More

    11 ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದು – ಡಾ. ಎಸ್.ಬಿ. ಬೊಮ್ಮನಹಳ್ಳಿ

    ಬೆಳಗಾವಿ: ಪಡಿತರ ಧಾನ್ಯ ವಿತರಣೆಯಲ್ಲಿ ತೂಕದ ವ್ಯತ್ಯಾಸ ಹಾಗೂ ಹಣ ಪಡೆದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 11 ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದುಗೊಳಿಸಲಾಗಿದೆ. ಅಲ್ಲದೆ, 35 ನ್ಯಾಯಬೆಲೆ ಅಂಗಡಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

    ಈಗಾಗಲೇ ನೀಡಿರುವ 2020ರ ಮೇ ತಿಂಗಳ ಪಡಿತರ ವಿತರಣೆಯಲ್ಲಿ ತೂಕದ ವ್ಯತ್ಯಾಸ ಹಾಗೂ ಹಣ ಪಡೆದು ಪಡಿತರೇತರ ವಸ್ತು ಮಾರಾಟ ಮಾಡಿರುವುದು ಕಂಡುಬಂದಿದ್ದು, ಅಂತಹ ಅಂಗಡಿಗಳ ಪರವಾನಗಿ ರದ್ದು ಮಾಡುವುದರ ಜತೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದಿದ್ದಾರೆ.

    ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಮೂಲಕ ಮೇ 1ರಿಂದ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ನೀಡಿತ್ತು. ಅಕ್ಕಿಯೊಂದಿಗೆ ಕಡ್ಡಾಯವಾಗಿ ತೊಗರಿ ಬೇಳೆ ಮಾತ್ರ ವಿತರಿಸಬೇಕು. ಪಡಿತರ ಪಡೆಯಲು ಬರುವ ಸದಸ್ಯರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಒಟಿಪಿ ಮೂಲಕ ಪಡಿತರ ವಿತರಿಸುತ್ತಿರುವುದರಿಂದ ಚೀಟಿದಾರರು ನೋಂದಾಯಿತ ಮೊಬೈಲ್ ಸಂಖ್ಯೆ ನೀಡಬೇಕು. ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಿಸಿ ತಿಳಿಸಿದ್ದಾರೆ.

    ಅಂತ್ಯೋದಯಕ್ಕೆ ತೊಗರಿ ಬೇಳೆ ವಿತರಣೆ: ಆದ್ಯತಾ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಿದ ಪ್ರತಿ ಕುಟುಂಬಕ್ಕೆ ಸರ್ಕಾರವು 10 ಕೆ.ಜಿ. ಅಕ್ಕಿ ಉಚಿತ ನೀಡುತ್ತಿದ್ದು, 2019ರ ಮಾರ್ಚ್ ತಿಂಗಳಿನಿಂದ ಈವರೆಗೆ ಅರ್ಜಿ ಸಲ್ಲಿಸಿದವರು ತಮ್ಮ ಅರ್ಜಿಯ ಜತೆಗೆ ಮೊಬೈಲ್ ಮತ್ತು ಆಧಾರ್ ಕಾರ್ಡ್‌ನೊಂದಿಗೆ ನ್ಯಾಯಬೆಲೆ ಅಂಗಡಿಗೆ ತೆರಳಿ ಒಟಿಪಿ ನೀಡಿ 10 ಕೆ.ಜಿ. ಅಕ್ಕಿ ಉಚಿತವಾಗಿ ಪಡೆಯಬಹುದು.

    ಅಂತ್ಯೋದಯ ಪಡಿತರ ಚೀಟಿಗಳು ಹೊಂದಿರುವ ಪ್ರತಿ ಸದಸ್ಯರಿಗೆ ಉಚಿತವಾಗಿ 10 ಕೆ.ಜಿ. ಅಕ್ಕಿ ಹಾಗೂ ಪ್ರತಿ ಪಡಿತರ ಚೀಟಿಗೆ 1 ಕೆಜಿ ತೊಗರಿ ಬೇಳೆ ನೀಡಲಾಗುವುದು. ಎಪಿಎಲ್ ಪಡಿತರ ಚೀಟಿಗೆ ಸಲ್ಲಿಸಿದ ಅರ್ಜಿದಾರರಿಗೆ 15 ರೂ.ನಂತೆ ಏಕ ಸದಸ್ಯರ ಪಡಿತರ ಚೀಟಿಗೆ 5 ಕೆ.ಜಿ. ಅಕ್ಕಿ ಇಬ್ಬರು ಮತ್ತು ಇಬ್ಬರಿಗಿಂತ ಹೆಚ್ಚು ಸದಸ್ಯರ ಪಡಿತರ ಚೀಟಿಗಳಿಗೆ 15 ರೂ.ನಂತೆ 10 ಕೆ.ಜಿ. ಅಕ್ಕಿ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts