More

    ಮತ ಚಲಾಯಿಸದೆ ಜೀವ ಬಿಟ್ಟ ಶತ ಹಿರಿಯರು

    ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಲು ಸಾಧ್ಯವಾಗದ 85 ವರ್ಷ ದಾಟಿದವರಿಗೆ ಮನೆಯಿಂದಲೇ ಮತ ಹಾಕಲು ಅವಕಾಶ ಮಾಡಿಕೊಡಲಾಗಿತ್ತು. ನಗರದಲ್ಲಿ ಈ ವಿಶೇಷ ಅವಕಾಶ ಪಡೆದಿದ್ದವರ ಪೈಕಿ 100 ಮಂದಿ ಹಿರಿಯರು ಹೆಸರು ನೋಂದಾಯಿಸಿದ್ದರೂ, ಮತದಾನ ಮಾಡುವ ಮುನ್ನವೇ ಇಹಲೋಕ ತ್ಯಜಿಸಿರುವುದು ಇದೀಗ ಬಹಿರಂಗವಾಗಿದೆ.

    ಕಳೆದ ವರ್ಷ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ 80 ವರ್ಷ ದಾಟಿದ ಹಿರಿಯರಿಗೆ ಮನೆಯಿಂದ ಮತ ಹಾಕಲು ಅವಕಾಶ ಕಲ್ಪಿಸಲಾಗಿತ್ತು. ಇದಕ್ಕೆ ಹಿರಿಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಆದರೆ, ಈ ಬಾರಿ ಹಿರಿಯರ ವಯಸ್ಸನ್ನು 85ಕ್ಕೆ ಏರಿಸಿದ ಕಾರಣ ಹಲವು ಮಂದಿ ಮನೆಯಿಂದ ಮತ ಹಾಕುವ ಅವಕಾಶದಿಂದ ವಂಚಿತರಾಗಿದ್ದಾರೆ. 85+ ಹಿರಿಯ ಜತೆಗೆ ಅಂಗವಿಕಲರಿಗೂ ಈ ಅವಕಾಶ ನೀಡಲಾಗಿತ್ತು. ನಗರದಲ್ಲಿರುವ 28 ವಿಧಾನಸಭಾ ಕ್ಷೇತ್ರಗಳು ಐದು ಲೋಕಸಭಾ ಕ್ಷೇತ್ರಗಳಲ್ಲಿ ಹರಡಿಕೊಂಡಿದ್ದು, ಈ ಕ್ಷೇತ್ರಗಳನ್ನು ಬಿಬಿಎಂಪಿ ಲೆಕ್ಕಾಚಾರದಲ್ಲಿ 4 ಜಿಲ್ಲೆಗಳನ್ನಾಗಿ ವಿಂಗಡಿಸಲಾಗಿದೆ. ಮಹಾನಗರದಲ್ಲಿ 1.25 ಲಕ್ಷಕ್ಕಿಂತಲೂ ಹೆಚ್ಚು 85+ ಹಿರಿಯರಿದ್ದರೂ, ಅಂಚೆ ಮತದಾನಕ್ಕಾಗಿ ನೋಂದಣಿ ಮಾಡಿಕೊಂಡವರು 7,556 ಮಂದಿ. ಅಂಗವಿಕಲರಲ್ಲಿ 302 ಮಂದಿ ಮಾತ್ರ ಹೆಸರು ನೋಂದಾಯಿಸಿಕೊಂಡಿದ್ದು, ಈ ಎರಡೂ ವಿಭಾಗದಿಂದ ಒಟ್ಟು 7,858 ಮಂದಿ ಮನೆಯಿಂದ ಮತ ಹಾಕಲು ಅಕವಾಶ ಪಡೆದಿದ್ದರು. ಏ.13ರಿಂದ 18ರವರೆಗೆ ನಡೆದ ಮತದಾನದಲ್ಲಿ ಶೇ. 94.71 ವೋಟಿಂಗ್ ಆಗಿತ್ತು.

    ನಗರ ಜಿಲ್ಲೆಯಲ್ಲೇ ಹೆಚ್ಚು ಮಂದಿ ಮೃತ:

    ಮಹಾನಗರದಲ್ಲಿ ನಡೆದ ಅಂಚೆ ಮತದಾನಕ್ಕಾಗಿ ಚುನಾವಣಾ ಸಿಬ್ಬಂದಿ ಹಿರಿಯರ ಮನೆಗಳಿಗೆ ತೆರಳಿದ ವೇಳೆ 100 ಮಂದಿ 85+ ಮತದಾರರು ಮೃತರಾಗಿರುವುದು ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅತೀ ಹೆಚ್ಚು 31 ಹಿರಿಯರು ಮೃತಪಟ್ಟಿದ್ದಾರೆ. ಉತ್ತರ ಜಿಲ್ಲೆಯಲ್ಲಿ 28, ದಕ್ಷಿಣ ಜಿಲ್ಲೆಯಲ್ಲಿ 18 ಹಾಗೂ ಕೇಂದ್ರ ಜಿಲ್ಲೆಯಲ್ಲಿ 23 ಮಂದಿ ಮತ ಹಾಕುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ.

    ವಿಧಾನಸಭಾ ಕ್ಷೇತ್ರವಾರು ಪೈಕಿ ಮಹದೇವಪುರ, ಮಲ್ಲೇಶ್ವರ ಹಾಗೂ ರಾಜರಾಜೇಶ್ವರಿನಗರ ಕ್ಷೇತ್ರಗಳಲ್ಲಿ ತಲಾ 8 ಹಿರಿಯರು ಮತ ಚಲಾಯಿಸದೆ ಮೃತಪಟ್ಟಿದ್ದಾರೆ. ಹೆಬ್ಬಾಳ, ಬ್ಯಾಟರಾಯನಪುರ ಹಾಗೂ ಯಶವಂತಪುರ ಕ್ಷೇತ್ರಗಳಲ್ಲಿ ತಲಾ 6 ಹಿರಿಯರು ಮೃತರಾಗಿರುವುದನ್ನು ನಗರ ಜಿಲ್ಲಾ ಚುನಾವಣಾಧಿಕಾರಿಗಳು ದೃಢಪಡಿಸಿದ್ದಾರೆ.

    ಹಿರಿಯರು/ಅಂಗವಿಕಲರ ಅಂಚೆ ಮತದಾನದ ವಿವರ:
    ಜಿಲ್ಲೆಯ ಹೆಸರು ನೋಂದಣಿ ಮತದಾನ ಮೃತರು
    ಬೆಂ. ಉತ್ತರ ಜಿಲ್ಲೆ 1,803 1,679 28
    ಬೆಂ. ದಕ್ಷಿಣ ಜಿಲ್ಲೆ 2,224 2,130 18
    ಬೆಂ. ಕೇಂದ್ರ ಜಿಲ್ಲೆ 1,787 1,689 23
    ಬೆಂ. ನಗರ ಜಿಲ್ಲೆ 2,044 1,944 31
    ಬಿಬಿಎಂಪಿ ಸಮಗ್ರ 7,858 7,442 100

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts