More

  ಬಾಹುಬಲಿ ಮೂರ್ತಿಯ 1044ನೇ ಪ್ರತಿಷ್ಠಾಪನಾ ಮಹೋತ್ಸವ

  ಶ್ರವಣಬೆಳಗೊಳ : ಇಲ್ಲಿನ ವಿಂಧ್ಯಗಿರಿ ದೊಡ್ಡಬೆಟ್ಟದಲ್ಲಿರುವ ವಿಶ್ವ ವಿಖ್ಯಾತ ಭಗವಾನ್ ಬಾಹುಬಲಿ ಮೂರ್ತಿಯ 1044ನೇ ಪ್ರತಿಷ್ಠಾಪನಾ ಮಹೋತ್ಸವದ ಸಕಲ ಧಾರ್ಮಿಕ ವಿಧಿ ವಿಧಾನಗಳು ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಶನಿವಾರ ವೈಭವದಿಂದ ನೆರವೇರಿತು.

  ಕ್ರಿ.ಶ.981ರ ಮಾರ್ಚ್ 13ರ ಚೈತ್ರ ಶುದ್ಧ ಪಂಚಮಿ ತಿಥಿಯಂದು ವಿಂಧ್ಯಗಿರಿಯ ಪರ್ವತದ ಮೇಲೆ ಬಾಹುಬಲಿಯ 58.8 ಅಡಿ ಎತ್ತರದ ಏಕಶಿಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಪ್ರತಿಷ್ಠಾಪನಾ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದ್ದು, ಶನಿವಾರ ಬಾಹುಬಲಿ ಸ್ವಾಮಿಯ ಸನ್ನಿಧಿಯಲ್ಲಿ ರಜತದ ನವ ಕಳಸಗಳನ್ನು ಮತ್ತು ಶಾಂತಿಧಾರಾ ಕಲಶಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಮಹಾಮಂತ್ರಗಳೊಂದಿಗೆ ಏಕ ಕಾಲದಲ್ಲಿ ಚಂಡೆವಾಧ್ಯ, ಮಂಗಳವಾದ್ಯ, ಜಯಗಂಟೆ ಬಾರಿಸುತ್ತಿದ್ದಂತೆ ಬಾಹುಬಲಿ ಪಾದಗಳಿಗೆ ಜಲ, ಎಳನೀರು, ಕ್ಷೀರ, ಅರಿಷಿಣ, ಚಂದನ, ಅಷ್ಟಗಂಧಗಳಿಂದ ಅಭಿಷೇಕ ನೆರವೇರಿಸಲಾಯಿತು.

  ನೆರೆದಿದ್ದ ಭಕ್ತರು ಜಯಘೋಷ ಮೊಳಗಿಸುತ್ತಿದ್ದಂತೆ ಅನೇಕ ಬಗೆಯ ಪುಷ್ಪಗಳಿಂದ, ರಜತ ಮತ್ತು ಸ್ವರ್ಣ ಪುಷ್ಪಗಳಿಂದ ಪುಷ್ಪವೃಷ್ಠಿ ಮಾಡಲಾಯಿತು. ಮಹಾಶಾಂತಿಧಾರಾದೊಂದಿಗೆ ಪೂರ್ಣಾರ್ಘ್ಯ ನೆರವೇರಿಸಲಾಯಿತು. ಸ್ವಾಮಿಯ ಸನ್ನಿಧಿಗೆ ವಿವಿಧ ಬಗೆಯ ಫಲಗಳನ್ನು ಸಮರ್ಪಿಸಲಾಯಿತು. ಶ್ರಾವಕಿಯರು 1008 ಅರ್ಘ್ಯಗಳನ್ನು ಸ್ವಾಮಿಗೆ ಅರ್ಪಿಸಿ ಭಕ್ತಿ ಸಮರ್ಪಿಸಿದರು. ನಂದಕುಮಾರ್ ಶಾಸ್ತ್ರಿ, ಪ್ರತಿಷ್ಠಾಚಾರ್ಯ ಜಿನೇಶ್ ಕುಮಾರ್, ವಿಮಲ್ ಕುಮಾರ್ ಧಾರ್ಮಿಕ ಕಾರ್ಯದ ನೇತೃತ್ವ ವಹಿಸಿದ್ದರು.

  ಆಚಾರ್ಯ ಅಂತರ್ಮನ ಪ್ರಸನ್ನಸಾಗರ ಮಹಾರಾಜರು, ಸಂಘಸ್ಥ ತ್ಯಾಗಿಗಳು ಮತ್ತು ಮಾತಾಜಿ ಪಾವನ ಸಾನ್ನಿಧ್ಯ ವಹಿಸಿದ್ದರು. ಪ್ರತಿಷ್ಠಾಪನಾ ಮಹೋತ್ಸವದ ನಿಮಿತ್ತ ಬೆಟ್ಟದ ಮೆಟ್ಟಿಲುಗಳಲ್ಲಿ ಹಸಿರು ತೋರಣ, ಬಾಳೆದಿಂಡು, ಕಬ್ಬಿನಜಲ್ಲೆ, ಧರ್ಮಧ್ವಜಗಳಿಂದ ಅಲಂಕರಿಸಿ, ಬಾಹುಬಲಿಯ ಸುತ್ತಾಲಯದಲ್ಲಿ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಪರಂಪರೆಯಂತೆ ಪೀಠದಲ್ಲಿ ಆಸೀನರಾಗಿದ್ದ ಶ್ರೀಗಳಿಗೆ ಪೂಜೆ ಸಲ್ಲಿಸಲಾಯಿತು. ಕ್ಷೇತ್ರದ ಅಧಿದೇವತೆ ಕೂಷ್ಮಾಂಡಿನಿ ದೇವಿ, ಕ್ಷೇತ್ರಪಾಲ ಬ್ರಹ್ಮದೇವರಿಗೆ ಮತ್ತು ದಿಕ್ಪಾಲಕರಿಗೆ ಪೂಜೆ ಸಲ್ಲಿಸಲಾಯಿತು. ಶೀಗಳು ಭಕ್ತರಿಗೆ ಮಂತ್ರಾಕ್ಷತೆ ವಿತರಣೆ ಮಾಡಿದರು. ಭಕ್ತರಿಗೆ ಗಂಧೋದಕ ಮತ್ತು ಲಡ್ಡು ವಿತರಿಸಲಾಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts