More

    10 ದ್ವಿಚಕ್ರವಾಹನ ಜಪ್ತಿ

    ಹುಬ್ಬಳ್ಳಿ: ಅನಗತ್ಯವಾಗಿ ಸಂಚರಿಸುತ್ತಿದ್ದ 10 ದ್ವಿಚಕ್ರ ವಾಹನಗಳನ್ನು ಹುಬ್ಬಳ್ಳಿ ಸಂಚಾರ ಪೊಲೀಸರು ಶುಕ್ರವಾರ ಸಂಜೆ ಜಪ್ತಿ ಮಾಡುವ ಮೂಲಕ ಸಾರ್ವಜನಿಕರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

    ನಗರ ಹೇಗೆ ಇದೆ ಎಂದು ನೋಡಲು, ಮನೆಯಲ್ಲಿ ಬೋರು ಎಂದು, ಹವ್ಯಾಸಕ್ಕಾಗಿ… ಹೀಗೆ ಒಂದಲ್ಲ ಒಂದು ನೆವ ಹೇಳಿಕೊಂಡು ಮನೆಯಿಂದ ಹೊರಗೆ ಸಂಚರಿಸುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಲೇ ಇದ್ದಾರೆ. ಕೆಲವರು ಅದಕ್ಕೂ ಬಗ್ಗದಿರುವುದರಿಂದ ಮತ್ತೊಂದು ಕಡೆ ಬೈಕ್​ಗಳನ್ನೇ ಜಪ್ತಿ ಮಾಡುವ ಮೂಲಕ ಸಂಚಾರ ಪೊಲೀಸರು ಅಜಾಗ್ರತ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ.

    ಇಲ್ಲಿನ ಚನ್ನಮ್ಮ ವೃತ್ತ, ಹಳೇ ಕೋರ್ಟ್ ವೃತ್ತ ಮತ್ತು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಾರ್ಯಾಚರಣೆ ನಡೆಸಿದ ಪೂರ್ವ ಸಂಚಾರ ಠಾಣೆ ಪೊಲೀಸರು, ಸಂಚಾರ ಪೊಲೀಸರು, ಅನಗತ್ಯವಾಗಿ ಓಡಾಡುತ್ತಿದ್ದವರನ್ನು ತಡೆದು 10 ಬೈಕ್​ಗಳನ್ನು ಜಪ್ತಿ ಮಾಡಿದರು.

    ಆಸ್ಪತ್ರೆ ಮತ್ತಿತರ ತುರ್ತು ಸೇವೆ ಹೊರತುಪಡಿಸಿ ಅನಗತ್ಯವಾಗಿ ಸಣ್ಣ ಪುಟ್ಟ ವಿಷಯಕ್ಕೂ ಹೊರಗಡೆ ಸುತ್ತಾಡುತ್ತಿದ್ದವರನ್ನು ತಡೆದು ಬೈಕ್ ಜಪ್ತಿ ಮಾಡಿದರು. ನಂತರ ಅವರ ಸ್ವವಿವರ ಪಡೆದು, ಮತ್ತೊಮ್ಮೆ ಅನಗತ್ಯವಾಗಿ ಹೊರಗಡೆ ಸಂಚರಿಸದಂತೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಸಂಚಾರ ವಿಭಾಗದ ಎಸಿಪಿ ಎಸ್.ಎಂ. ಸಂದಿಗವಾಡ ತಿಳಿಸಿದ್ದಾರೆ.

    ಕಾರವಾರದಿಂದ ಬಂದವನ ಕೈಗೆ ಸೀಲ್

    ಹುಬ್ಬಳ್ಳಿ: ಕಾರವಾರದಿಂದ ಬಂದ ವ್ಯಕ್ತಿಯೊಬ್ಬನ ಕೈಗೆ ಆರೋಗ್ಯ ಇಲಾಖೆ ಸಿಬ್ಬಂದಿ ಕ್ವಾರಂಟೈನ್ ಮುದ್ರೆ ಹಾಕಿ, 14 ದಿನ ಮನೆಯಲ್ಲಿಯೇ ಇರುವಂತೆ ಸೂಚಿಸಿದ ಘಟನೆ ನಗರದ ತೊರವಿ ಹಕ್ಕಲದಲ್ಲಿ ಶುಕ್ರವಾರ ನಡೆದಿದೆ.

    ಕಾರವಾರದಿಂದ ಬಂದ ವ್ಯಕ್ತಿಯೊಬ್ಬ ಶುಕ್ರವಾರ ಬೆಳಗ್ಗೆ ಮಾರುಕಟ್ಟೆಗೆ ತೆರಳಿದ್ದ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೊನಾ ಸೋಂಕು ಹೆಚ್ಚಿರುವುದರಿಂದ, ಕಾರವಾರದಿಂದ ಒಬ್ಬಾತ ಬಂದಿದ್ದಾನೆಂದು ಗೊತ್ತಾದ ಕೂಡಲೆ ಜನ ಆತಂಕಗೊಂಡರು.

    ಹೆಗ್ಗೇರಿಯ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ಕರೆ ಮಾಡಿದ ಸ್ಥಳೀಯರು, ಆತಂಕ ತೋಡಿಕೊಂಡರು. ಸ್ಥಳಕ್ಕೆ ಆಗಮಿಸಿದ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ, ಆತನನ್ನು ಕಿಮ್ಸ್​ಗೆ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿದರು. ತಪಾಸಣೆಯಲ್ಲಿ ವ್ಯಕ್ತಿಯ ಆರೋಗ್ಯ ಸ್ಥಿತಿ ಸಾಮಾನ್ಯ ಇರುವುದಾಗಿ ಕಂಡುಬಂದಿದೆ.

    ಆದರೂ ಮುನ್ನೆಚ್ಚರಿಕೆಯಾಗಿ 14 ದಿನಗಳವರೆಗೆ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರುವಂತೆ ವೈದ್ಯಾಧಿಕಾರಿಗಳು ಆ ವ್ಯಕ್ತಿಗೆ ಸೂಚನೆ ನೀಡಿದ್ದಾರೆ. ವ್ಯಕ್ತಿಯು ಇಲ್ಲಿಯ ಮೂಲದವನಾಗಿದ್ದು, ಉದ್ಯೋಗ ನಿಮಿತ್ತ ಕಾರವಾರದಲ್ಲಿ ಇದ್ದನು ಎಂದು ಹೇಳಲಾಗಿದೆ.

    ಕರ್ತವ್ಯಲೋಪ, ಮೂವರು ಅಧಿಕಾರಿಗಳ ಅಮಾನತು

    ಧಾರವಾಡ: ಧಾರವಾಡ-ಗೋವಾ ರಸ್ತೆಯಲ್ಲಿ ತೆರೆದಿರುವ ಚೆಕ್ ಪೋಸ್ಟ್​ಗಳಲ್ಲಿ ನೇಮಿಸಿದ್ದ ಅಧಿಕಾರಿಗಳ ಪೈಕಿ ಮೂವರು ಸರಿಯಾಗಿ ಕರ್ತವ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಬಾಕಿ ಇರಿಸಿ, ಸರ್ಕಾರಿ ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

    ಕಾರ್ವಿುಕ ಅಧಿಕಾರಿ ಅಶೋಕ ಬಾಳಿಗಟ್ಟಿ, ಹೆಬ್ಬಳ್ಳಿಯ ಮುರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲ ಎಂ.ಎ. ಹುಲಗೆಜ್ಜಿ, ಅಟಲ್ ಬಿಹಾರಿ ವಸತಿ ಶಾಲೆ ಪ್ರಾಂಶುಪಾಲ ಅಣ್ಣಪ್ಪ ಹೊಸೂರ, ಸಾರಸ್ವತಪುರದ ಸರ್ಕಾರಿ ಮೆಟ್ರಿಕ್ ನಂತರದ ಸ್ನಾತಕೋತ್ತರ ಬಾಲಕರ ವಸತಿ ನಿಲಯದ ವಾರ್ಡನ್ ರಾಮಪ್ಪ ಕುಂಬಾರ ಅವರನ್ನು ನಿಯೋಜಿಸಲಾಗಿತ್ತು. ಇವರೆಲ್ಲ ಕರ್ತವ್ಯಕ್ಕೆ ಗೈರು ಹಾಜರಾಗಿರುವುದಾಗಿ ಅಳ್ನಾವರದ ತಹಸೀಲ್ದಾರರು ವರದಿ ಸಲ್ಲಿಸಿದ್ದರು.

    ಈ ಪೈಕಿ ಅಶೋಕ ಬಾಳಿಗಟ್ಟಿ, ತಾವು ರಜೆ ಮೇಲೆ ಇರುವ ಕಾರಣಕ್ಕೆ ನಿಯೋಜನೆ ಮಾಡಿರುವ ಆದೇಶ ಮತ್ತು ಸಂದೇಶ ಸ್ವೀಕೃತವಾಗಿಲ್ಲ. ಈಗ ವಿಷಯ ಗೊತ್ತಾಗಿದ್ದು, ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವುದಾಗಿ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಆದರೆ, ಉಳಿದ ಮೂವರು ಕರ್ತವ್ಯ ನಿರ್ವಹಿಸಲು ನಿಷ್ಕಾಳಜಿ ತೋರಿದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಅಡಿ ಅಮಾನತು ಮಾಡಿದ್ದಾರೆ. ಇದರ ಜೊತೆಗೆ ಅಮಾನತಿನ ಅವಧಿಯಲ್ಲಿ ತಮ್ಮ ಕಾರ್ಯಾಲಯದ ಮುಖ್ಯಸ್ಥರ ಪರವಾನಗಿ ಇಲ್ಲದೆ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದು ಸೂಚನೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts