More

    ಹೊರಗಿನಿಂದ ಬಂದವರಿಗೆ ಕ್ವಾರಂಟೈನ್ ಅವಧಿ ಕಡ್ಡಾಯ

    ಔರಾದ್: ಕ್ವಾರಂಟೈನ್ನಲ್ಲಿದ್ದ ವ್ಯಕ್ತಿಗಳಿಗೆ ಅವಧಿಗೆ ಮುನ್ನ ಮನೆಗೆ ಕಳುಹಿಸಿದ ಅಧಿಕಾರಿಗಳ ಎಡವಟ್ಟಿನಿಂದ ಮುಧೋಳ್ (ಕೆ) ಗ್ರಾಮದ ಒಂದೇ ಕುಟುಂಬದ ನಾಲ್ವರಿಗೆ ಕರೊನಾ ಪಾಸಿಟಿವ್ ಬಂದಿದೆ. ಪ್ರತಿಯೊಬ್ಬರೂ ಇಂಥ ಯಾವುದೇ ಪ್ರಕರಣ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸೂಚಿಸಿದರು.
    ಶನಿವಾರ ತಾಪಂ ಕಚೇರಿಯಲ್ಲಿ ಅಧಿಕಾರಿಗಳ ತುತರ್ು ಸಭೆ ನಡೆಸಿದ ಅವರು, ಕರೊನಾ ಕೆಲಸದಲ್ಲಿ ಅಧಿಕಾರಿಗಳು ನಿರ್ಲಕ್ಷೃ ವಹಿಸಬಾರದು. ಮುಧೋಳ(ಕೆ)ದಲ್ಲಿ ಇಂಥ ಪ್ರಕರಣ ವರದಿಯಾಗದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
    ಹೊರ ರಾಜ್ಯಗಳಿಂದ ಬರುವವರಿಗೆ ಕಡ್ಡಾಯವಾಗಿ ಕ್ವಾರಂಟೈನ್ನಲ್ಲಿ ಇಡಬೇಕು. ಕ್ವಾರಂಟೈನ್ ಅವಧಿ ಮುಗಿಯುವವರೆಗೆ ನಿಗಾ ವಹಿಸಬೇಕು. ಕ್ವಾರಂಟೈನ್ ಬಳಿಕವೂ ಗ್ರಾಮದಲ್ಲಿ ಓಡಾಡುವಂತಿಲ್ಲ. ಅವರ ಮೇಲೆ ನಿಗಾ ವಹಿಸಬೇಕು ಎಂದರು.
    ಕ್ವಾರಂಟೈನ್ ಕೇಂದ್ರಗಳಲ್ಲಿರುವ ಎಲ್ಲರಿಗೆ ಸರಿಯಾದ ಸಮಯಕ್ಕೆ ಗುಣಮಟ್ಟದ ಊಟ, ನೀರು ಹಾಗೂ ಶೌಚಗೃಹ ವ್ಯವಸ್ಥೆ ಮಾಡಬೇಕು. ಗಡಿ ಚೆಕ್ ಪೋಸ್ಟ್ ಗಳಲ್ಲಿ ಸೇವೆ ಮಾಡುತ್ತಿರುವ ಸಿಬ್ಬಂದಿಗೆ ಮೂಲಸೌಲಭ್ಯ ಒದಗಿಸಬೇಕು. ಹೊರಗಿನಿಂದ ಬಂದ ಜನರಿರುವ ಕ್ವಾರಂಟೈನ್ ಸ್ಥಳಗಳಿಗೆ ಸಂದರ್ಶನಕ್ಕೆ ತೆರಳುವಾಗ ಕಡ್ಡಾಯವಾಗಿ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿರಬೇಕು ಎಂದು ನಿರ್ದೇಶನ ನೀಡಿದರು.
    ಪಟ್ಟಣದಲ್ಲಿ ಹಲವಾರು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಕೂಡಲೇ ಸಮರ್ಪಕ ಪೂರೈಕೆ ವ್ಯವಸ್ಥೆ ಮಾಡುವಂತೆ ಪಪಂ ಇಒಗೆ ಸೂಚಿಸಿದರು. ಗ್ರಾಮಗಳಲ್ಲಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಅಗತ್ಯ ಬಿದ್ದರೆ ಖಾಸಗಿಯಿಂದ ನೀರು ಪಡೆದು ವ್ಯವಸ್ಥೆ ಮಾಡಬೇಕು ಎಂದರು.
    ಔರಾದ್ ತಹಸೀಲ್ದಾರ್ ಚಂದ್ರಶೇಖರರಾವ, ಕಮಲನಗರ ತಹಸೀಲ್ದಾರ್ ರಮೇಶ ಪೆದ್ದೆ, ಡಿವೈಎಸ್ಪಿ ಡಾ.ದೇವರಾಜ್, ತಾಪಂ ಇಒ ಮಾಣಿಕರಾವ ಪಾಟೀಲ್, ಟಿಎಚ್ಒ ಡಾ.ಶರಣಯ್ಯ ಸ್ವಾಮಿ, ಡಾ.ಮಹೇಶ ಬಿರಾದಾರ, ತಾಪಂ ಸಹಾಯಕ ಯೋಜನಾಧಿಕಾರಿ ಶಿವಕುಮಾರ ಘಾಟೆ ಇತರರಿದ್ದರು.

    ಮಳೆಗಾಲ ಆರಂಭವಾಗಲು ಕೆಲದಿನ ಬಾಕಿ ಇದ್ದು, ಕೃಷಿ ಇಲಾಖೆ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೀಜ ವಿತರಣಾ ಕೇಂದ್ರ ತೆರೆಯಬೇಕು. ಕರೊನಾ ಹಿನ್ನೆಲೆಯಲ್ಲಿ ಬೀಜ, ಗೊಬ್ಬರ ವಿತರಣೆ ವೇಳೆ ಪರಸ್ಪರ ಅಂತರ ಕಾಪಾಡಲು ನಿಗಾ ವಹಿಸಬೇಕು.
    | ಪ್ರಭು ಚವ್ಹಾಣ್
    ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts