More

    1489 ಕಾರು ಮಾಲೀಕರಲ್ಲಿ ಬಿಪಿಎಲ್ ಕಾರ್ಡ್

    ಉಡುಪಿ: ಬಿಪಿಎಲ್ ಎಂದರೆ ಬಡತನ ರೇಖೆಗಿಂತ ಕೆಳಗಿರುವವರು ಎಂದರ್ಥ. ಈ ಪಡಿತರ ಚೀಟಿ ಬಡವರಿಗೆ ಮಾತ್ರ ಮೀಸಲು. ಆದರೆ ಸಾರಿಗೆ ಇಲಾಖೆ ಮೂಲಕ ಪರಿಶೀಲನೆ ನಡೆಸಿದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 705 ಹಾಗೂ ಉಡುಪಿ ಜಿಲ್ಲೆಯಲ್ಲಿ 784 ಮಂದಿ ಕಾರು ಮಾಲೀಕರಲ್ಲಿ ಬಿಪಿಎಲ್ ಕಾರ್ಡು ಇರುವುದು ಪತ್ತೆಯಾಗಿದೆ.
    ಅನರ್ಹರಿಗೆ ಬಿಪಿಎಲ್ ಪಡಿತರ ಚೀಟಿ ಹಿಂತಿರುಗಿಸಲು ನೀಡಿದ ಗಡುವು ಮುಗಿದ ಬಳಿಕ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಎರಡನೇ ಹಂತದ ಪತ್ತೆ ಕಾರ್ಯಕ್ಕೆ ಇಳಿದಿದೆ. ಅದರಂತೆ ಆರ್‌ಟಿಒ ಡೇಟಾಬೇಸ್ ಪರಿಶೀಲಿಸಿದಾಗ ಈ ಮಾಹಿತಿ ಲಭಿಸಿದ್ದು, ಎಲ್ಲರಿಗೂ ನೋಟಿಸ್ ಜಾರಿ ಮಾಡಲಾಗಿದೆ.

    ಪರಿಶೀಲನೆ ಮುಗಿದಿಲ್ಲ: ಸಾರಿಗೆ ಇಲಾಖೆ ದತ್ತಾಂಶವನ್ನು ಪಡಿತರ ಚೀಟಿ ದತ್ತಾಂಶದೊಂದಿಗೆ ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಅನರ್ಹರನ್ನು ಪತ್ತೆ ಹಚ್ಚುತ್ತಿದ್ದಾರೆ. ಇಲ್ಲಿವರೆಗೆ ಲಘು ವಾಹನ ಪರಿಶೀಲನೆ ಮಾತ್ರ ನಡೆದಿದೆ. ಭಾರಿ ವಾಹನಗಳ ಪರಿಶೀಲನೆ ಬಾಕಿ ಇದೆ. ಇದುವರೆಗೆ ಸಿಕ್ಕಿರುವ ದತ್ತಾಂಶದಲ್ಲಿ ಉಡುಪಿ ತಾಲೂಕು 358, ಕುಂದಾಪುರ 294, ಕಾರ್ಕಳ ತಾಲೂಕಿನಲ್ಲಿ 132 ಕಾರು ಹೊಂದಿರುವ ಮಾಲೀಕರು ಬಿಪಿಎಲ್ ಕಾರ್ಡ್‌ನವರಾಗಿರುವುದು ಪತ್ತೆಯಾಗಿದೆ. ಮೂರು ಮಂದಿ ಅನಾಮಧೇಯ ಫಲಾನುಭವಿಗಳನ್ನು ಪತ್ತೆ ಮಾಡಲಾಗಿದೆ. ಇವೆರಲ್ಲರಿಗೂ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ರದ್ದಾಗಿದ್ದು 2110: ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 1323 ಕುಟುಂಬಗಳು ಸ್ವಯಂ ಆಗಿ ಬಿಪಿಎಲ್ ಕಾರ್ಡ್ ಹಿಂದಿರುಗಿಸಿದ್ದಾರೆ. ಉಡುಪಿ ತಾಲೂಕು 595, ಕುಂದಾಪುರ, 185, ಕಾರ್ಕಳ ತಾಲೂಕು 543. ಇದುವರೆಗೆ 2,110 ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ಜಿಲ್ಲೆಯಲ್ಲಿ 19,169 ಎಪಿಎಲ್ ಕಾರ್ಡ್ ಕುಟುಂಬ, 1,61,407 ಬಿಪಿಎಲ್ ಕುಟುಂಬ, 28,741 ಅಂತ್ಯೋದಯ ಕುಟುಂಬಗಳಿವೆ.

    ಆದಾಯ ಮಿತಿ 1.20 ಲಕ್ಷ ರೂ.: ಬಿಪಿಎಲ್ ಪಡಿತರ ಚೀಟಿ ಹೊಂದಲು ಹಲವು ಮಾನದಂಡಗಳಿವೆ. ಅದರಲ್ಲಿ ಪ್ರಮುಖವಾದದ್ದು ವಾರ್ಷಿಕ 1.20 ಲಕ್ಷ ರೂ. ಆದಾಯ ಮಿತಿಯೊಳಗಿರುವುದು. ಆದಾಯ ತೆರಿಗೆ ಪಾವತಿದಾರರು, 1000 ಚದರ ಅಡಿಗಿಂತ ದೊಡ್ಡ ಮನೆ ಹೊಂದಿರುವವರು. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು, ಸಹಕಾರ ಸಂಘಗಳ ಖಾಯಂ ನೌಕರರು, ಸ್ವಾಯತ್ತ ಸಂಸ್ಥೆ, ಮಂಡಳಿ, ಆಸ್ಪತ್ರೆ ನೌಕರರು, ವಕೀಲರು, ಆಡಿಟರ್‌ಗಳು, ದೊಡ್ಡ ಅಂಗಡಿ, ಹೋಟೆಲ್ ವರ್ತಕರು, ಸ್ವಂತ ಉಪಯೋಗಕ್ಕೆ ಕಾರು/ಲಾರಿ/ಜೆಸಿಬಿ ಇತ್ಯಾದಿ ವಾಹನ ಹೊಂದಿದವರು, ಅನುದಾನಿತ ಶಾಲೆ, ಕಾಲೇಜು ನೌಕರರು, ಮನೆ, ಮಳಿಗೆ, ಕಟ್ಟಡ ಬಾಡಿಗೆ ನೀಡಿ ಆದಾಯ ಪಡೆಯುತ್ತಿರುವವರು, ನಿವೃತ್ತಿ ವೇತನ ಪಡೆಯುತ್ತಿರುವವರು, ಬಹುರಾಷ್ಟ್ರೀಯ ಕಂಪನಿ ಉದ್ದಿಮೆದಾರರು ಅನರ್ಹರಾಗಿರುತ್ತಾರೆ.

    ಹಲವು ದತ್ತಾಂಶಗಳ ಸಂಗ್ರಹ: ಆರ್‌ಟಿಒ ದಾಖಲೆ ಪರಿಶೀಲಿಸಿ ಕಾರ್ಡು ಅನರ್ಹಗೊಳಿಸುವುದು ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆ, ಸರ್ಕಾರಿ ನೌಕರರ ದಾಖಲೆ, ನಿಗಮ, ಮಂಡಳಿ ನೌಕರರ ದಾಖಲೆ, ಕಟ್ಟಡ/ಭೂಮಿ ವಿಸ್ತೀರ್ಣದ ದಾಖಲೆ ಹಾಗೂ ಆಧಾರ್ ಕಾರ್ಡಿನೊಂದಿಗೆ ತಾಳೆ ನೋಡಿ, ಅನರ್ಹರಿದ್ದರೆ ಪತ್ತೆ ಹಚ್ಚಿ ನೋಟಿಸ್ ನೀಡುವುದು ಅಥವಾ ಅನರ್ಹಗೊಳಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ. ಅನರ್ಹ ಪಡಿತರ ಚೀಟಿ ಹೊಂದಿರುವವರು ಕೂಡಲೇ ತಾಲೂಕು ಕಚೇರಿಗೆ ತಂದು ಒಪ್ಪಿಸುವಂತೆ ಇನ್ನೊಂದು ಗಡುವು ನೀಡಲಾಗಿದೆ.

    ಆಗ ಕೊಟ್ರು, ಈಗ ಕಿತ್ಕೊಂಡ್ರು!: ಹಿಂದಿನ ಸರ್ಕಾರಗಳು ಬಿಪಿಎಲ್ ಪಡಿತರ ಚೀಟಿ ಮಾಡಿಸಲು ಅಭಿಯಾನವನ್ನೇ ನಡೆಸಿದ್ದವು. ಕಂಡಕಂಡವರನ್ನೆಲ್ಲ ಕರೆದು ಬಿಪಿಎಲ್ ಕಾರ್ಡ್ ಕೊಡಿಸಿ ಸಾಧನೆ ಎಂದು ಬೀಗಲಾಗಿತ್ತು. ಇಂತಿಷ್ಟು ಬಿಪಿಎಲ್ ಕಾರ್ಡು ಮಾಡಿಸಬೇಕು ಎಂದು ಅಧಿಕಾರಿಗಳಿಗೂ ಗುರಿ ನೀಡಲಾಗಿತ್ತು. ಪರಿಣಾಮ ಶ್ರೀಮಂತರಿಗೂ ಉಚಿತವಾಗಿ ಪಡಿತರ ಸಿಗುತ್ತಿದೆ. ಕೆಲವರು ಉಚಿತ ಅಕ್ಕಿ ಪಡೆದು ಅಂಗಡಿಗಳಿಗೆ ಅಥವಾ ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ. ಇನ್ನು ಕೆಲವರು ಸಂಗ್ರಹಿಸಿ ಕೊನೆಗೆ ಹುಳಹುಪ್ಪಟೆಗಳಾದಾಗ ಬಿಸಾಡಿ ವ್ಯರ್ಥ ಮಾಡುವುದೂ ಇದೆ. ಹೀಗೆ ಸರ್ಕಾರದ ಹಣ ಪೋಲಾಗುವುದನ್ನು ತಡೆಯಲು ಅರ್ಹರಲ್ಲಿ ಮಾತ್ರ ಬಿಪಿಎಲ್ ಕಾರ್ಡು ಇರಬೇಕೆಂಬ ನಿಟ್ಟಿನಲ್ಲಿ ಇಲಾಖೆ ಕಟ್ಟುನಿಟ್ಟಿನ ಪರಿಶೀಲನೆ ನಡೆಸುತ್ತಿದೆ.
    – ಅವಿನ್ ಶೆಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts