More

    40 ಲಕ್ಷ ರೂ. ಮೌಲ್ಯದ ಶ್ರೀಗಂಧ ವಶ

    ಧಾರವಾಡ: ಧಾರವಾಡ ವೃತ್ತದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 40 ಲಕ್ಷ ರೂ. ಮೌಲ್ಯದ ಶ್ರೀಗಂಧದ ಕಟ್ಟಿಗೆಯನ್ನು ಗುರುವಾರ ಬೆಳಗಿನ ಜಾವ ವಶಪಡಿಸಿಕೊಂಡಿದೆ. ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಕಾರ್, ಗೂಡ್ಸ್ ವಾಹನ, 8 ಮೊಬೈಲ್​ಗಳನ್ನು ಜಪ್ತಿ ಮಾಡಿ 370 ಕೆಜಿ ಶ್ರೀಗಂಧವನ್ನು ವಶಕ್ಕೆ ಪಡೆದಿದೆ.

    ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಖನದಾಳದ ಪರಸಪ್ಪ ಶ್ರೀಕಾಂತ ಭಜಂತ್ರಿ, ಮಾರುತಿ ಶ್ರೀಕಾಂತ ಭಜಂತ್ರಿ, ಕಲ್ಲಪ್ಪ ಅಣ್ಣಪ್ಪ ಶಿಂಧೆ, ಮಹದೇವ ಭೀಮಪ್ಪ ಮಾಂಗ ಹಾಗೂ ಮೂಡಲಗಿಯ ರಾಜು ವಿಠ್ಠಲ ಭಜಂತ್ರಿ ಬಂಧಿತ ಆರೋಪಿಗಳು.

    ಕಳೆದ 2- 3 ತಿಂಗಳು ಧಾರವಾಡ ಜಿಲ್ಲೆಯ ವಿವಿಧೆಡೆ ಶ್ರೀಗಂಧ ಮರಗಳ ಕಳ್ಳತನ ನಡೆದಿತ್ತು. ಆ ಸಂಬಂಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಶ್ರೀಗಂಧ ಕಳ್ಳರ ಜಾಲ ಭೇದಿಸಲು 2 ವಿಶೇಷ ತಂಡಗಳನ್ನು ರಚಿಸಿಸಲಾಗಿತ್ತು.

    ರಾಜ್ಯದ ವಿವಿಧೆಡೆ ಕಳ್ಳತನವಾಗಿದ್ದ ಶ್ರೀಗಂಧದ ಕಟ್ಟಿಗೆಯನ್ನು ಈ ಐವರು ಆರೋಪಿಗಳು ಸಂಗ್ರಹಿಸಿದ್ದರು. ಗೂಡ್ಸ್ ವಾಹನ ಹಾಗೂ ಡಿಜೈರ್ ಕಾರ್​ನಲ್ಲಿ ಆಂಧ್ರಪ್ರದೇಶಕ್ಕೆ ಸಾಗಿಸುತ್ತಿರುವ ಮಾಹಿತಿ ಕಲೆ ಹಾಕಲಾಗಿತ್ತು. ಬುಧವಾರ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ರಾಣೆಬೆನ್ನೂರ ತಾಲೂಕಿನ ಚಳಗೇರಿ ಟೋಲ್ ಗೇಟ್​ನಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ತಿಳಿಸಿದ್ದಾರೆ.

    ಬಂಧಿತ ಐವರು ಆರೋಪಿಗಳು ಕೇವಲ ಮಧ್ಯವರ್ತಿಗಳು. ಇವರು ಶ್ರೀಗಂಧದ ಕಟ್ಟಿಗೆ ತುಂಡುಗಳನ್ನು ಸಂಗ್ರಹಿಸಿ ಆಂಧ್ರಪ್ರದೇಶಕ್ಕೆ ರವಾನಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಗೂಡ್ಸ್ ವಾಹನ ಮೇಲ್ನೋಟಕ್ಕೆ ನೋಡಿದಾಗ ಖಾಲಿ ಇದೆ ಎನ್ನುವಂತೆ ಪರಿವರ್ತಿಸಿದ್ದರು. ಅದರ ಅಡಿಭಾಗದಲ್ಲಿ ಕಟ್ಟಿಗೆಯ ತುಂಡುಗಳನ್ನಿಟ್ಟು ಸಾಗಾಟ ಮಾಡುತ್ತಿದ್ದರು. ಕಾರ್ಯಾಚರಣೆಗೆ ಪೊಲೀಸ್ ಇಲಾಖೆಯವರೂ ಉತ್ತಮ ಸಹಕಾರ ನೀಡಿದ್ದಾರೆ. ಶ್ರೀಗಂಧವನ್ನು ಖರೀದಿಸುತ್ತಿದ್ದವರಿಗಾಗಿ ಶೋಧ ಕಾರ್ಯ ನಡೆಸಲಾಗುವುದು ಎಂದು ಕ್ಷೀರಸಾಗರ ತಿಳಿಸಿದ್ದಾರೆ.

    ಮುಖ್ಯ ಉಪ ಅರಣ್ಯಾಧಿಕಾರಿ ಮಂಜುನಾಥ ಚವ್ಹಾಣ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಆರ್.ಎಸ್. ಉಪ್ಪಾರ, ಪಿ.ಡಿ. ಮಣಕೂರ, ಎಂ.ಡಿ. ಲಮಾಣಿ, ಜಿ.ಎಂ. ಕಾಂಬಳೆ, ಸಿ.ಎಸ್. ರೊಟ್ಟಿ, ಅರಣ್ಯ ರಕ್ಷಕರಾದ ವಿಠ್ಠಲ ಜೋನಿ, ರಘು ಕುರಿಯವರ, ರಂಗಪ್ಪ ಕೋಳಿ, ಕಲ್ಲಪ್ಪ ಕೆಂಗಾರ, ಎಸ್.ಪಿ. ಹಿರೇಮಠ, ಶಿವರಾಂ ಚವ್ಹಾಣ, ರಾಜೇಂದ್ರ ಮಗದುಮ್ ಚಾಂದಬಾಷಾ ಮುಲ್ಲಾ ಹಾಗೂ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts