನ್ ಪ್ಲಾಸ್ಟಿಕ್, ಕರ್ನಾಟಕ ವಿನಿಯರ್ಸ್, ಮ್ಯಾಚ್ ಬಾಕ್ಸ್ ಕಾರ್ಖಾನೆಗಳು ಕೆಲ ಕಾಲ ನಡೆದು ಮುಚ್ಚಲ್ಪಟ್ಟವು.

    ಲಾಕ್​ಡೌನ್ ಘೊಷಣೆ: ದಾಂಡೇಲಿ ಕಾರ್ಖಾನೆಯ ಆಡಳಿತ ಮಂಡಳಿಯು 1989ರಲ್ಲಿ ಲಾಕ್​ಡೌನ್ ಘೊಷಿಸಿತು. 1995ರಲ್ಲಿ ಸಂಪೂರ್ಣವಾಗಿ ಮುಚ್ಚಿತು. ಇದಕ್ಕೆ ಕಾರಣ 1985-86ರ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಹೊಸ ಅರಣ್ಯ ನೀತಿ. ಇದರಿಂದಾಗಿ ಕಚ್ಚಾ ವಸ್ತುವಾದ ಕಟ್ಟಿಗೆಯ ಕೊರತೆ ಉಂಟಾಗಿ ಕಾರ್ಖಾನೆ ಮುಚ್ಚಲು ಕಾರಣವಾಯಿತು. ಕೆಲ ಕಾಲ ಕಾರ್ಖಾನೆಯವರು ಹೊರ ರಾಷ್ಟ್ರಗಳಾದ ಮಲೇಶಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಟಿಂಬರ್ ಖರೀದಿ ಮಾಡಿ ಉತ್ಪಾದನೆಗೆ ಪ್ರಯತ್ನಿಸಿದರು. ಆದರೆ, ಇದು ಕಾರ್ಖಾನೆಗೆ ಲಾಭಕ್ಕಿಂತ ನಷ್ಟವನ್ನೇ ಹೆಚ್ಚಿಸಿತು. ಹೀಗಾಗಿ, ಉತ್ಪಾದನೆ ಕುಂಠಿತವಾಗಿ ಕಾರ್ಖಾನೆ ಮುಚ್ಚುವುದು ಅನಿವಾರ್ಯವಾಯಿತು. ಈ ಸಂಸ್ಥೆಯ ಉಳಿದ ಕಾರ್ಖಾನೆಗಳು ಕೂಡ ಇದೇ ಹಾದಿ ಹಿಡಿದವು.

    ದಾಂಡೇಲಿಯ ಐಪಿಎಂ ಕಾರ್ಖಾನೆ ತೆರೆಯಲು ಅರಣ್ಯ ಇಲಾಖೆಯು 76 ಎಕರೆ 20 ಗುಂಟೆ ಜಾಗವನ್ನು ಲೀಸ್ (ಗುತ್ತಿಗೆ) ಮೇಲೆ ನೀಡಿತ್ತು. 1984ರವರೆಗೆ ಈ ಲೀಸ್ ಅವಧಿ ವಿಸ್ತರಿಸಿಕೊಂಡು ಬರಲಾಗಿದೆ. ಕಾರ್ಖಾನೆ ಮುಚ್ಚಿದ್ದರೂ ಈ ಜಾಗದ ಮೇಲೆ ಒಡೆತನ ಸಾಧಿಸಿ ವಿಸಾಂಜಿ ಗ್ರುಪ್ಸ್​ನವರು ಕೋರ್ಟ್ ಮೆಟ್ಟಿಲನ್ನೂ ಏರಿದರು. ಏಕೆಂದರೆ, ಈ ಜಾಗದ ಸದ್ಯದ ಮಾರುಕಟ್ಟೆ ಬೆಲೆ 153 ಕೋಟಿ ರೂಪಾಯಿಗೂ ಅಧಿಕ. ಕಾರ್ಖಾನೆಯವರು ಈಗ ಈ ಜಾಗದ ಒಡೆತನಕ್ಕಾಗಿ ಶಿರಸಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಮೇಲ್ಮವನಿ ಸಲ್ಲಿಸಿದ್ದಾರೆ.

    ಐಪಿಎಂ ಕಂಪನಿಯು ಕಾರ್ಖಾನೆಯ ಜಾಗದ ಖಾಲಿ ಮಾಡುವಂತರ ಧಾರವಾಡದ ಉಚ್ಚ ನ್ಯಾಯಾಲಯದ ಆದೇಶ ನೀಡಿದೆ. ಆದರೆ, ಕಂಪನಿಯವರು ಶಿರಸಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ನಡೆದಿದ್ದು, ಅಂತಿಮ ನಿರ್ಧಾರ ಕೆಲವೇ ದಿನಗಳಲ್ಲಿ ಹೊರಬೀಳಲಿದೆ. | ವೀರೇಶ ನಾಯಕ ಸಹಾಯಕ ಅರಣ್ಯ ಆಧಿಕಾರಿ, ದಾಂಡೇಲಿ ಉಪವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts