More

    10 ದಿನ ಗಂಗಾವತಿ, ಶ್ರೀರಾಮನಗರ ಲಾಕ್‌ಡೌನ್

    ಅಗತ್ಯ ವಸ್ತುಗಳು ಮಾತ್ರ ಲಭ್ಯ > ಹೆಚ್ಚುವರಿ 21 ವೆಂಟಿಲೇಟರ್ ಖರೀದಿ

    ಕೊಪ್ಪಳ: ಗಂಗಾವತಿ ನಗರ ಹಾಗೂ ಶ್ರೀ ರಾಮನಗರವನ್ನು ಜು.21ರ ರಾತ್ರಿ 8 ಗಂಟೆಯಿಂದ 10 ದಿನಗಳವರೆಗೆ ಲಾಕ್‌ಡೌನ್ ಮಾಡಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

    ನಗರ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಕರೊನಾ ಹೆಚ್ಚುತ್ತಿದೆ. ಅದರಲ್ಲೂ ಗಂಗಾವತಿ, ಶ್ರೀರಾಮನಗರ ಕರೊನಾ ಹಾಟ್‌ಸ್ಪಾಟ್‌ಗಳಾಗಿವೆ. ಸೋಂಕು ಹರಡುವಿಕೆ ತಡೆವ ದೃಷ್ಟಿಯಿಂದ ಜು.21ರ ರಾತ್ರಿಯಿಂದಲೇ ಎರಡು ನಗರಗಳನ್ನು 10 ದಿನಗಳವರೆಗೆ ಲಾಕ್‌ಡೌನ್ ಮಾಡಲು ನಿರ್ಧರಿಸಲಾಗಿದೆ. ಇನ್ನು ಕೊಪ್ಪಳ ನಗರದ ಮೇದಾರ ಓಣಿ ಮತ್ತು ಭಾಗ್ಯನಗರದಲ್ಲೂ ಕರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಇನ್ನೊಮ್ಮೆ ಪರಿಶೀಲಿಸಿ ಲಾಕ್‌ಡೌನ್ ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳು ನಿರ್ಣಯ ಕೈಗೊಳ್ಳಲಿದ್ದಾರೆ. ಲಾಕ್‌ಡೌನ್ ವೇಳೆ ತುರ್ತು ಸೇವೆಗಳು, ಔಷಧ ಅಂಗಡಿ, ಹಾಲು, ಆಹಾರ ಪದಾರ್ಥ ಸೇರಿ ಅಗತ್ಯ ಸೇವೆಗಳು ಲಭ್ಯವಿರಲಿವೆ. ಮದ್ಯ ಸೇರಿ ಇತರ ಎಲ್ಲ ಬಂದ್ ಇರಲಿದೆ. ಈ ಬಗ್ಗೆ ಜಿಲ್ಲಾಡಳಿತ ಮಾರ್ಗಸೂಚಿ ಪ್ರಕಟಿಸಲಿದೆ ಎಂದರು.

    ಸದ್ಯ 43 ವೆಂಟಿಲೇಟರ್‌ಗಳಿದ್ದು, ಹೆಚ್ಚುವರಿ 21 ವೆಂಟಿಲೇಟರ್‌ಗಳನ್ನು 99 ಲಕ್ಷ ರೂ.ನಲ್ಲಿ ಖರೀದಿಸಲಾಗುವುದು. ಜತೆಗೆ 10 ಸಾವಿರ ಆಂಟಿಜೆನ್ಸ್ ಕಿಟ್ ಖರೀದಿಸಲಾಗುವುದು. ಇದರಿಂದ ತ್ವರಿತವಾಗಿ ಕರೊನಾ ಪ್ರಕರಣಗಳನ್ನು ಪತ್ತೆಹಚ್ಚಬಹುದು. 55 ಲಕ್ಷ ರೂ.ನಲ್ಲಿ 1343 ಆಶಾ ಕಾರ್ಯಕರ್ತರಿಗೆ ಹೆಲ್ತ್ ಕಿಟ್ ಖರೀದಿಸಲಾಗುವುದು. ತಾಲೂಕುವಾರು ಐಸಿಯು ಬೆಡ್ ಮಾನಿಟರ್‌ಗಳಿಗೆ 76ಲಕ್ಷ ರೂ.ವೆಚ್ಚ ಮಾಡಲಾಗುತ್ತಿದೆ. ಲ್ಯಾಬ್ ಟೆಕ್ಷಿಷಿಯನ್ಸ್‌ಗಳ ಕೊರತೆ ನೀಗಿಸಲು ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುವುದು. ಮೊಬೈಲ್ ಪರೀಕ್ಷಾ ವಾಹನಗಳನ್ನು 30ಕ್ಕೆ ಏರಿಸಲಾಗುವುದು. ಇದರಿಂದ ಜಿಲ್ಲೆಯಲ್ಲಿ ಮನೆ ಮನೆಗೆ ತೆರಳಿ, ಕೊವಿಡ್ ಪರೀಕ್ಷೆ ಮಾಡಲು ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.

    ಅಂತರ ಜಿಲ್ಲಾ ಚೆಕ್‌ಪೋಸ್ಟ್
    ಕರೊನಾ ಹಬ್ಬುವಿಕೆ ಪರಿಣಾಮಕಾರಿಯಾಗಿ ನಿರ್ವಹಿಸಲು ಮೊದಲಿನಂತೆ ಅಂತರ್ ಜಿಲ್ಲಾ ಚೆಕ್‌ಪೋಸ್ಟ್ ಮಾಡಲಾಗುವುದು. ಇದರಿಂದ ಒಳ ಹಾಗೂ ಹೊರ ಹೋಗುವ ವಾನಹನಗಳಲ್ಲಿ ಪ್ರಯಾಣಿಸುವವರಿಗೆ ಆರೋಗ್ಯ ಪರೀಕ್ಷೆ ಮಾಡಲಾಗುವುದು. ಇದರೊಂದಿಗೆ ಪೊಲೀಸ್ ರೌಂಡ್ಸ್ ಮಾಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಜಿಲ್ಲೆಯ ಯಾವೊಂದು ಪ್ರದೇಶದಲ್ಲೂ ಜನರು ಅನಗತ್ಯವಾಗಿ ಗುಂಪು ಸೇರುವುದು, ಪರಸ್ಪರ ಅಂತರ ಮರೆತು ನಡೆದುಕೊಳ್ಳುವುದು, ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಸಚಿವ ಪಾಟೀಲ್ ತಿಳಿಸಿದರು.

    ಸರ್ಕಾರ ವಿಫಲವಾಗಿಲ್ಲ
    ಕರೊನಾ ಎಲ್ಲರಿಗೂ ಬರುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮರ್ಥವಾಗಿ ಪರಿಸ್ಥಿತಿ ಎದುರಿಸುತ್ತಿವೆ ಎಂದು ಕೃಷಿ ಸಚವ ಬಿ.ಸಿ.ಪಾಟೀಲ್ ಸಮರ್ಥಿಸಿಕೊಂಡರು. ಸಭೆಗೂ ಮುನ್ನ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ಕಡೆಗಳಲ್ಲಿಯೂ ಕೋವಿಡ್-19ಪ್ರಕರಣಗಳು ಹೆಚ್ಚುತ್ತಿವೆ. ಕೊಪ್ಪಳ ಜಿಲ್ಲೆಯಲ್ಲೂ ಪ್ರಕರಣಗಳು ಹೆಚ್ಚುತ್ತಿವೆ. ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಲಾಕ್‌ಡೌನ್ ಮಾಡಿದರೆ ಕರೊನಾ ಹೋಗುತ್ತದೆ. ಇಲ್ಲದಿದ್ದರೆ ಹೋಗುವುದಿಲ್ಲ ಎನ್ನುವುದೆಲ್ಲ ತಪ್ಪು. ಸರ್ಕಾರದ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದರು.

    ಮಾಜಿ ಸಚಿವ ಶಿವರಾಜ್ ತಂಗಡಗಿ ಸತ್ಯಹರಿಶ್ಚಂದ್ರರು. ಅವರಷ್ಟು ಪ್ರಾಮಾಣಿಕರು ಯಾರೂ ಇಲ್ಲ. ಹೀಗಾಗಿಯೇ ಕ್ಷೇತ್ರದ ಜನತೆ ಅವರನ್ನು ಎಲ್ಲಿಡಬೇಕೋ ಅಲ್ಲಿಯೇ ಇಟ್ಟಿದ್ದಾರೆ.
    | ಬಿ.ಸಿ.ಪಾಟೀಲ್, ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts