More

    ಸಾಗರ: ಜನ್ಮ ಜನ್ಮಾಂತರದಲ್ಲಿ ನಾವು ಮಾಡಿದ ಪಾಪಗಳಿಂದ ಹೊರಬಂದು ಪುಣ್ಯ ಸಂಪಾದಿಸಬೇಕು ಎಂದರೆ ಇಷ್ಟಲಿಂಗ ಮಹಾಪೂಜೆ ಮಾಡಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
    ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. 12ನೇ ಶತಮಾನದಲ್ಲಿ ಬಸವಣ್ಣ, ಶಿವಶರಣರು ಭಕ್ತಿಯ ಮಹತ್ವವನ್ನು ನಾಡಿಗೆ ಪರಿಚಯಿಸಿದರು. ಇಷ್ಟಲಿಂಗ ಪೂಜೆ ಎನ್ನುವುದು ಜನ್ಮ ಜನ್ಮಾಂತರದಲ್ಲಿ ನಾವು ಮಾಡಿದ ಪಾಪವನ್ನು ತೊಳೆಯುತ್ತದೆ ಎಂದರು.
    ದೇವರು, ಧರ್ಮದ ಬಗ್ಗೆ ಅಸಡ್ಡೆಯಿಂದ ನೋಡುವ ನಾಸ್ತಿಕರೂ ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ದೇವರ ಮೊರೆ ಹೋಗುತ್ತಿರುವ ಸಾಕಷ್ಟು ಉದಾಹರಣೆಗಳು ಕಣ್ಣೆದುರಿಗಿದೆ. ಭೌತಿಕ ಪ್ರಪಂಚದ ಸೆಳೆತಕ್ಕೆ ಸಿಕ್ಕಿ ದೇವರು, ಧರ್ಮ, ಗುರುಪೀಠದಿಂದ ಯುವ ಜನರು ದೂರ ಸರಿಯುತ್ತಿರುವ ಪ್ರಸ್ತುತ ದಿನಗಳಲ್ಲಿ ತಂದೆ, ತಾಯಿಗಳು ಧರ್ಮದ ಮಹತ್ವವನ್ನು ಮಕ್ಕಳಿಗೆ ಪರಿಚಯಿಸಬೇಕಿದೆ. ನಾವು ಎಲ್ಲವನ್ನೂ ಸೃಷ್ಟಿ ಮಾಡುತ್ತೇವೆ ಎನ್ನುವ ಭ್ರಮೆಯಿಂದ ಹೊರಬರಬೇಕು. ಭಗವಂತ ನೀಡಿದ ಅನ್ನ, ನೀರು, ಗಾಳಿ, ಭೂಮಿಯನ್ನು ಸೃಷ್ಟಿಸಲಾರೆವು. ಇಷ್ಟೆಲ್ಲ ನಮಗೆ ಕೊಡುಗೆ ನೀಡಿ ದಾರಿ ತೋರಿಸುತ್ತಿರುವ ದೇವರನ್ನು ಸ್ಮರಿಸಲು 24 ಗಂಟೆಯಲ್ಲಿ ಎರಡು ನಿಮಿಷ ಅವಕಾಶವಾಗುವುದಿಲ್ಲವೆಂದರೆ ಏನರ್ಥ? ದೇವರು ನಮಗೆಲ್ಲವನ್ನೂ ಕೊಟ್ಟಿದ್ದಾನೆ. ನಿಮ್ಮ ಮನಃಶಾಂತಿಗಾಗಿ ಆರಾಧನೆಯಲ್ಲಿ ತೊಡಗಿಕೊಳ್ಳಿ ಎಂದು ಸಲಹೆ ನೀಡಿದರು.
    ನಮಗೆ ಎಲ್ಲವೂ ದೊರಕಿದೆ ಎನ್ನುವ ಸಂತೋಷದಲ್ಲಿ ಮಾನಸಿಕ ನೆಮ್ಮದಿಯನ್ನೇ ಕಳೆದುಕೊಳ್ಳುತ್ತೇವೆ. ಇದಕ್ಕೆ ಕಾರಣ ದೈವತ್ವದ ಮನೋ ಸಂಕಲ್ಪದಿಂದ ದೂರವಿರುವುದು. ವೀರಶೈವ ಧರ್ಮ ದೇವರನ್ನು ಪೂಜಿಸುವ ಕ್ರಮದಲ್ಲಿ ಭಕ್ತರಿಗೆ ಅತ್ಯಂತ ಸರಳವಾದ ವಿಧಾನವನ್ನು ತಿಳಿಸಿಕೊಟ್ಟಿದೆ. ದೇವರನ್ನು ಕಾಣಲು ಬೇರೆಡೆಗೆ ಹೋಗಬೇಕಾಗಿಲ್ಲ. ಈ ದೇಹವೇ ದೇಗುಲ ಎಂದು ಶರಣರು ಹೇಳಿದ್ದಾರೆ. ಲಿಂಗ ಸ್ವರೂಪದಲ್ಲಿ ಶಿವನನ್ನು ಕಾಣಿರಿ. ನಮ್ಮ ಎದೆಯ ಮೇಲಿರುವ ಶಿವಲಿಂಗವನ್ನು ಆರಾಧಿಸುವುದಕ್ಕಿಂತ ಮಿಗಿಲಾದ ಮಹಾಪೂಜೆ ಬೇರೆ ಇಲ್ಲ ಎಂದು ಜಗದ್ಗುರುಗಳು ವಿವರಿಸಿದರು.
    ಕೋಣಂದೂರು ಮಳಲಿಮಠದ ಡಾ. ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಇಷ್ಟಲಿಂಗ ಪೂಜೆ ನೋಡುವ ಸೌಭಾಗ್ಯ ನಮ್ಮೆಲ್ಲರಿಗೂ ಇಂದು ದೊರಕಿದೆ. ಪೂಜ್ಯ ಜಗದ್ಗುರುಗಳು ಈ ಮಹಾಪೂಜೆಯನ್ನು ನೆರವೇರಿಸಿ ನಮ್ಮನ್ನು ಸಮಸ್ಯೆಗಳಿಂದ ದೂರ ಮಾಡಿದ್ದಾರೆ. ಲಿಂಗಧಾರಣೆ ಮಾಡುವುದರಿಂದ ನಾವು ಯಾವಾಗಲೂ ಸುಖ ಮತ್ತು ಸಶಕ್ತರಾಗುತ್ತೇವೆ. ದೇಶಕ್ಕೆ ಮಾನವತಾ ಧರ್ಮದ ಮಹತ್ವವನ್ನು ಸಾರಿದ್ದು ವೀರಶೈವ ಧರ್ಮ. ನಮ್ಮ ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕಾದ ಜವಾಬ್ದಾರಿ ನಮ್ಮದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts