More

    ಮಕ್ಕಳ ಬಾಳಲ್ಲಿ ಅರಿವಿನ ಅರುಣೋದಯ

    ಗದಗ: ಮನೆತನದ ಇತಿಹಾಸ ಬರೆದು ಹೇಳುವ ಅಲೆಮಾರಿ ಹೆಳವರ ಮಕ್ಕಳಲ್ಲಿ ಸೋಮವಾರದಿಂದ ಅರಿವಿನ ಅರುಣೋದಯವಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳ ಸಹಕಾರದಿಂದ 30 ಹೆಳವರು ಮಕ್ಕಳು ಶಾಲೆಯ ಮೆಟ್ಟಿಲು ಹತ್ತಿದ್ದಾರೆ.

    ಊರಿಂದ ಊರಿಗೆ ತೆರಳಿ ಕುಟುಂಬದ ಇತಿಹಾಸ ಹೇಳುವ ಹೆಳವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಮನಗಂಡು ಹುಲಕೋಟಿ ಕೃಷ್ಣಾ ಕಾಲನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕ ಎ.ವಿ. ಪ್ರಭು ಅವರು ಹುಲಕೋಟಿಯಲ್ಲಿ ಹಾಕಿದ್ದ ಹೆಳವರ ಟೆಂಟ್​ಗಳಿಗೆ ಭೇಟಿ ನೀಡಿದ್ದರು. ಹೆಳವರ ಮಕ್ಕಳ ಪಾಲಕರಿಗೆ ಶಿಕ್ಷಣದ ಮಹತ್ವ ಹಾಗೂ ಮಕ್ಕಳ ಭವಿಷ್ಯ ಕುರಿತು ವಿವರಿಸಿ, ಅವರ ಮನವೊಲಿಸಿದರು.

    ಮುಖ್ಯಾಧ್ಯಾಪಕರ ಕಾರ್ಯಕ್ಕೆ ಸಾಥ್ ನೀಡಿದ ಡಿಡಿಪಿಐ ಜಿ.ಎಂ. ಬಸವಲಿಂಗಪ್ಪ, ಡಯಟ್ ಪ್ರಾಚಾರ್ಯ ಎಸ್.ಡಿ. ಗಾಂಜಿ, ಗ್ರಾಮೀಣ ಬಿಇಒ ವಿ.ವಿ. ನಡುವಿನಮನಿ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿ.ಎಂ. ಹಿರೇಮಠ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಆರ್. ಬಂಡಿ ಸ್ಥಳಕ್ಕೆ ಭೇಟಿ ನೀಡಿ, ಅಲೆಮಾರಿ ಹೆಳವರ ಕುಟುಂಬದ ಪಾಲಕರಿಗೆ ಶಿಕ್ಷಣದ ಮಹತ್ವ ತಿಳಿಸಿದರು. ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪ್ರೇರೇಪಿಸಿದರು. ಮಕ್ಕಳೊಂದಿಗೆ ಹಾಡಿ, ನಕ್ಕು ನಲಿದು, ಅವರಿಗೆ ಹಾಲು ಕುಡಿಸಿ, ಊಟ ಬಡಿಸಿದರು. ಶಂಕ್ರಪ್ಪ ಹೆಳವರ, ಸದ್ಗುರು ಹೆಳವರ, ಹನುಮಂತಪ್ಪ ಹೆಳವರ, ಬಸವರಾಜ ಹೆಳವರ ಮತ್ತಿತರರು ಇದ್ದರು.

    ಮಕ್ಕಳಿಗೆ ಶುಕ್ರದೆಸೆ ಶುರು: ನಾವು ಅಲೆಮಾರಿ ಹೆಳವರು, ಊರಿನ ಪ್ರತಿ ಕುಟುಂಬದ ಇತಿಹಾಸವನ್ನು ನಾವು ತಕ್ಕ ಮಟ್ಟಿಗೆ ನಮ್ಮ ತಿಳಿವಳಿಕೆಯಂತೆ ಬರೆದುಕೊಂಡು ಮನೆಮನೆಗೆ ಹೋಗಿ ಇತಿಹಾಸ ತಿಳಿಸುತ್ತೇವೆ. ಅವರ ಕೊಟ್ಟ ಕಾಳು ಕಡಿಯಲ್ಲಿ ಉಪಜೀವನ ಮಾಡುತ್ತೆವೆ. ಮಕ್ಕಳನ್ನು ಶಾಲೆಗೆ ಕಳಿಸುವ ಗೋಜಿಗೆ ಹೋಗಿಲ್ಲ. ಇಂದು ನಮ್ಮ ಮಕ್ಕಳಿಗೆ ಶುಕ್ರದೆಸೆ ಶುರುವಾಯಿತು ಎಂದು ಹೆಳವರ ಕುಟುಂಬದ ಮುಖ್ಯಸ್ಥ ಮಹಾದೇವಪ್ಪ ಹೆಳವರ ಹರ್ಷ ವ್ಯಕ್ತಪಡಿಸಿದರು.

    ಶಾಲೆಯ ಸಮೀಪ 30 ಗುಡಿಸಲು ಹಾಕಿಕೊಂಡು ವಾಸಿಸುತ್ತಿರುವ ಹೆಳವರ ಮಕ್ಕಳನ್ನು ಗಮನಿಸಿ ಅವರನ್ನು ಶಾಲೆಗೆ ಕರೆತರಬೇಕು ಎಂಬ ಯೋಚನೆ ಬಂತು. ಅವರ ಟೆಂಟ್​ಗೆ ಭೇಟಿ ನೀಡಿ ಮಕ್ಕಳನ್ನು ಶಾಲೆಗೆ ಕಳಿಸಬೇಕು ಎಂದು ಪಾಲಕರಿಗೆ ಮನವಿ ಮಾಡಿದೆ. ಆರಂಭದಲ್ಲಿ ಅನುಮಾನಗೊಂಡ ಹೆಳವರು ಹಿಂದೇಟು ಹಾಕಿದರು. ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತಂದು ಸ್ಮಾರ್ಟ್​ಬೋರ್ಡ್​ನಲ್ಲಿ ಚಿತ್ರಸಹಿತ ಕಥೆ, ಹಾಡು ತೋರಿಸಿ ಕಲಿಸಿದಾಗ ಮಕ್ಕಳು ಸ್ಪಂದಿಸಿದ ರೀತಿ ಆಶ್ವರ್ಯ ತರಿಸಿತು. ಅವರಲ್ಲಿ ಕಲಿಯುವ ಉತ್ಸಾಹ, ಸಾಮರ್ಥ್ಯ ಇದೆ ಎಂಬುದು ಗೊತ್ತಾಯಿತು.
    | ಎ.ವಿ. ಪ್ರಭು, ಮುಖ್ಯಾಧ್ಯಾಪಕ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹುಲಕೋಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts