More

    ಸ್ವ ಇಚ್ಛೆಯಿಂದ ಸ್ಮಶಾನಕ್ಕೆ ಜಾಗ ನೀಡಲು ಮುಂದಾಗಿ – ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

    ಬೆಳಗಾವಿ: ಗ್ರಾಮೀಣ ಭಾಗದಲ್ಲಿ ಸ್ಮಶಾನಕ್ಕೆ ಜಾಗ ನೀಡಲು ಖಾಸಗಿ ಭೂ ಮಾಲೀಕರಿಗೂ ಅವಕಾಶ ನೀಡಲಾಗಿದ್ದು, ಸ್ವಇಚ್ಛೆಯಿಂದ ಜಾಗ ನೀಡಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಮಶಾನ ಭೂಮಿ ಒದಗಿಸಲು ಸರ್ಕಾರಿ ಜಮೀನು ಗುರುತಿಸಿ ಪ್ರಸ್ತಾವನೆ ಸಲ್ಲಿಸುವಂತೆ ಎಲ್ಲ ತಹಸೀಲ್ದಾರ್‌ಗಳಿಗೆ ನಿರ್ದೇಶನ ನೀಡಲಾಗಿದೆ. ಪ್ರಸ್ತಾವನೆ ಸಲ್ಲಿಕೆಯಾದ ತಕ್ಷಣ ಜಾಗ ಮಂಜೂರಾತಿ ಮಾಡಲಾಗುವುದು ಎಂದರು.

    ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಸಮರ್ಪಕ ತನಿಖೆಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವ ದೃಷ್ಟಿಯಿಂದ ಮುಂದಿನ ದೌರ್ಜನ್ಯ ತಡೆ ಸಭೆಗಳಿಗೆ ಡಿಎಸ್‌ಪಿಗಳು ಕೂಡ ಕಡ್ಡಾಯವಾಗಿ ಹಾಜರಾಗಬೇಕು. ನಿಪ್ಪಾಣಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಖರೀದಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ನಗರದ ಆರ್‌ಪಿಡಿ ವೃತ್ತದಲ್ಲಿ ವೀರ ಮದಕರಿ ನಾಯಕ ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ನಿಯಮಾವಳಿ ಪ್ರಕಾರ ಪ್ರಕ್ರಿಯೆ ಆರಂಭಿಸಬೇಕು ಎಂದು ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ನ್ಯಾಯಾಲಯದಲ್ಲಿ ದೌರ್ಜನ್ಯ ಪ್ರಕರಣಗಳ ಸಮರ್ಪಕ ನಿರ್ವಹಣೆಗೆ ಒಬ್ಬ ಅಧಿಕಾರಿಯನ್ನು ಪ್ರತ್ಯೇಕವಾಗಿ ನಿಯೋಜಿಸಲಾಗಿದೆ. ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ನಿಯಮಾವಳಿ ಪ್ರಕಾರ ತನಿಖೆ ಕೈಗೊಂಡು ದೋಷಾರೋಪಣೆ ಪಟ್ಟಿ ಸಲ್ಲಿಸಲಾಗುತ್ತಿದೆ. ಯಾವುದೇ ಪ್ರಕರಣಗಳಲ್ಲಿ ಬಿ-ರಿಪೋರ್ಟ್ ಹಾಕುವುದು ಸುಲಭವಲ್ಲ. ಹಿರಿಯ ಅಧಿಕಾರಿಗಳು ಕೂಡ ಪರಿಶೀಲನೆ ನಡೆಸುವುದರಿಂದ ವಿನಾಕಾರಣ ಬಿ-ರಿಪೋರ್ಟ್ ಹಾಕಲಾಗುವುದಿಲ್ಲ ಎಂದರು. ಜಿಪಂ ಸಿಇಒ ಎಚ್.ವಿ.ದರ್ಶನ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್., ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಡಾ.ಉಮಾ ಸಾಲಿಗೌಡರ, ಡಿಸಿಪಿ ಡಾ.ವಿಕ್ರಂ ಅಮಟೆ, ಸಮಿತಿ ಸದಸ್ಯರಾದ ಅಶೋಕ ಅಸೋದೆ, ಸುರೇಶ ತಳವಾರ ಇದ್ದರು.

    ಅಧಿಕಾರಿಗಳಿಗೆ ನೋಟಿಸ್: ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಸಮರ್ಪಕ ಬಳಕೆಗೆ ಅನುಕೂಲವಾಗುವಂತೆ ಪರ್ಯಾಯ ಯೋಜನೆ ರೂಪಿಸಬೇಕು. ಅಂತಿಮವಾಗಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬೃಹತ್ ನೀರಾವರಿ ಇಲಾಖೆ, ಹೆಸ್ಕಾಂ ಹಾಗೂ ಬಿಮ್ಸ್ ಸೇರಿ ಇತರ ಇಲಾಖೆಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts