More

    10 ಗಂಟೆಯಲ್ಲೇ ನೋಂದಣಿ ಮುಕ್ತಾಯ, ದೊಡ್ಡಬಳ್ಳಾಪುರದಲ್ಲಿ ರೊಚ್ಚಿಗೆದ್ದ ರೈತರು, ರಾಷ್ಟ್ರೀಯ ಹೆದ್ದಾರಿ ತಡೆ

    ದೊಡ್ಡಬಳ್ಳಾಪುರ: ಬೆಂಬಲ ಬೆಲೆಯಡಿ ರಾಗಿ ಖರೀದಿಗೆ ರೈತರ ನೋಂದಣಿ ಪ್ರಕ್ರಿಯೆ ಆರಂಭವಾಗಿ 10 ಗಂಟೆ ಕಳೆಯುವಷ್ಟರಲ್ಲೇ ಮಿತಿ ಪೂರ್ಣಗೊಂಡಿರುವುದಾಗಿ ಹೇಳಿದ ಅಧಿಕಾರಿಗಳು ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಿದರು. ಇದರಿಂದ ರೊಚ್ಚಿಗೆದ್ದ ರೈತರು ನಗರದ ಎಪಿಎಂಸಿ ಮಾರುಕಟ್ಟೆಯ ರಾಗಿ ಖರೀದಿ ಕೇಂದ್ರಕ್ಕೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

    ಬೆಂಬಲ ಬೆಲೆಯಡಿ ಮೊದಲ ಅವಧಿಯಲ್ಲಿ 2.30 ಮೆಟ್ರಿಕ್ ಟನ್ ರಾಗಿ ಖರೀದಿಸಿದ್ದ ಸರ್ಕಾರ 2ನೇ ಅವಧಿಯಲ್ಲಿ 1.14 ಮೆಟ್ರಿಕ್ ಟನ್ ಖರೀದಿಯ ಗುರಿ ನಿಗದಿಪಡಿಸಿಕೊಂಡಿತ್ತು. ಇದಕ್ಕಾಗಿ ಏ.25ರಿಂದ ನೋಂದಣಿ ಪ್ರಕ್ರಿಯೆ ಆರಂಭಿಸಿತ್ತು. ಆದರೆ, ಅಂದು ಸರ್ವರ್ ಸಮಸ್ಯೆ ಕಾಣಿಸಿಕೊಂಡಿದ್ದರಿಂದ, ಸರತಿ ಸಾಲಿನಲ್ಲಿ ನಿಂತಿದ್ದ ರೈತರು ರೊಚ್ಚಿಗೆದ್ದು ಪ್ರತಿಭಟಿಸಿದ್ದರು. ಆಗ ಮಧ್ಯಪ್ರವೇಶಿಸಿದ್ದ ಶಾಸಕ ಟಿ. ವೆಂಕಟರಮಣಯ್ಯ ಹಾಗೂ ತಹಸೀಲ್ದಾರ್ ಮೋಹನಕುಮಾರಿ, ಒಂದೂವರೆ ಸಾವಿರ ರೈತರಿಗೆ ಟೋಕನ್ ಕೊಡಿಸಿ, ಗುರುವಾರ (ಏ.28) ನೋಂದಣಿ ಪ್ರಕ್ರಿಯೆ ನಡೆಸುವುದಾಗಿ ಹೇಳಿದ್ದರು.

    ಅದರಂತೆ ರೈತರು ಗುರುವಾರ ರಾಗಿ ಖರೀದಿ ಕೇಂದ್ರಕ್ಕೆ ಬಂದಿದ್ದರು. ಆದರೆ, ಈಗಾಗಲೇ ರಾಗಿ ಖರೀದಿ ಮಿತಿ ಪೂರ್ಣಗೊಂಡಿದೆ. ಆದ್ದರಿಂದ, ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ೋಷಿಸುತ್ತಲೇ ರೈತರು ಆಕ್ರೋಶಗೊಂಡರು. ನೋಂದಣಿ ಪ್ರಕ್ರಿಯೆ ಮುಂದುವರಿಸುವಂತೆ ಒತ್ತಾಯಿಸಿ, ಪ್ರತಿಭಟನೆ ಆರಂಭಿಸಿದರು. ಸರ್ಕಾರ ನಿಗಿದಿಪಡಿಸಿದ್ದ ನಿಗದಿತ ಗುರಿ ಈಗಾಗಲೇ ಈಡೇರಿದೆ. ಆದ್ದರಿಂದ, ಪ್ರಕ್ರಿಯೆ ನಿಲ್ಲಿಸುವಂತೆ ಸರ್ಕಾರ ನೀಡಿರುವ ಆದೇಶವನ್ನು ಪಾಲಿಸಬೇಕಾಗುತ್ತದೆ. ಹಾಗಾಗಿ, ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು.

    ಇದರಿಂದ ಮತ್ತಷ್ಟು ಕೆರಳಿದ ರೈತರು, ಎಪಿಟಂಸಿ ಬಳಿಯ ತುಮಕೂರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ, ಪ್ರತಿಭಟನೆ ಆರಂಭಿಸಿದರು.

    ಶಾಸಕ, ರೈತರ ಸಂಘದ ಬೆಂಬಲ: ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಶಾಸಕ ಟಿ. ವೆಂಕಟರಮಣಯ್ಯ ಮತ್ತು ರೈತ ಸಂಘದ ಮುಖಂಡರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಗಿರಿಜಾದೇವಿ, ವಿಷಯವನ್ನು ಸರ್ಕಾರದ ಗಮನಕ್ಕೆ ತರುವುದಾಗಿಯೂ, ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದರು. ಆದರೆ, ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಸಂಬಂಧಿತ ಅಧಿಕಾರಿಗಳು ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಶಾಸಕ ಟಿ. ವೆಂಕಟರಮಣಯ್ಯ ಹಾಗೂ ರೈತರ ಸಂಘದ ಮುಖಂಡರು ಪಟ್ಟುಹಿಡಿದರು. ಈ ಹಿನ್ನೆಲೆಯಲ್ಲಿ ಶಾಸಕ ಹಾಗೂ ರೈತ ಸಂಘದ ಮುಖಂಡರು ಮತ್ತು ರೈತರನ್ನು ವಶಕ್ಕೆ ಪಡೆದ ಪೊಲೀಸರು, ಸ್ವಲ್ಪಕಾಲ ನಗರ ಠಾಣೆಯಲ್ಲಿರಿಸಿ, ಬಳಿಕ ಬಿಡುಗಡೆ ಮಾಡಿದರು.

    ಚೀಲದ ಹಣದಲ್ಲಿ ಶೇ.50 ಲೂಟಿ: ರೈತರಿಗೆ ಚೀಲ ಖರೀದಿಸುವ ಅಗತ್ಯ ಇರಲಿಲ್ಲ. ಆದರೂ ಅಧಿಕಾರಿಗಳ ಒತ್ತಾಯದ ಮೇರೆ ಒಂದು ಚೀಲಕ್ಕೆ 41 ರೂ.ನಂತೆ ಚೀಲಗಳನ್ನು ಖರೀದಿಸಿದ್ದಾರೆ. ಈ ಹಣದಲ್ಲಿ ಶೇ.50 ಹಣವನ್ನು ಅಧಿಕಾರಿಗಳು ಲೂಟಿ ಹೊಡೆದಿದ್ದಾರೆ ಎಂದು ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಬಚ್ಚಹಳ್ಳಿ ಸತೀಶ್ ಆರೋಪಿಸಿದರು. ಚೀಲ ಖರೀದಿಗೆ 28 ಲಕ್ಷ ರೂ. ಖರ್ಚು ತೋರಿಸಲಾಗಿದೆ. ಜತೆಗೆ ಅಧಿಕಾರಿಗಳು ರಾಗಿ ಖರೀದಿಗೆ ರೈತರಿಂದ 2 ಸಾವಿರ ರೂ.ನಿಂದ 5 ಸಾವಿರ ರೂ.ವರೆಗೆ ಅಕ್ರಮವಾಗಿ ವಂತಿಕೆ ಪಡೆಯುತ್ತಿದ್ದಾರೆ ಎಂದು ದೂರಿದರು.

    ಉಳಿದ ರೈತರಿಂದಲೂ ಖರೀದಿಸಿ: ಸ್ವಾಮಿನಾಥನ್ ವರದಿಯಂತೆ ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚದ ಎರಡು ಪಟ್ಟು ಬೆಂಬಲ ಬೆಲೆ ನಿಗದಿಪಡಿಸಬೇಕು. ಅದರಂತೆ ಕ್ವಿಂಟಾಲ್ ರಾಗಿಗೆ 5 ಸಾವಿರ ರೂ.ಗೂ ಹೆಚ್ಚಿನ ಬೆಂಬಲ ಬೆಲೆ ನಿಗದಿಪಡಿಸಬೇಕಿತ್ತು. ಆದರೆ ಈ ವಿಷಯದಲ್ಲಿ ಸರ್ಕಾರ ತಾರತಮ್ಯ ನೀಡಿ ಅನುಸರಿಸುತ್ತಿದೆ. ಸರ್ಕಾರ ಕೂಡಲೆ ಉಳಿದ ರೈತರಿಂದಲೂ ರಾಗಿ ಖರೀದಿಸಬೇಕು. ಇಲ್ಲವಾದರೆ ತೀವ್ರ ಹೋರಾಟ ನಡೆಸುವುದಾಗಿ ಬಚ್ಚಹಳ್ಳಿ ಸತೀಶ್ ಎಚ್ಚರಿಕೆ ನೀಡಿದರು.
    ರೈತ ಸಂಘದ ಜಿಲ್ಲಾಧ್ಯಕ್ಷ ನಾಗಸಂದ್ರ ಪ್ರಸನ್ನ, ಮುಖಂಡರಾದ ಮುನಿನಾರಾಯಣಪ್ಪ, ಕುಮಾರ್, ಹನುಮಂತೇಗೌಡ, ಮೂರ್ತಿ, ರೈತರಾದ ಶಿವರಾಜ್, ವಿಜಯಕುಮಾರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts