More

    ಮಾಸ್ಕ್ ಧರಿಸಿ ಪರೀಕ್ಷೆ ಬರೆದ 13,342 ವಿದ್ಯಾರ್ಥಿಗಳು

    ಹಾವೇರಿ: ಕರೊನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್​ಡೌನ್ ಘೊಷಣೆಯಾಗಿದ್ದರಿಂದ ಮುಂದೂಡಲ್ಪಟ್ಟಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಗುರುವಾರ ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಶಾಂತಿಯುತವಾಗಿ ಜರುಗಿದವು.

    ಕರೊನಾ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ 13,342 ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಪರೀಕ್ಷೆಗೆ ಹಾಜರಾಗಿದ್ದರು. ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಜಿಲ್ಲಾಡಳಿತ ಪರೀಕ್ಷೆಗೆ ಅಗತ್ಯ ಪೂರ್ವ ಸಿದ್ಧತೆ ಕೈಗೊಂಡಿತ್ತು. ಗ್ರಾಮೀಣ ವಿದ್ಯಾರ್ಥಿಗಳಿಗೆ ಸಾರಿಗೆ, ಪ್ರತಿ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು.

    ಪರೀಕ್ಷೆಗೆ ಒಂದು ತಾಸು ಮುಂಚಿತವಾಗಿ ಬೆಳಗ್ಗೆ 9ರಿಂದಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದರು. ಕೇಂದ್ರ ಮುಖ್ಯದ್ವಾರದಲ್ಲಿಯೇ ಥರ್ಮಲ್ ಸ್ಕ್ಯಾನರ್​ನಿಂದ ಜ್ವರ ಪರೀಕ್ಷಿಸಿ ಪರೀಕ್ಷಾ ಕೇಂದ್ರದ ಒಳಗಡೆ ಬಿಡಲಾಯಿತು. ಮಾಸ್ಕ್ ಧರಿಸದೇ ಬಂದವರಿಗೆ ಕೇಂದ್ರದಲ್ಲಿಯೇ ಮಾಸ್ಕ್​ಗಳನ್ನು ವಿತರಿಸಲಾಯಿತು. ಪರೀಕ್ಷಾ ಕೇಂದ್ರದಲ್ಲಿ 3 ಅಡಿಗಳ ಡೆಸ್ಕ್​ನಲ್ಲಿ ಒಬ್ಬರಿಗೆ, ನಾಲ್ಕರಿಂದ ಐದು ಅಡಿಗಳ ಡೆಸ್ಕ್​ನಲ್ಲಿ ಇಬ್ಬರು ಕುಳಿತು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಯಿತು.

    ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದರು.

    ಪರೀಕ್ಷೆಗೆ ಹಾಜರಾದವರ ವಿವರ…: ಇಂಗ್ಲಿಷ್ ಪರೀಕ್ಷೆಗೆ ಜಿಲ್ಲೆಯ 12,995 ಹಾಗೂ ಹೊರ ಜಿಲ್ಲೆಯ 904 ವಿದ್ಯಾರ್ಥಿಗಳು ಸೇರಿ ಒಟ್ಟು 13,899 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ ಜಿಲ್ಲೆಯ 12,448 ಹಾಗೂ ಹೊರ ಜಿಲ್ಲೆಯ 894 ವಿದ್ಯಾರ್ಥಿಗಳು ಸೇರಿ ಒಟ್ಟು 13,342 ವಿದ್ಯಾರ್ಥಿಗಳು ಹಾಜರಾಗಿದ್ದರು. ಜಿಲ್ಲೆಯ 547 ಹಾಗೂ ಹೊರ ಜಿಲ್ಲೆಯ 10 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು. ಯಾವ ವಿದ್ಯಾರ್ಥಿಯೂ ಡಿಬಾರ್ ಆಗಿಲ್ಲ. ಯಾರಿಗೂ ಜ್ವರ ಸೇರಿ ಆರೋಗ್ಯದ ಸಮಸ್ಯೆ ಕಂಡುಬಂದಿಲ್ಲ ಎಂದು ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಿರಂಜನ ತಿಳಿಸಿದ್ದಾರೆ.

    ಪರಸ್ಪರ ಅಂತರ ಮಾಯ: ಪರೀಕ್ಷಾ ಕೇಂದ್ರಗಳಲ್ಲಿ ಜ್ವರ ಪರೀಕ್ಷಿಸಿ ವಿದ್ಯಾರ್ಥಿಗಳನ್ನು ಒಳ ಕಳಿಸಿದ ನಂತರ ನಂಬರ್ ಹುಡುಕುವ ವೇಳೆಯಲ್ಲಿ ವಿದ್ಯಾರ್ಥಿಗಳು ಪರಸ್ಪರ ಅಂತರ ಮರೆತು ಗುಂಪುಗೂಡಿದ್ದು ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಕಂಡುಬಂದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts