More

    ಹೊಳೆಆಲೂರ ಎಪಿಎಂಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

    ರೋಣ: ಹೊಳೆಆಲೂರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಪ್ರಸ್ತುತ ಆಡಳಿತಾವಧಿಯ ಕೊನೆಯ 20 ತಿಂಗಳು ಕಾಲದ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆಗೆ ಮೇ 27ರಂದು ಚುನಾವಣೆ ನಿಗದಿಯಾಗುತ್ತಿದ್ದಂತೆಯೇ ಆಕಾಂಕ್ಷಿಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

    2017ರಲ್ಲಿ ನಡೆದ ಎಪಿಎಂಸಿ ನಿರ್ದೇಶಕರ ಚುನಾವಣೆಯಲ್ಲಿ 14 ಸ್ಥಾನಗಳ ಪೈಕಿ 8ರಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತ ಪಡೆದಿತ್ತು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದುದರಿಂದ ತಮ್ಮ ಪಕ್ಷದ ಮೂವರನ್ನು ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡುವ ಮೂಲಕ 11 ಸ್ಥಾನ ಪಡೆದು ಬಿಜೆಪಿಯನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಮಾಡಿತ್ತು.

    ಕೆಲ ದಿನಗಳ ನಂತರ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಆಗ, ಬಿಜೆಪಿಯು ತಮ್ಮ ಪಕ್ಷದ ಮೂವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡಿತು. ಅಲ್ಲದೆ, ಕಾಂಗ್ರೆಸ್​ನಿಂದ ಒಬ್ಬ ಎಪಿಎಂಸಿ ಸದಸ್ಯ ಬಿಜೆಪಿಗೆ ಸೇರಿದ. ಹೀಗಾಗಿ, ಈಗ ಎಪಿಎಂಸಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದೆ.

    ಕಾಂಗ್ರೆಸ್​ನಲ್ಲಿದ್ದಾಗ ಎಪಿಎಂಸಿ ಅಧ್ಯಕ್ಷ ಸ್ಥಾನ ಸಿಗಲಿಲ್ಲ ಎನ್ನುವ ಕಾರಣಕ್ಕೆ 2018ರ ಮೇ ತಿಂಗಳಲ್ಲಿ ರಾಜಣ್ಣ ಹೂಲಿ ಅವರು ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರ್ಪಡೆಯಾಗಿದ್ದರು. ಅವರೀಗ ಎಪಿಎಂಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

    ಇನ್ನು ಸಚಿವ ಸಿ.ಸಿ. ಪಾಟೀಲರ ಆಪ್ತ, ರಡ್ಡಿ ಸಮಾಜದ ಮುಖಂಡ, ಸವಡಿ ಕ್ಷೇತ್ರದ ಎಪಿಎಂಸಿ ಸದಸ್ಯ ವಸಂತ ಮೇಟಿ ಅವರು ಸಹ ಅಧ್ಯಕ್ಷ ಸ್ಥಾನದ ಪ್ರಬಲ ಆಕ್ಷಾಂಕಿಯಾಗಿದ್ದಾರೆ. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸಚಿವ ಸಿ.ಸಿ. ಪಾಟೀಲ ಹಾಗೂ ಶಾಸಕ ಕಳಕಪ್ಪ ಬಂಡಿ ಅವರಿಗೆ ತಲೆನೋವಾಗಿ ಪರಿಣಮಿಸಿದೆ.

    ಆಕಾಂಕ್ಷಿಗಳಿಗೆ ಸೂಚನೆ: ಎಪಿಎಂಸಿ ಅಧ್ಯಕ್ಷರ ಹುದ್ದೆಗಾಗಿ ರಾಜಣ್ಣ ಹೂಲಿ ಹಾಗೂ ವಸಂತ ಮೇಟಿ ಅವರ ನಡುವೆ ತೀವ್ರ ಪೈಪೋಟಿ ನಡೆದಿದೆ. ಇಬ್ಬರೂ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಸಚಿವ ಸಿ.ಸಿ. ಪಾಟೀಲ ಅವರ ಮನೆಯಲ್ಲಿ ಸಿ.ಸಿ. ಪಾಟೀಲ, ಶಾಸಕ ಕಳಕಪ್ಪ ಬಂಡಿ ಹಾಗೂ ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ಸೇರಿ ಕೆಲ ಮುಖಂಡರು ಈ ಬಗ್ಗೆ ಸಭೆ ನಡೆಸಿ ರ್ಚಚಿಸಿದ್ದಾರೆ. ‘ಇಬ್ಬರ ಪೈಕಿ ಒಬ್ಬರ ಹೆಸರನ್ನು ಸೂಚಿಸಲಾಗುತ್ತದೆ. ಆಕಾಂಕ್ಷಿಗಳು ಅದಕ್ಕೆ ಬದ್ಧರಾಗಿರಬೇಕು’ ಎನ್ನುವ ಸ್ಪಷ್ಟ ಸಂದೇಶ ರವಾನಿಸಲಾಗಿದೆ ಎನ್ನಲಾಗಿದೆ.

    ಇಬ್ಬರಿಗೂ ಅಧಿಕಾರ ಹಂಚಿಕೆ: ಇಬ್ಬರ ಮಧ್ಯೆ ತೀವ್ರ ಪೈಪೋಟಿ ನಡೆದಿರುವುದರಿಂದ ನಾಯಕರು ಇಬ್ಬರನ್ನೂ ಸಮಾಧಾನಪಡಿಸಲು ಅಧಿಕಾರ ಹಂಚಿಕೆಯ ಸೂತ್ರ ಅನುಸರಿಸುವ ಸಾಧ್ಯತೆ ಇದೆ. ಕೊನೆಯ ಹಂತದ 20 ತಿಂಗಳ ಅವಧಿಗೆ ಆಕಾಂಕ್ಷಿಗಳಿಬ್ಬರಿಗೂ ತಲಾ ಹತ್ತು ತಿಂಗಳ ಅಧಿಕಾರ ಚಲಾಯಿಸಲು ಅವಕಾಶ ನೀಡುವ ಸಾಧ್ಯತೆಗಳಿವೆ. ಯಾರಿಗೆ ಮೊದಲ ಅವಕಾಶ ಎನ್ನುವುದು ಕುತೂಹಲ ಮೂಡಿಸಿದೆ ಎನ್ನುತ್ತಾರೆ ಪಕ್ಷದ ಕೆಲ ಮುಖಂಡರು.

    ಮೊದಲ ಅವಧಿಗೆ ನಾನು ಎಪಿಎಂಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೆ, ಆಗ, ನನಗೆ ಎರಡನೇ ಅವಧಿಗೆ ನೀಡುವುದಾಗಿ ಹೇಳಿ, ಎರಡನೇ ಅವಧಿಯಲ್ಲಿಯೂ ಅಧಿಕಾರ ನೀಡದ ಕಾರಣ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದೇನೆ. ಈ ಮೂಲಕ ರೋಣ ಮತ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸುವಲ್ಲಿ ಶ್ರಮಿಸಿದ್ದೇನೆ. ಇದೆಲ್ಲವನ್ನು ಪರಿಗಣಿಸಿ ಮುಖಂಡರು ಈ ಸಲ ಎಪಿಎಂಸಿ ಅಧ್ಯಕ್ಷ ಸ್ಥಾನ ನೀಡುವ ಸಂಪೂರ್ಣ ವಿಶ್ವಾಸವಿದೆ.
    | ರಾಜಣ್ಣ ಹೂಲಿ, ಎಪಿಎಂಸಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿ

    ರೋಣ ಹಾಗೂ ನರಗುಂದ ಮತ ಕ್ಷೇತ್ರದಲ್ಲಿ ರಡ್ಡಿ ಸಮಾಜದ ಮುಖಂಡರೇ ಬಹುಪಾಲು ಆಳ್ವಿಕೆ ನಡೆಸಿದ್ದಾರೆ. ನಾನು ಜಾತಿ ರಾಜಕಾರಣ ಮಾಡದೆ ಮೂವತ್ತು ವರ್ಷಗಳಿಂದ ಸಿ.ಸಿ. ಪಾಟೀಲರೊಂದಿಗೆ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. ಅದನ್ನು ಪರಿಗಣಿಸಿ ಈ ಸಲ ಸಿ.ಸಿ. ಪಾಟೀಲರು ನನಗೆ ಎಪಿಎಂಸಿ ಅಧ್ಯಕ್ಷ ಸ್ಥಾನ ನೀಡುವುದು ಬಹುತೇಕ ಖಚಿತ.
    | ವಸಂತ ಮೇಟಿ, ಎಪಿಎಂಸಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts