More

    10 ಕೋಟಿ ರೂ. ವೆಚ್ಚದಲ್ಲಿ ನಗರಸಭೆ ಕಟ್ಟಡ

    ಕೋಲಾರ: ನಗರದ ಮಿನಿ ವಿಧಾನಸೌಧ ಪಕ್ಕದಲ್ಲಿರುವ ನಗರಸಭೆಯ ಜಾಗದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಗರಸಭೆಯ ನೂತನ ಕಟ್ಟಡ ನಿರ್ಮಾಣದ ಕರಡು ವಿನ್ಯಾಸ ನಕ್ಷೆಗೆ ಆಡಳಿತ ಮಂಡಳಿ ಸರ್ವಾನುಮತದ ಒಪ್ಪಿಗೆ ಸೂಚಿಸಿದೆ.

    ನಗರಸಭೆ ಅಧ್ಯಕ್ಷೆ ಶ್ವೇತಾ ಆರ್. ಶಬರೀಶ್ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ತುರ್ತು ಸಾಮಾನ್ಯ ಸಭೆಯಲ್ಲಿ ಸಭೆಯ ವಿಷಯ ಮಂಡಿಸಿದ ಪೌರಾಯುಕ್ತ ಪ್ರಸಾದ್, ಜಿಲ್ಲಾ ಕೇಂದ್ರದಲ್ಲಿನ ನಗರಸಭೆಗೆ ಸುಸಜ್ಜಿತ ಕಟ್ಟಡ ಅವಶ್ಯಕತೆಯಿದೆ. ಹಾಲಿ ಕಟ್ಟಡ ಮಳೆ ನೀರಿಗೆ ಸೋರಿ ಆಡಳಿತ ನಿರ್ವಹಣೆ ಕಷ್ಟವಾಗುತ್ತಿದೆ. ಪೌರಾಡಳಿತ ನಿರ್ದೇಶಕರು ನಗರಕ್ಕೆ ಬಂದಿದ್ದ ಸಂದರ್ಭದಲ್ಲಿ ನೂತನ ಕಟ್ಟಡಕ್ಕೆ 10 ಕೋಟಿ ರೂ. ಅನುದಾನ ಮಂಜೂರು ಮಾಡಲು ಅಧ್ಯಕ್ಷ, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ನಿರ್ದೇಶಕರು ಡಿಪಿಆರ್ ಸಿದ್ಧಮಾಡಿ ಕಳುಹಿಸಲು ಸೂಚಿಸಿದಂತೆ ನಗರಸಭೆಯಿಂದ ಟೆಂಡರ್ ಕರೆದು ಕರಡು ನಕ್ಷೆ ಸಿದ್ಧಪಡಿಸಲಾಗಿದೆ ಎಂದರು.

    ನೂತನ ಕಟ್ಟಡದ ಕರಡು ವಿನ್ಯಾಸವನ್ನು ಪವರ್ ಪಾಯಿಂಟ್ ಪ್ರಸಂಟೇಷನ್ ನೀಡಿದ ಖಾಸಗಿ ಸಂಸ್ಥೆಯ ಆರ್ಕಿಟೆಕ್ ರಾಹುಲ್, ನಗರಸಭೆಯಿಂದ ಗುರುತಿಸಿ ನೀಡಿರುವ ಜಾಗದಲ್ಲಿ ಎರಡು ಅಂತಸ್ಥಿನ ಕಟ್ಟಡಕ್ಕೆ ವಿನ್ಯಾಸ ರೂಪಿಸಲಾಗಿದೆ ಎಂದರು. ಅಂಬರೀಷ್ ಮಾತನಾಡಿ, ನಗರಸಭೆ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಮೈಲಿಗಲ್ಲು ಆಗಲಿದೆ. ದೂರದೃಷ್ಟಿ ಇಟ್ಟುಕೊಂಡು ರೆಕಾರ್ಡ್ ರೂಂ ದೊಡ್ಡದಾಗಿ ಮಾಡಿ, ಸೂಕ್ತ ಭದ್ರತಾ ವ್ಯವಸ್ಥೆ ಇರಲಿ, ಸಭೆಗಳಲ್ಲಿ ಸದಸ್ಯರು ಯಾರು ಏನು ಮಾತನಾಡಿದ್ದಾರೆ ಎಂಬುದನ್ನು ಪುಸ್ತಕಕ್ಕೆ ಇಳಿಸಿ ಗ್ರಂಥಾಲಯದಲ್ಲಿ ಇಡಿ, ಅವಶ್ಯ ಅನುದಾನಕ್ಕೆ ಪಕ್ಷಾತೀತವಾಗಿ ಸರ್ಕಾರದ ಬಳಿ ನಿಯೋಗ ತೆರಳೋಣ ಎಂದರು.

    ಪ್ರಸಾದ್‌ಬಾಬು ಮಾತನಾಡಿ, ಕೋಲಾರ ಮುಂದೆ ನಗರಪಾಲಿಕೆ ಆಗುವ ಸಂದರ್ಭದಲ್ಲಿ ವಾರ್ಡ್‌ಗಳ ಸಂಖ್ಯೆ ಹೆಚ್ಚಳವಾಗುವುದರಿಂದ ಇದಕ್ಕೆ ಸೂಕ್ತವಾಗಿ ಕೊಠಡಿ, ಸಭಾಂಗಣ ವ್ಯವಸ್ಥೆ ಇರಲಿ, ಮಹಿಳಾ ಹಾಗೂ ಪುರುಷ ಸದಸ್ಯರಿಗೆ ಪ್ರತ್ಯೇಕ ಹಾಲ್ ವ್ಯವಸ್ಥೆ ಕಲ್ಪಿಸಿ ಎಂದರು.
    ಎಸ್.ಆರ್. ಮುರಳಿಗೌಡ ಮಾತನಾಡಿ, ನೂತನ ಕಟ್ಟಡದಲ್ಲಿ ವಾಸ್ತು ಪ್ರಕಾರ ಕೊಠಡಿ ಇರಲಿ, ಧ್ವಜಸ್ತಂಭದ ಜತೆಗೆ ನಗರಸಭೆ ಲೋಗೋ ಕಟ್ಟಡದಲ್ಲಿರಲಿ ಎಂದರು. ಶಾಸಕರರಿಗೆ, ವಿಧಾನಪರಿಷತ್, ಸಂಸದರಿಗೆ ಕೊಠಡಿ ವ್ಯವಸ್ಥೆ ಇರಲಿ ಎಂದು ರಾಕೇಶ್ ಸಲಹೆ ನೀಡಿದರು.
    ಕಟ್ಟಡ ನಿರ್ಮಿಸಲು ಉದ್ದೇಶಿಸಿರುವ ಜಾಗದಲ್ಲಿರುವ ಕರ್ನಾಟಕ ಒನ್ ಕೇಂದ್ರ ತಾಲೂಕು ಕಚೇರಿಗೆ ಸ್ಥಳಾಂತರಗೊಳ್ಳಲಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಎಲ್ಲ ಸದಸ್ಯರ ಸಲಹೆ ಆಲಿಸಿದ ಸಭೆ ಕರಡು ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಿತು.

    ನಗರಸಭೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ವಸೂಲಾತಿ ಉನ್ನತೀಕರಿಸಲು ಆಸ್ತಿಗಳ ಸರ್ವೇ ಮಾಡಿಸಿ ಗಣಕೀಕರಣಗೊಳಿಸುವುದು, ನಗರದ ಎಸಿಬಿ ಕಚೇರಿ ಮುಂಭಾಗದ ವೃತ್ತವನ್ನು ಸಿಎಸ್‌ಆರ್ ಅಥವಾ ದಾನಿಗಳ ನೆರವಿನಿಂದ ಅಶೋಕ ಸ್ತಂಭದ ಮಾದರಿಯಲ್ಲಿ ನಿರ್ಮಿಸಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಯಿತು.

    ಬಿ.ಎಂ. ಮುಬಾರಕ್ ಮಾತನಾಡಿ, ನಗರದಲ್ಲಿ ಒಂದೇ ಒಂದು ರಸ್ತೆ ಚೆನ್ನಾಗಿಲ್ಲ, ಮೊಣಕಾಲುದ್ದ ಹಳ್ಳ ಇದೆ, ರಸ್ತೆ ವಿಸ್ತರಣೆಗೆ ನಿಗದಿಪಡಿಸಿದ್ದ ಅವಧಿ ಮುಗಿದರೂ ಪಿಡಬ್ಲ್ಯುಡಿ ಕಣ್ಣುಮುಚ್ಚಿಕೊಂಡು ಕುಳಿತಿದೆ. ಅಧಿಕಾರಿಗಳ ಕಾರ್ಯಲೋಪಕ್ಕೆ ಶೋಕಾಸ್ ನೋಟಿಸ್ ನೀಡಿ ಕಠಿಣ ಕ್ರಮ ತೆಗೆದುಕೊಳ್ಳುವ ಜತೆಗೆ ಯಾವಾಗ ಮುಗಿಸಿಕೊಡುತ್ತಾರೆಂದು ಮುಚ್ಚಳಿಕೆ ಬರೆಯಿಸಿಕೊಳ್ಳಿ ಎಂದರು. ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರ ಮುಗಿಸಿಕೊಡುತ್ತೇವೆ, ಚಿಕ್ಕಬಳ್ಳಾಪುರ ರಸ್ತೆಯಲ್ಲಿ ರಸ್ತೆ ಬದಿಯೇ ಕಸ ಹಾಕುವುದರಿಂದ ರಸ್ತೆ ಹಾಳಾಗುತ್ತಿದೆ ಎಂದು ಪಿಡಬ್ಲ್ಯುಡಿ ಇಂಜಿನಿಯರ್ ಮುಸ್ತಾಕ್ ಆರೋಪಿಸಿದಾಗ ಸದಸ್ಯರಾದ ಅಂಬರೀಷ್, ನಾಜೀಯಾ ಇತರರು ತರಾಟೆಗೆ ತೆಗೆದುಕೊಂಡರು. ಉಪಾಧ್ಯಕ್ಷ ಪ್ರವೀಣ್ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.

    ತೆಪ್ಪೋತ್ಸವಕ್ಕೆ ಅನುಮತಿ ನೀಡಿ: ಕೋಲಾರಮ್ಮ ಕೆರೆ ತುಂಬಿರುವುದರಿಂದ ನಗರಸಭೆಯಿಂದ ದೀಪಗಳು, ತೆಪ್ಪೋತ್ಸವ ನಡೆಸಲು ಪ್ರಸಾದ್‌ಬಾಬು, ಮುಬಾರಕ್ ಆಗ್ರಹಿಸಿದರು, ಕಳೆದ ವಾರ ಕೋಲಾರಮ್ಮ ಕೆರೆಗೆ ಬಾಗೀನ ಸಲ್ಲಿಸುವ ವೇಳೆ ನಗರದ ಪ್ರಥಮ ಪ್ರಜೆಯನ್ನು ಆಹ್ವಾಸದಿರುವ ಬಗ್ಗೆ ಮುರಳೀಗೌಡ ಆಕ್ಷೇಪಿಸಿದರು. ಕೋಡಿಕಣ್ಣೂರು ಕೆರೆಗೆ ಭಾರಿ ನೀರು ಬರುತ್ತಿರುವುದರಿಂದ ಕೆರೆ ಪಕ್ಕದಲ್ಲಿರುವ ಮನೆಗಳಿಗೆ ನೀರು ನುಗ್ಗುವುದನ್ನು ತಡೆಯುವುದು ಹಾಗೂ ಕೋಲಾರಮ್ಮ ಕೆರೆಯಲ್ಲಿ ಬೆಳೆದಿರುವ ಜೊಂಡು ತೆರವಿಗೆ ಅಂಬರೀಷ್ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts