More

    ಹೊರಬಿತ್ತು ಅಭ್ಯರ್ಥಿಗಳ ಹಣೆಬರಹ

    ಕೋಲಾರ: ತಾಲೂಕಿನ 32 ಗ್ರಾಪಂಗಳ 569 ಸ್ಥಾನಗಳ ಪೈಕಿ 59 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಚುನಾವಣೆ ನಡೆದ 510 ಸದಸ್ಯ ಸ್ಥಾನಗಳ ಮತಗಳ ಎಣಿಕೆ ಬುಧವಾರ ನಡೆದು ಅಭ್ಯರ್ಥಿಗಳ ಹಣೆಬರಹ ಹೊರಬಿದ್ದಿದೆ.

    ನಗರದ ಸರ್ಕಾರಿ ಬಾಲಕರ, ಬಾಲಕಿಯರ ಪಿಯು ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೂರು ಕೇಂದ್ರದಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿತ್ತು.

    ಬೆಳಗ್ಗೆ 8 ಗಂಟೆಗೆೆ ಮತ ಎಣಿಕೆ ಪ್ರಕ್ರಿಯೆಗೆ ಆಯಾ ಪಂಚಾಯಿತಿ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಸಹಾಯಕ ಮೇಲ್ವಿಚಾರಕರು, ಎಣಿಕಾ ಸಿಬ್ಬಂದಿ ಕೊಠಡಿಯಲ್ಲಿ ಹಾಜರಾಗಿದ್ದರು. ಅಭ್ಯರ್ಥಿಗಳು ಇಲ್ಲವೇ ಏಜೆಂಟರಿಗೆ ಕೇಂದ್ರದೊಳಕ್ಕೆ ಪ್ರವೇಶ ಕಲ್ಪಿಸಲಾಗಿತ್ತು.
    ಮೊದಲು ಅಂಚೆ ಮತಗಳ ಎಣಿಕೆ ನಡೆಯಿತು. ನಂತರ ಮತಪೆಟ್ಟಿಗೆಗಳ ಮೊಹರು ಒಡೆದು ತಲಾ 25 ಮತಪತ್ರಗಳ ಬಂಡಲ್ ಮಾಡಿ ಎಣಿಕೆ ಮಾಡಲಾಯಿತು.

    ಜಿಲ್ಲಾಧಿಕಾರಿ ಭೇಟಿ: ಬೆಳಗ್ಗೆ 10ರ ವೇಳೆಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಎಣಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಎಣಿಕೆಯಲ್ಲಿ ಲೋಪದೋಷಗಳಾಗದಂತೆ ಎಚ್ಚರ ವಹಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು. ತಹಸೀಲ್ದಾರ್ ಶೋಭಿತಾ, ಚುನಾವಣಾ ತಹಸೀಲ್ದಾರ್ ನಾಗವೇಣಿ ಹಾಜರಿದ್ದರು.

    ಅಸಮಾಧಾನ: ಎಣಿಕೆ ಆರಂಭಕ್ಕೂ ಮುನ್ನ ವಿವಿಧ ಪಂಚಾಯಿತಿಗಳ ಅಭ್ಯರ್ಥಿ, ಏಜೆಂಟರು ಕೇಂದ್ರದ ಆವರಣದೊಳಗೆ ಆಸೀನರಾಗಿದ್ದರು. ಮತ ಎಣಿಕೆ ಆರಂಭಿಸುವ ಮುನ್ನ ಎಣಿಕೆಗೆ ಕೈಗೆತ್ತಿಕೊಂಡಾಗ ಕ್ಷೇತ್ರದ ಅಭ್ಯರ್ಥಿ ಅಥವಾ ಏಜೆಂಟರು ಯಾರಾದರು ಒಬ್ಬರು ಉಳಿದು ಉಳಿದವರೆಲ್ಲರೂ ಹೊರ ಹೋಗುವಂತೆ ಸೂಚಿಸಿದ್ದಕ್ಕೆ ಅಸಮಾಧಾನ ವ್ಯಕ್ತವಾಯಿತಾದರೂ ರಂಪಾಟ ಮಾಡದೆ ಸಹಕರಿಸಿದರು.
    ಎಣಿಕಾ ಕೇಂದ್ರದ ಹೊರಗೆ ಏಜೆಂಟರು, ಅಭ್ಯರ್ಥಿಗಳಿಗೆ ಕುಳಿತುಕೊಳ್ಳಲು ಪೆಂಡಾಲ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅವಶ್ಯವಿರುವಷ್ಟು ಕುರ್ಚಿ ಇರಲಿಲ್ಲವಾದ್ದರಿಂದ ನೂರಾರು ಮಂದಿ ನಿಂತುಕೊಂಡೇ ಫಲಿತಾಂಶದ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದ ದೃಶ್ಯ ಕಂಡುಬಂತು.

    ಬಿಗಿ ಬಂದೋಬಸ್ತ್: ಮತ ಎಣಿಕಾ ಕೇಂದ್ರದ ಸುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಎಣಿಕಾ ಕೇಂದ್ರದ ನಾಲ್ಕು ದಿಕ್ಕಿನಲ್ಲೂ 100 ಮೀಟರ್ ವ್ಯಾಪ್ತಿಯಿಂದ ಹೊರಗೆ ತಡೆಬೇಲಿ ನಿರ್ಮಿಸಿ ಸಾರ್ವಜನಿಕರನ್ನು ನಿರ್ಬಂಧಿಸಲಾಗಿತ್ತು. ಅಭ್ಯರ್ಥಿಗಳು ಹಾಗೂ ಎಣಿಕಾ ಏಜೆಂಟರು ಹೊರತುಪಡಿಸಿ ಉಳಿದವರಿಗೆ ಕೇಂದ್ರದ ಆವರಣದೊಳಗೆ ಪ್ರವೇಶ ಇಲ್ಲದಂತೆ ಬಿಗಿ ವ್ಯವಸ್ಥೆ ಮಾಡಲಾಗಿತ್ತು.

    ಚುರುಗುಟ್ಟಿದ ಹೊಟ್ಟೆ: ಎಣಿಕಾ ಸಿಬ್ಬಂದಿಗೆ ತಾಲೂಕು ಆಡಳಿತದಿಂದಲೇ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟದ ಜವಾಬ್ದಾರಿ ಹೊತ್ತವರು ಮಧ್ಯಾಹ್ನ 1.30ರ ವೇಳೆಗೆ ಅನ್ನ ತಂದಿಟ್ಟಿದ್ದರು. 2 ಗಂಟೆಯಾದರೂ ಸಾಂಬಾರ್, ಪ್ಲೇಟ್ ಬಂದಿರಲಿಲ್ಲವಾದ್ದರಿಂದ ಎಣಿಕಾ ಸಿಬ್ಬಂದಿ ತುಂಬಾ ಹೊತ್ತು ಹಸಿದ ಹೊಟ್ಟೆಯಲ್ಲೇ ಕಾಯವಂತಾಗಿತ್ತು.

    ವಿಜೇತರ ಹರ್ಷೋದ್ಘಾರ: ಮತ ಎಣಿಕೆ ಪ್ರಕ್ರಿಯೆ ಸುಗಮ ಹಾಗೂ ಶಾಂತಿಯುವಾಗಿ ನಡೆಸುವ ದೃಷ್ಟಿಯಿಂದ 144 ಸೆಕ್ಷನ್ ಜಾರಿ ಮಾಡಿ ವಿಜಯೋತ್ಸವ ನಿಷೇಧಿಸಲಾಗಿತ್ತು. ಆಯಾ ಪಂಚಾಯಿತಿಗಳ ಫಲಿತಾಂಶವನ್ನು ಧ್ವನಿವರ್ಧಕದ ಮೂಲಕ ೋಷಿಸುತ್ತಿದ್ದಂತೆ ತಡೆಬೇಲಿಯಾಚೆ ನೆರೆದಿದ್ದ ವಿಜೇತರ ಬೆಂಬಲಿಗರು ಹರ್ಷೋದ್ಘಾರದೊಂದಿಗೆ ಸಂತಸ ವ್ಯಕ್ತಪಡಿಸಿದರಲ್ಲದೆ ವಿಜೇತ ಅಭ್ಯರ್ಥಿಗೆ ಹೂವಿನ ಹಾರ ಹಾಕಿ ಅಭಿನಂದಿಸಿದರು.

    ಪರಸ್ಪರ ಅಂತರ ಮಾಯ: ಮತ ಎಣಿಕೆ ಹಿನ್ನೆಲೆಯಲ್ಲಿ ಗ್ರಾಮಗಳಿಂದ ಬಂದಿದ್ದ ಅಭ್ಯರ್ಥಿಗಳ ಬೆಂಬಲಿಗರು, ಸಾರ್ವಜನಿಕರಲ್ಲಿ ಕರೊನಾ ಆತಂಕ ಕಾಣಿಸಲಿಲ್ಲ. ಪರಸ್ಪರ ಅಂತರ ಮಾಯವಾಗಿತ್ತು. ಎಣಿಕಾ ಕೇಂದ್ರದೊಳಗೆ ಕೆಲ ಅಭ್ಯರ್ಥಿ ಹಾಗೂ ಏಜೆಂಟರು ಮಾಸ್ಕ್ ತೆಗೆದಿರಿಸಿದ್ದನ್ನು ಗಮನಿಸಿದ ಡಿಸಿ ಸತ್ಯಭಾಮ ಮಾಸ್ಕ್ ಧರಿಸುವಂತೆ ತಾಕೀತು ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts