More

    ಹೋಮ, ಉರುಳು ಸೇವೆ ಅನ್ನೋರು ಬೇಕಿಲ್ಲ ; ಅಧಿಕಾರಿಗಳ ವರ್ತನೆಗೆ ತಿಪಟೂರು ನಗರಸಭೆ ಸದಸ್ಯರ ಆಕ್ರೋಶ

    ತಿಪಟೂರು : 2021-22ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಹಂಚಿಕೆಯಾಗಿರುವ 2.26 ಕೋಟಿ ರೂಪಾಯಿ ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸಲು ನಗರಸಭೆ ಕಚೇರಿ ಆವರಣದಲ್ಲಿ ನಗರಸಭೆ ಅಧ್ಯಕ್ಷ ಪಿ.ಜೆ.ರಾಮ ಮೋಹನ್ ಅಧ್ಯಕ್ಷತೆಯಲ್ಲಿ ಸೋಮವಾರ ವಿಶೇಷ ಸಭೆ ಕರೆಯಲಾಗಿತ್ತು. ಜಳಕ, ಪೂಜೆ, ಹೋಮ ಮತ್ತು ಉರುಳು ಸೇವೆಯಲ್ಲಿ ನಿರತರಾಗಿರುವ ಅಧಿಕಾರಿಗಳು ನಮಗೆ ಬೇಕಿಲ್ಲ ಎಂದು ನಗರಸಭಾ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ವಿಶೇಷ ಸಭೆ ಬಹುತೇಕ ಅರ್ಥ ಕಳೆದುಕೊಂಡಿತಲ್ಲದೆ, ಅಧ್ಯಕ್ಷರು ಮತ್ತು ಆಯುಕ್ತರ ವಿರುದ್ಧದ ಆರೋಪ, ಪ್ರತ್ಯಾರೋಪಗಳಿಗೆ ವೇದಿಕೆ ಒದಗಿಸಿತ್ತು.

    ಬೀದಿ ದೀಪದ ಸಮಸ್ಯೆ ಬಗ್ಗೆ ಪ್ರಶ್ನಿಸಿದರೆ ಮುನಿಸ್ವಾಮಿ ಎಂಬ ಅಧಿಕಾರಿ ಜಳಕ ಮಾಡುತ್ತಿದ್ದೆ ಎನ್ನುತ್ತಾರೆ, ಕರೆ ಮಾಡಿದಾಗಲೆಲ್ಲಾ, ಕಾಲ್ ಯೂ ಲೇಟರ್ ಎಂಬ ಸಂದೇಶ ಕಳಿಸಿ ಸುಮ್ಮನಾಗುವ ಆಯುಕ್ತ ಉಮಾಕಾಂತ್, 2 ತಿಂಗಳಾದರೂ ಸದಸ್ಯರ ಸಮಸ್ಯೆ ಆಲಿಸಿಲ್ಲ. ಕರ್ತವ್ಯದ ಸಮಯದಲ್ಲಿ ಪೂಜೆ, ಪುನಸ್ಕಾರ, ಮತ್ತು ಉರುಳುಸೇವೆಯಲ್ಲಿ ಮಗ್ನರಾಗಿರುತ್ತಾರೆ ಎಂದು 14ನೇ ವಾರ್ಡ್ ಸದಸ್ಯ ವಿ.ಯೋಗೀಶ್ ಟೀಕಿಸಿದರು.

    ಜನ ಸೇವೆಗಿಂತಾ, ನಿಮಗೆ ಪೂಜೆ, ಪುನಸ್ಕಾರ, ಉರುಳುಸೇವೆಯೇ ಹೆಚ್ಚಾದರೆ ಇಲ್ಲಿಂದ ಗಂಟು, ಮೂಟೆ ಕಟ್ಟಿ ಎಂದು ಎಚ್ಚರಿಸಿದ್ದಕ್ಕೆ ಮಹೇಶ್ ಮತ್ತು ಉಳಿದ ಸದಸ್ಯರು ಧ್ವನಿಗೂಡಿಸಿದರು.

    ಕಚೇರಿಯಲ್ಲಿ ವಿವಾಹ ವಾರ್ಷಿಕೋತ್ಸವ: ಇತ್ತೀಚೆಗೆ ನಗರಸಭೆ ಕಚೇರಿಯಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಆಯುಕ್ತರ ಕ್ರಮ ಪ್ರಶ್ನಿಸಿದ ಸದಸ್ಯ ಟಿ.ಎಚ್.ಶ್ರೀನಿವಾಸ್, ನಗರಸಭೆಯ ನೂತನ ಕಟ್ಟಡದಲ್ಲಿ ಆಯ್ದ ಸದಸ್ಯರ ಸಮ್ಮುಖದಲ್ಲಿ ನಡೆಸಿದ ಹೋಮ, ಹವನ, ಮತ್ತು ಮಾರ್ಚ್ ತಿಂಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಚೇರಿ ಉದ್ಘಾಟನೆಗೆ ಬಂದಾಗ ಕೆಲ ಮಹಿಳಾ ಸದಸ್ಯರನ್ನು ಒಳ ಕರೆದು, ಉಳಿದ ಚುನಾಯಿತ ಸದಸ್ಯರನ್ನು ಆಚೆ ನಿಲ್ಲಿಸಿದ ವಿಷಯಕ್ಕೆ ಸಂಬಂಧಪಟ್ಟಂತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯೆ ಮೇಘ ಭೂಷಣ್, ಹಾಗಿದ್ದಲ್ಲಿ ನಮ್ಮ ಮನೆಯ ಕಾರ್ಯಕ್ರಮಕ್ಕೂ ಕಚೇರಿಯಲ್ಲಿ ಅವಕಾಶ ಕೊಡ್ತೀರಾ ಎಂದು ಪ್ರಶ್ನಿಸಿದರು. ಸದಸ್ಯೆ ಡಾ.ಓಹಿಲಾ, ಮಹಿಳಾ ಸದಸ್ಯರನ್ನು ಅಗೌರವದಿಂದ ನಡೆಸಿಕೊಳ್ಳುತ್ತಿರುವುದನ್ನು ಖಂಡಿಸಿದರು.

    ಅಧಿಕಾರಿಗಳ ಉದ್ಧಟತನ : ಸಭೆಯಲ್ಲಿ ಸದಸ್ಯರು ಎದ್ದು ನಿಂತು ಸಮಸ್ಯೆ ಹೇಳಿಕೊಳ್ಳುವಾಗ, ಕುಳಿತುಕೊಳ್ಳಿ ಎಂದು ಆದೇಶಿಸಿದ ಆಯುಕ್ತರ ವರ್ತನೆ ಮತ್ತು ನಿಯಮಬಾಹಿರವಾಗಿ ಅಧ್ಯಕ್ಷರು, ಉಪಾಧ್ಯಕ್ಷರು, ಆಯುಕ್ತರ ಅಕ್ಕಪಕ್ಕದಲ್ಲಿ ಕುಳಿತಿದ್ದ ಸಹಾಯಕ ಇಂಜಿನಿಯರ್‌ಗಳ ಉಪಸ್ಥಿತಿಯನ್ನು ಸಹಿಸದ ಕೆಲ ಸದಸ್ಯರು, ಮೊದಲು ಅವರನ್ನು ವೇದಿಕೆಯಿಂದ ಹೊರಕ್ಕೆ ಕಳಿಸಿ ಎಂದು ಪಟ್ಟು ಹಿಡಿದರು.

    ಅಧ್ಯಕ್ಷರು ಅಧಿಕಾರಿಗಳ ಕೈಗೊಂಬೆ ಎನ್ನುವುದಕ್ಕೆ ಇದೇ ಸಾಕ್ಷಿ, ಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಡಲಾಗದ ಕಾರಣ ಅಕ್ಕಪಕ್ಕದಲ್ಲಿ ಅಧಿಕಾರಿಗಳನ್ನು ಕೂರಿಸಿಕೊಂಡಿದ್ದಾರೆ ಎಂದು ಸದಸ್ಯ ವಿ. ಯೋಗೀಶ್ ಧ್ವನಿಯಾದರು.

    ಕರೊನಾ ಕಷ್ಟ ಕಾಲದಲ್ಲಿ ಸಭೆ ಕರೆಯದೇ, ಅನುದಾನ ಬಿಡುಗಡೆಗೆ, ಗುತ್ತಿಗೆದಾರರ ಅನುಕೂಲಕ್ಕೆ ವಿಶೇಷ ಸಭೆ ಕರೆದಿದ್ದೀರಿ, ಕಳೆದ ಸಭೆಯಲ್ಲಿನ ವಿಷಯಗಳೇ ಸ್ಥಿರೀಕರಣಗೊಂಡಿಲ್ಲ. ಯಾವುದೇ ಕಾರಣಕ್ಕೂ ಇಂದಿನ ಕ್ರಿಯಾಯೋಜನೆಗಳನ್ನು ಅನುಮೋದಿಸಲ್ಲ ಎಂದು ಹಿರಿಯ ಸದಸ್ಯ ಯೋಗೇಶ್ ಹೇಳಿದರು. ಗಾಂಧೀನಗರದ ಯಲ್ಲಮ್ಮ ದೇವಾಲಯದ ಎದುರಿನ ಯು.ಜಿ.ಡಿ. ಛೇಂಬರ್‌ಗೆ ಬಿದ್ದು ಮೂವರು ಕೈ ಮುರಿದುಕೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದಿದೆ, ಈಗಲೂ ಯುಜಿಡಿ ನೀರು ಮನೆಗೆ ಬರುತ್ತಿದೆ ಎಂದು ನಹೀಮ್ ಪ್ರಸ್ತಾಪಿಸಿದರು.

    ಕರೊನಾ ಲಸಿಕಾ ಕಾರ್ಯದಲ್ಲಿ ಕೈ ಜೋಡಿಸುವ ನಗರಸಭಾ ಸದಸ್ಯರು ಮತ್ತು ಸಿಬ್ಬಂದಿ, ಜನಸಾಮಾನ್ಯರಂತೆ ಸಾಲಿನಲ್ಲಿ ನಿಂತು ಲಸಿಕೆ ಪಡೆಯುವಂತಾಗಿರುವುದು ದುರದೃಷ್ಟ. ಇನ್ನಾದರೂ ಮೂರು ವಾರ್ಡ್‌ಗಳನ್ನು ಒಗ್ಗೂಡಿಸಿ ಪ್ರತ್ಯೆಕವಾಗಿ ಲಸಿಕೆ ನೀಡಲು ಕ್ರಮ ಕೈಗೊಳ್ಳಿ.
    ಎಂ.ಎಸ್.ಯೋಗೀಶ್ 7ನೇ ವಾರ್ಡ್ ಸದಸ್ಯ

    ನಾನು ಅಧಿಕಾರಿಗಳ ಕೈಗೊಂಬೆ ಎಂಬ ಮಾತನ್ನು ವಾಪಸ್ ಪಡೆಯಿರಿ, ನಾನು ಪ್ರಾಮಾಣಿಕ, ಸ್ವಾಭಿಮಾನಿ. ನಾನೆಂದೂ ಅಭಿವೃದ್ಧಿಪರ, ಲಾಬಿ ಪರ ಅಲ್ಲ. ಸಿಎಂ ಬಂದಿದ್ದಾಗ ಸದಸ್ಯರನ್ನು ಒಳಗೆ ಬಿಡುವ ತೀರ್ಮಾನ ಪೊಲೀಸ್ ಇಲಾಖೆಯ ಶಿಷ್ಟಾಚಾರದಂತೆ ಆಗಿದೆ.
    ಪಿ.ಜೆ.ರಾಮಮೋಹನ್ ನಗರಸಭೆ ಅಧ್ಯಕ್ಷ

    ಮೊದಲು ಸದಸ್ಯರ ೆನ್ ಕಾಲ್ ಸ್ವೀಕರಿಸಿ ಸಮಸ್ಯೆ ಆಲಿಸಿ. ನಿಮ್ಮಿಷ್ಟದಂತೆ ವರ್ತಿಸಲು ಸಾಧ್ಯವಿಲ್ಲ. ಜನ ಪ್ರತಿನಿಧಿಗಳಿಗೆ ಗೌರವ ಕೊಡುವುದನ್ನು ಕಲಿಯಿರಿ.
    ಸೊಪ್ಪು ಗಣೇಶ್ ನಗರಸಭೆ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts