More

    13 ವರ್ಷ 150ಕ್ಕೂ ಅಧಿಕ ಬಂಗಾರ ಗೆದ್ದ ಚೆನ್ನ

    ಹೇಮನಾಥ್ ಪಡುಬಿದ್ರಿ
    ನಿರಂತರ ಐದು ವರ್ಷ ಸರಣಿಶ್ರೇಷ್ಠ ಗೌರವ ಪಡೆದು, 13 ವರ್ಷದಲ್ಲಿ 150ಕ್ಕೂ ಅಧಿಕ ಚಿನ್ನ ಗೆಲುವಿನ ಮಹತ್ತರ ಸಾಧನೆ ಮಾಡಿದ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ರ ಕೊಂಡಾಟದ ಕೋಣ ಚೆನ್ನ ಕಂಬಳ ಕ್ಷೇತ್ರದಲ್ಲಿ ಮಿಂಚಿನ ಓಟಗಾರ. ಕಂಬಳದಲ್ಲಿ ಚಿನ್ನದ ಸಾಧನೆ ಮಾಡುತ್ತಿರುವ ಚೆನ್ನನಿಗೆ 19 ವರ್ಷವಾದರೂ ಓಟದಲ್ಲಿ ಈಗಲೂ ಉನ್ನತ ಸಾಧನೆ. 4ರ ಹರೆಯದಲ್ಲಿ ನೇರವಾಗಿ ಕಂಬಳ ಸ್ಪರ್ಧೆಗೆ ಪದಾರ್ಪಣೆ ಮಾಡಿ ಸೆಮಿಫೈನಲ್ ಹಂತಕ್ಕೇರುವ ಮೂಲಕ ಎಲ್ಲರನ್ನು ದಂಗುಬಡಿಸಿದ್ದ ಚೆನ್ನ. 75 ಬಾರಿ ತುರುಸಿನ ಫೈನಲ್ ಸ್ಪರ್ಧೆಯಲ್ಲಂತೂ ಕೊನೇ ಹಂತದಲ್ಲಿ ವೀಡಿಯೋ ಫಿನಿಶಿಂಗ್ ತೀರ್ಪಿನಲ್ಲ್ಲಿ ಗೆಲುವು ಸಾಧಿಸಿದೆ. ತನ್ನೊಂದಿಗೆ ಜತೆಯಾದ ಯಾವುದೇ ಕೋಣವಿದ್ದರೂ, ಗೆಲುವೊಂದೇ ಗುರಿ ಎಂದು ನಿರಂತರ ಸಾಧನೆ ಹಾದಿಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ ಚೆನ್ನ.
    2019ರ ಅಕ್ಟೋಬರ್‌ನಲ್ಲಿ ನಾರಾವಿ ಬೊಟ್ಟು ಜವನೆರ್, ಶ್ರೀ ಸೂರ್ಯ ಫ್ರೆಂಡ್ಸ್ ಸಂಘಟನೆ ಚಿನ್ನದ ವೀರ ಚೆನ್ನನನ್ನು ಸನ್ಮಾನಿಸಿತ್ತು. ಫೆಬ್ರವರಿ 1ರಂದು ಸಾಣೂರು ದೇಂದಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಬೃಹತ್ ಗೋ ಸಮ್ಮೇಳನದಲ್ಲಿ ಕಂಬಳ ಮೆಡಲ್ ಸರದಾರ ಚೆನ್ನನಿಗೆ ಮತ್ತೊಮ್ಮೆ ಸನ್ಮಾನ ನಡೆಯಲಿದೆ.

    ನಾಲ್ವರು ಯಜಮಾನರು, ಹಲವು ಓಟಗಾರರು
    ಬೆಳುವಾಯಿ ಪೈರಿನಿಂದ ಕಾಂತಾವರ ಗ್ರಾಮದ ಬೈದೊಟ್ಟು ಪ್ರಕಾಶ್ ಪೂಜಾರಿ ಮನೆಗೆ ತಂದಿದ್ದ ಎರಡು ವರ್ಷದ ಚೆನ್ನ ಬಳಿಕ ಕಡಂದಲೆ ಕಾಳು ಪಾಣಾರ, ಬಾರ್ಕೂರು ಶಾಂತಾರಾಮ ಶೆಟ್ಟಿ, ಪ್ರಸ್ತುತ 13 ವರ್ಷಗಳಿಂದ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿಯವರ ಪ್ರೀತಿಯ ಕೋಣವಾಗಿ ಬೆಳೆಯುತ್ತಿದೆ. ತನ್ನೊಂದಿಗೆ ಜೋಡಿಯಾಗುವ ಕೋಣದ ಜತೆ ನಿರಂತರ ಚಿನ್ನದ ಬೇಟೆ ಮುಂದುವರಿಸಿದೆ. 2004ರಿಂದ 2009ರವರೆಗೆ ನೇಗಿಲು ಕಿರಿಯ, ಹಿರಿಯ ಹಾಗೂ ಹಗ್ಗ ಹಿರಿಯ ವಿಭಾಗಗಳಲ್ಲಿ ಚಿನ್ನದ ಬೇಟೆ ಮೂಲಕ ಸತತ ಐದು ವರ್ಷ ತನ್ನ ಯಜಮಾನರಿಗೆ ಸರಣಿಶ್ರೇಷ್ಠ ಗೌರವ ತಂದುಕೊಡುವಲ್ಲಿ ಯಶಸ್ವಿಯಾಗಿದೆ. ನಕ್ರೆ ಜಯಕರ ಮಡಿವಾಳ, ಅಳದಂಗಡಿ ರವಿ ಕುಮಾರ್, ಮರೋಡಿ ಶ್ರೀಧರ್, ಮಾರ್ನಾಡ್ ರಾಜೇಶ್, ಹಕ್ಕೇರಿ ಸುರೇಶ್ ಶೆಟ್ಟಿ, ಅಳದಂಗಡಿ ಸತೀಶ್ ದೇವಾಡಿಗ, ಪಣಪೀಲು ಸಾಧು ಶೆಟ್ಟಿ ಸಹಿತ ದೀರ್ಘಕಾಲ ಪಲಿಮಾರು ದೇವೇಂದ್ರ ಕೋಟ್ಯಾನ್ ಚೆನ್ನ ಜೋಡಿ ಕೋಣಗಳನ್ನು ಓಡಿಸಿ ಓಟದ ಚಾಕಚಕ್ಯತೆ ಪ್ರದರ್ಶಿಸಿದ್ದಾರೆ.

    ಕಾಡಬೆಟ್ಟು ರಾಜ, ಬೋಳಂತೂರು ಕಾಟಿ, ಪಯ್ಯಟ್ಟು ನಾಗರಾಜ, ಪ್ರಸ್ತುತ ಚೆನ್ನ ದೀರ್ಘಕಾಲೀನ ಓಟದ ಮೂಲಕ ಹೆಸರು ಪಡೆದ ಕಂಬಳ ಕೋಣಗಳು. ಉಳುಮೆ ಹಾಗೂ ಅಚ್ಚುಕಟ್ಟಿನ ಸಾಕಣೆೆಯಿಂದ ಕೋಣಗಳು ದೈಹಿಕ ಕ್ಷಮತೆ ಕಾಯ್ದುಕೊಳ್ಳಬಹುದು ಎಂಬುದಕ್ಕೆ ಚೆನ್ನನೇ ಸಾಕ್ಷಿ. 2006ರ ನವೆಂಬರ್‌ನಿಂದ 2007ರ ಜನವರಿವರೆಗೆ 10 ಕಂಬಳ ಕೂಟಗಳಲ್ಲಿ ಎಂಟು ಮೆಡಲ್ ಪಡೆದು ನಮ್ಮ ಹೆಸರನ್ನು ಉತ್ತುಂಗಕ್ಕೆ ಏರಿಸಿದ ಕೀರ್ತಿ ಚೆನ್ನನಿಗೆ ಸಲ್ಲುತ್ತದೆ.
    ಸೀತಾರಾಮ ಶೆಟ್ಟಿ, ಮಹಾಕಾಳಿಬೆಟ್ಟು

    ಸುಮಾರು 150 ಚಿನ್ನದ ಪದಕ ಗಳಿಸುವ ಮೂಲಕ ಯಜಮಾನರಿಗೆ ಗೌರವ ಒದಗಿಸಿಕೊಟ್ಟಿರುವ ಚೆನ್ನ, ಕಂಬಳ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಕ್ರೀಡಾರತ್ನಕ್ಕೆ ಪುರಸ್ಕಾರ ಲಭಿಸಲು ಕಾರಣನಾಗಿದ್ದಾನೆ. ಅಡ್ವೆ ಕಂಬಳದಲ್ಲಿ ಹಗ್ಗ ಹಿರಿಯ ವಿಭಾಗದಲ್ಲಿ ಚೆನ್ನನ ಕೊನೇ ಓಟವಾಗಿತ್ತು. ಮುಂದಿನ ದಿನಗಳಲ್ಲಿ ದೈಹಿಕ ಕ್ಷಮತೆ ಇರುವವರೆಗೆ ನೇಗಿಲು ವಿಭಾಗದಲ್ಲಿ ಸ್ಪರ್ಧೆಗಿಳಿಯಲಿದ್ದಾನೆ.
    ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ, ಚೆನ್ನನ ಯಜಮಾನ

    ಯಾರ ಹೆಸರಿನಲ್ಲಿ ಓಡಿಸಿದರೂ ಅವರಿಗೆ ಒಂದು ಚಿನ್ನ ಗೆದ್ದು ಕೊಡುವುದನ್ನು ಇಂದಿಗೂ ಮರೆಯದ ಚೆನ್ನ, ಅಬಾಲವೃದ್ಧರಾದಿಯಾಗಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾನೆ. ಮೂಕಪ್ರಾಣಿಯಾದರೂ, ಮಾನವೀಯತೆ ಮೈಗೂಡಿಸಿಕೊಂಡಿರುವ ಸಾಧು ಸ್ವಭಾವದ ಚೆನ್ನ ಕಂಬಳದ ದಿನ ಹಟ್ಟಿಯಿಂದ ಹೊರಬಂದಂತೆ ಮನೆ ತುಳಸೀ ಕಟ್ಟೆಗೆ ಪ್ರದಕ್ಷಿಣೆ ಬಂದು ತಾನು ಸಾಗುವ ವಾಹನವನ್ನೇರಿ ಮಲಗಿ ಬಿಡುವ ಬುದ್ಧಿಮತ್ತೆಗೆ ಸಲಾಂ ಹೊಡೆಯಲೇಬೇಕು.
    ವಿಜಯಕುಮಾರ್ ಕಂಗಿನಮನೆ, ಕಂಬಳ ತೀರ್ಪುಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts