More

    ಉತ್ತರ ಪ್ರದೇಶದಲ್ಲಿ ದರೋಡೆಕೋರರ ಸೆರೆ

    ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ


    ಗ್ರಾಮಾಂತರ ಜಿಲ್ಲಾ ಪೊಲೀಸರಿಗೆ ತೀವ್ರ ಸವಾಲಾಗಿದ್ದ ದೊಡ್ಡಬಳ್ಳಾಪುರ ತಾಲೂಕು ಹೊಸಹಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಲೂಟಿ ಪ್ರಕರಣವನ್ನು ಭೇದಿಸಿ ದರೋಡೆಕೋರನನ್ನು ಸೆರೆ ಹಿಡಿಯುವಲ್ಲಿ ದೊಡ್ಡಬಳ್ಳಾಪುರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶದ ಅಲಾಪುರ ನಿವಾಸಿ ಸರ್ತಾಜ್ (38) ಹಾಗೂ ಉಜಾನಿಯ ನಿವಾಸಿ ಕಾಳಿಚರಣ್ (37) ಬಂಧಿತರು.
    ನ.25 ರಂದು ಬ್ಯಾಂಕ್‌ಗೆ ನುಗ್ಗಿದ್ದ ಖದೀಮರು ಸಿನಿಮೀಯ ಶೈಲಿಯಲ್ಲಿ 12 ಕೆಜಿ ಚಿನ್ನ, 15 ಲಕ್ಷ ರೂ.ನಗದಿನೊಂದಿಗೆ ಪರಾರಿಯಾಗಿದ್ದರು. ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಸಣ್ಣ ಸುಳಿವೂ ಸಿಗದೆ ಹೈರಾಣಾಗಿದ್ದರು. ಆರಂಭದಲ್ಲಿ ಸ್ಥಳೀಯರ ಮೇಲೆ ಅನುಮಾನಗೊಂಡಿದ್ದ ಪೊಲೀಸರು ಸರಣಿಯಾಗಿ ತನಿಖೆ ನಡೆಸಿದ್ದರೂ ಸುಳಿವು ಸಿಕ್ಕಿರಲಿಲ್ಲ ಎನ್ನಲಾಗಿದೆ.
    ಸಿಸಿ ಕ್ಯಾಮರಾ ಪರಿಶೀಲನೆ ವೇಳೆ ಯುಪಿ ನೋಂದಣಿಯ ಟ್ರಕ್ ಸಂಚಾರದ ದೃಶ್ಯ ಗಮನಿಸಿದ ಪೊಲೀಸರು ಟ್ರಕ್‌ನ ಬೆನ್ನತ್ತಿ ಹೋದಾಗ ದರೋಡೆಕೋರರ ಸುಳಿವು ಪತ್ತೆಯಾಗಿತ್ತು.
    ಗ್ಯಾಸ್ ಕಟರ್ ಬಳಕೆ: ಬ್ಯಾಂಕ್ ಲೂಟಿ ಬಗ್ಗೆ ಬಹಳ ದಿನಗಳಿಂದ ತಾಲೀಮು ನಡೆಸಿದ್ದ ಖದೀಮರು ಉತ್ತರ ಪ್ರದೇಶದಿಂದ ಪೂರ್ವನಿಯೋಜಿತರಾಗಿ ಟ್ರಕ್‌ನಲ್ಲಿ ಗ್ಯಾಸ್ ಕಟರ್, ಸಿಲಿಂಡರ್ ಹಾಗೂ ಕಳ್ಳತನಕ್ಕೆ ಬೇಕಾದ ಉಪಕರಣಗಳೊಂದಿಗೆ ಬಂದಿದ್ದರು ಎಂಬುದನ್ನು ಪೊಲೀಸ್ ಮೂಲಗಳು ತಿಳಿಸಿವೆ.


    ಉತ್ತರ ಪ್ರದೇಶಕ್ಕೆ ದಂಡಯಾತ್ರೆ: ಟ್ರಕ್ ಜಾಡು ಹಿಡಿದು ಉತ್ತರ ಪ್ರದೇಶಕ್ಕೆ ಹೊರಟ ಜಿಲ್ಲಾ ಪೊಲೀಸರು ಅಲ್ಲಿನ ಪೊಲೀಸರ ಸಹಕಾರದೊಂದಿಗೆ ಟ್ರಕ್ ನೋಂದಣಿ ಪತ್ತೆಹಚ್ಚಿ ಅದರ ವಾರಸುದಾರರನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಉತ್ತರ ಪ್ರದೇಶದ ಬದುಯೂನ್ ಜಿಲ್ಲೆಯ ಕಾಕರಾಲ ಪೊಲೀಸರ ನೆರವಿನೊಂದಿಗೆ ಅಲಾಪುರದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

    ಟ್ರಕ್ ಚಾಲಕ ಖದೀಮ: ಟ್ರಕ್ ಚಾಲಕನಾಗಿದ್ದ ಆರೋಪಿ ಸರ್ತಾಜ್ ಬ್ಯಾಂಕ್ ಮೇಲೆ ಕಣ್ಣಿಟ್ಟಿದ್ದ, ಈ ಭಾಗದಲ್ಲಿ ಜನರ ಚಲನವಲನಗಳ ಬಗ್ಗೆ ಬಹಳ ದಿನಗಳಿಂದ ನಿಗಾವಹಿಸಿದ್ದ. ಗ್ರಾಹಕನಂತೆ ಬ್ಯಾಂಕ್ ಒಳಗೆ ಹೋಗಿ ದರೋಡೆಗೆ ರೂಪುರೇಷೆ ಸಿದ್ಧಪಡಿಸಿದ್ದ. ದಿಢೀರ್ ಹಣ ಗಳಿಸುವ ಉದ್ದೇಶದಿಂದ ಸಹಚರನೊಂದಿಗೆ ಸೇರಿ ಕೃತ್ಯ ಎಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಸಂಜೆ ಬ್ಯಾಂಕ್ ವಹಿವಾಟು ಕೊನೆಯಾದ ಬಳಿಕ ಕಾದು ಕುಳಿತಿದ್ದ ದರೋಡೆಕೋರರು ತಡರಾತ್ರಿ ಪೂರ್ವನಿಯೋಜನೆಯಂತೆ ಗ್ಯಾಸ್ ಕಟರ್ ಮೂಲಕ ಬಾಗಿಲು ಮುರಿದು ದರೋಡೆ ಮಾಡಿದ್ದರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts